ಕಳೆದ 5 ತಿಂಗಳಿಂದ ಒಂದೂ ಮನೆಯಲ್ಲಿಯೂ ಕಳವಾಗಿಲ್ಲ, ಅಂಕೋಲಾ ಪೊಲೀಸರ ಹೊಸ ಪ್ರಯೋಗ ಸಕ್ಸಸ್!

Gowthami K   | Kannada Prabha
Published : Nov 02, 2026, 11:01 AM IST
Uttara Kannada Ankola Police

ಸಾರಾಂಶ

ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 'ಲಾಕ್ಹೌಸ್ ಬೀಟ್ ಸಿಸ್ಟಮ್' ಜಾರಿಯಾದ ಕಳೆದ ಐದು ತಿಂಗಳಿನಿಂದ ಒಂದೇ ಒಂದು ಮನೆ ಕಳವು ಪ್ರಕರಣ ವರದಿಯಾಗಿಲ್ಲ. ಊರಿಗೆ ಹೋಗುವ ಮುನ್ನ ಸಾರ್ವಜನಿಕರು ವಾಟ್ಸ್ಆ್ಯಪ್ ಮೂಲಕ ಮಾಹಿತಿ ನೀಡಿದರೆ, ಪೊಲೀಸರು ರಾತ್ರಿ ಗಸ್ತಿನ ವೇಳೆ ಆ ಮನೆಗಳಿಗೆ ಭೇಟಿ ನೀಡಿ ಭದ್ರತೆ ಒದಗಿಸುತ್ತಾರೆ. ಈ ಯೋಜನೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ವರದಿ: ರಾಘು ಕಾಕರಮಠ

ಅಂಕೋಲಾ: ಐದು ತಿಂಗಳ ಹಿಂದೆ ಪೊಲೀಸ್ ಇಲಾಖೆ ಜಾರಿಗೆ ತಂದಿರುವ ‘ಲಾಕ್ಹೌಸ್ ಬೀಟ್ ಸಿಸ್ಟಮ್’ ಯೋಜನೆಯು ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿದ್ದು, ಕಳೆದ ಐದು ತಿಂಗಳಿನಿಂದ ಒಂದೇ ಒಂದು ಮನೆ ಕಳವು ಪ್ರಕರಣವೂ ವರದಿಯಾಗಿಲ್ಲ.

ಪೊಲೀಸ್ ಇಲಾಖೆಯ ರಾತ್ರಿ ಗಸ್ತು ವ್ಯವಸ್ಥೆಯ ಚುರುಕು ಕಾರ್ಯಾಚರಣೆಯಿಂದ ನಾಗರಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದ್ದು, ಯೋಜನೆಯ ಪರಿಣಾಮಕಾರಿತ್ವಕ್ಕೆ ಸಾಕ್ಷಿಯಾಗಿ ನಿಂತಿದೆ.

ರಾಜ್ಯ ಪೊಲೀಸ್ ಇಲಾಖೆ ಜಾರಿಗೆ ತಂದಿರುವ ‘ಲಾಕ್ಹೌಸ್ ಬೀಟ್ ಸಿಸ್ಟಮ್’ ಯೋಜನೆಯಡಿ ಮನೆಯಿಂದ ಹೊರಹೋಗುವವರು ಪೊಲೀಸರಿಗೆ ಮಾಹಿತಿ ನೀಡಿದರೆ ಸಾಕು. ಅವರ ಮನೆಯ ಭದ್ರತೆಯ ಹೊಣೆ ಪೊಲೀಸ್ ಇಲಾಖೆಯದ್ದಾಗಿರುತ್ತದೆ. ಮಾಹಿತಿ ಪಡೆದ ಪೊಲೀಸರು ರಾತ್ರಿ ಗಸ್ತಿನ ವೇಳೆ ಅಂತಹ ಮನೆಗಳ ಮೇಲೆ ವಿಶೇಷ ನಿಗಾ ಇರಿಸಿ, ಕನಿಷ್ಠ ಎರಡು ಬಾರಿ ಭೇಟಿ ನೀಡಿ ಪರಿಶೀಲಿಸುತ್ತಾರೆ. ಇದರಿಂದ ಮನೆಗಳ್ಳರಿಗೆ ಕನ್ನ ಹಾಕಲು ಅವಕಾಶವೇ ಇಲ್ಲದಂತಾಗಿದೆ.

ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಐದು ತಿಂಗಳಿನಿಂದ ಒಂದೇ ಒಂದು ಮನೆ ಕಳವು ಪ್ರಕರಣ ದಾಖಲಾಗದಿರುವುದು ವಿಶೇಷ. ಈ ಹಿಂದಿನ ಅಂಕಿಅಂಶ ಗಮನಿಸಿದೆ ಅಂಕೋಲಾದಲ್ಲಿ ಸಾಕಷ್ಟು ಕಳ್ಳತನ ವರದಿಯಾದ ಬಗ್ಗೆ ಅಂಕಿಅಂಶ ಸಾಬೀತುಪಡಿಸುತ್ತದೆ.

ಈ ಹಿಂದೆ ಮನೆಗೆ ಬೀಗ ಹಾಕಿ ಹೊರಹೋಗುವಾಗ ಕಳ್ಳರ ಭಯ ಕಾಡುತ್ತಿದ್ದ ನಾಗರಿಕರಿಗೆ ಇದೀಗ ಪೊಲೀಸ್ ಬೀಟ್ ವ್ಯವಸ್ಥೆ ನೆಮ್ಮದಿ ನೀಡಿದೆ. ರಾತ್ರಿ ಗಸ್ತು ಚುರುಕುಗೊಳಿಸಿ, ಮನೆಗಳ ಭದ್ರತೆಗೆ ಆದ್ಯತೆ ನೀಡಿರುವ ಪೊಲೀಸ್ ಸಿಬ್ಬಂದಿಯ ಕಾರ್ಯವೈಖರಿಗೂ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಯೋಜನೆ ಹೇಗೆ?:

ಈ ಯೋಜನೆಯ ಪ್ರಯೋಜನ ಪಡೆಯುವುದು ಕೂಡ ಸುಲಭ. ಸಾರ್ವಜನಿಕರು ಮನೆಯಿಂದ ಹೊರಡುವ ಮುನ್ನ ತಮ್ಮ ಹೆಸರು, ವಿಳಾಸ, ಗೂಗಲ್ ಲೊಕೇಶನ್, ಮನೆಯಿಂದ ಹೊರಹೋಗುವ ಹಾಗೂ ಮರಳಿ ಬರುವ ನಿಖರ ಸಮಯದ ಮಾಹಿತಿ ಮತ್ತು ಮನೆಯ ಮುಂದೆ ನಿಂತು ತೆಗೆದಿರುವ ಒಂದು ಸೆಲ್ಫಿ ಫೋಟೊವನ್ನು ಪೊಲೀಸ್ ಇಲಾಖೆಯ ವಾಟ್ಸ್ಆ್ಯಪ್ ಸಂಖ್ಯೆಗೆ ಕಳುಹಿಸಬೇಕು. ಕರ್ತವ್ಯದಲ್ಲಿರುವ ಸಿಬ್ಬಂದಿ ಈ ಮಾಹಿತಿಯನ್ನು ರಾತ್ರಿ ಬೀಟ್ ಸಿಬ್ಬಂದಿಯೊಂದಿಗೆ ಹಂಚಿಕೊಳ್ಳುತ್ತಾರೆ.

ಅದರಂತೆ ರಾತ್ರಿ ಗಸ್ತಿನಲ್ಲಿರುವ ಪೊಲೀಸರು ಮಾಹಿತಿ ನೀಡಿದವರ ಮನೆಗಳಿಗೆ ಕನಿಷ್ಠ ಎರಡು ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ಈ ಯೋಜನೆಗಾಗಿ ಪೊಲೀಸ್ ಇಲಾಖೆ ಪ್ರತ್ಯೇಕ ಮೊಬೈಲ್ ವ್ಯವಸ್ಥೆ ಮಾಡಿದೆ. ಸುರಕ್ಷತೆ ಮತ್ತು ಗೌಪ್ಯತೆಯ ದೃಷ್ಟಿಯಿಂದ ಮಾಹಿತಿ ನೀಡಿದವರು ಹಾಗೂ ಅವರ ಕುಟುಂಬದ ಸದಸ್ಯರ ವಿವರಗಳನ್ನು ಗೌಪ್ಯವಾಗಿಡಲಾಗುತ್ತದೆ.

ನೋಡಲ್ ಅಧಿಕಾರಿ ನೇಮಕ:

ಬೀಟ್ ಸಿಸ್ಟಮ್ ಗೆ ನೋಡಲ್ ಅಧಿಕಾರಿಯನ್ನು ನೇಮಿಸಿದ್ದು, ಸಾರ್ವಜನಿಕರು ಈ ವ್ಯವಸ್ಥೆಯನ್ನು ಉಪಯೋಗಿಸಿಕೊಳ್ಳಲು ವಾಟ್ಸ್ಆ್ಯಪ್ ಸಂಖ್ಯೆ 8277988303 ಸಂಪರ್ಕಿಸಿ ತಮ್ಮ ಹೆಸರು, ವಿಳಾಸ, ಗೂಗಲ್ ಲೊಕೇಶನ್, ಮನೆಯಿಂದ ಹೊರ ಹೋಗಿ ಹಿಂತಿರುಗುವ ಅವಧಿ ಹಾಗೂ ಮೊಬೈಲ್ ಸಂಖ್ಯೆಯ ಮಾಹಿತಿ ನೀಡಬೇಕು.

ಉತ್ತಮ ಸ್ಪಂದನೆ:

ತಾಲೂಕಿನಲ್ಲಿ ಕಳವು ಅಪರಾಧ ಪ್ರಕರಣ ಶೂನ್ಯಕ್ಕೆ ತಲುಪಿದೆ ಎಂದು ಹೇಳಿಕೊಳ್ಳಲು ಹರ್ಷವೆನಿಸುತ್ತದೆ. ನಮ್ಮ ಸಿಬ್ಬಂದಿ ಕೂಡ ಅಷ್ಟೇ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿರುವದರಿಂದ ಯೋಜನೆ ಯಶಸ್ವಿಯಾಗಲು ಕಾರಣವಾಗಿದೆ. ಬೀಟ್ ಸಿಸ್ಟಮ್ ಯೋಜನೆಗೆ ನಾಗರಿಕರಿಂದ ಉತ್ತಮ ಸ್ಪಂದನೆ ಹಾಗೂ ಸಹಕಾರ ವ್ಯಕ್ತವಾಗಿದೆ ಎಂದು ಅಂಕೋಲಾ ಪೊಲೀಸ್ ಠಾಣೆಯ ಸಿಪಿಐ ಚಂದ್ರಶೇಖರ ಮಠಪತಿ ತಿಳಿಸಿದರು.

ಬಾಂಧವ್ಯ ವೃದ್ಧಿ:

ಪೊಲೀಸರು ಹಾಗೂ ಸಾರ್ವಜನಿಕರ ನಡುವಿನ ಬಾಂಧವ್ಯ ವೃದ್ಧಿಯಲ್ಲಿ ‘ಲಾಕ್ಹೌಸ್ ಬೀಟ್ ಸಿಸ್ಟಂ’ ಯೋಜನೆ ಸೇತುವೆಯಾಗಿ ನಿಂತಿದೆ. ಸಾರ್ವಜನಿಕರು ಯೋಜನೆಯ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳುವ ಮೂಲಕ ಕಳ್ಳತನ ಅಪರಾಧ ಮುಕ್ತತೆಗೆ ಸಹಕರಿಸುವಂತಾಗಬೇಕು ಎಂದು ಎಸ್ಪಿ ಎಂ.ಎನ್. ದೀಪನ್ ತಿಳಿಸಿದರು.

PREV
Read more Articles on
click me!

Recommended Stories

ರಾಜ್ಯೋತ್ಸವದ ಸಂಭ್ರಮದಲ್ಲಿ ಕರ್ನಾಟಕಕ್ಕೆ ಹೊಸ ಗರಿ: ಮಲೆನಾಡಿನ ಮರಗಂತಿ ಕಪ್ಪೆಗೆ ರಾಜ್ಯ ಉಭಯಜೀವಿ ಮನ್ನಣೆ
ಗೋಕರ್ಣ ಸಮುದ್ರದಲ್ಲಿ ಮುಳುಗಿ ಬೆಳ್ಳಂದೂರಿನ ಅಲೋರಿಯಾ ಇಕೋಸ್ಪೇಸ್‌ನ ಮೂವರು ಟೆಕ್ಕಿಗಳು ಸಾವು