ಕಾಣದ ಕೈಗಳಿಂದ ನನ್ನ ಜನರ ಬಾಂಧವ್ಯಕ್ಕೆ ಧಕ್ಕೆ ತರುವ ಪ್ರಯತ್ನ, ಶಾಸಕ ಸಿಪಿವೈಗೆ ಪುತ್ರಿ ನಿಶಾ ಯೋಗೇಶ್ವರ್ ಪರೋಕ್ಷ ಟಾಂಗ್!

Published : Nov 02, 2026, 09:33 AM IST
Nisha Yogeshwar

ಸಾರಾಂಶ

ಚನ್ನಪಟ್ಟಣದಲ್ಲಿ ತಾವು ಆಯೋಜಿಸಿದ್ದ ಆರೋಗ್ಯ ಶಿಬಿರಕ್ಕೆ ಅಡ್ಡಿಪಡಿಸಿದ 'ಕಾಣದ ಕೈಗಳ' ವಿರುದ್ಧ ನಿಶಾ ಯೋಗೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜನರು ರಾಜನನ್ನಾಗಿ ಮಾಡುತ್ತಾರೆ, ಅವರೇ ಬೀದಿಗೂ ತರುತ್ತಾರೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್‌ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ತಮಗೆ ರಾಜಕೀಯದ ಆಸಕ್ತಿಯಿಲ್ಲ, ಕೇವಲ ಸಮಾಜ ಸೇವೆ ಮಾಡುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ರಾಮನಗರ: ನನ್ನ ಮತ್ತು ಜನರ ನಡುವಿನ ಬಾಂಧವ್ಯಕ್ಕೆ ಧಕ್ಕೆ ತರುವ ಪ್ರಯತ್ನವನ್ನು ಕಾಣದ ಕೈಗಳು ಮಾಡುತ್ತಿವೆ. ಆ ಕಾರಣಕ್ಕಾಗಿಯೇ ನಾವು ಆಯೋಜನೆ ಮಾಡುತ್ತಿರುವ ಸಮಾಜ ಮುಖಿ ಕಾರ್ಯಗಳಿಗೆ ತಡೆಯೊಡ್ಡುತ್ತಿದ್ದಾರೆ. ಜನರು ಒಬ್ಬ ವ್ಯಕ್ತಿಯನ್ನು ರಾಜನಾಗಿ ಪಟ್ಟಾಭಿಷೇಕ ಮಾಡುತ್ತಾರೆ, ಅದೇ ಜನರು ರಾಜನನ್ನು ಬೀದಿಗೆ ತಂದು ಬಿಡುತ್ತಾರೆ ಎಂಬುದನ್ನು ಮರೆಯಬಾರದು ಎಂದು ನಿಶಾ ಯೋಗೇಶ್ವರ್ ಅವರು ತಂದೆ ಶಾಸಕ ಸಿ.ಪಿ.ಯೋಗೇಶ್ವರ್‌ಗೆ ಪರೋಕ್ಷ ಟಾಂಗ್ ನೀಡಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಮತ್ತು ಜನರ ನಡುವಿನ ಬಾಂಧವ್ಯಕ್ಕೆ ಧಕ್ಕೆ ತರಲು ಯಾರಿಗೂ ಅಧಿಕಾರ ಇಲ್ಲ. ಸಮಾಜಕ್ಕಾಗಿ ಮಿಡಿಯುವ ಮನಸ್ಸುಗಳೆಲ್ಲ ಸೇರಿಕೊಂಡು ಜೊತೆ ಜೊತೆ ಫೌಂಡೇಷನ್ ಮೂಲಕ ಸಮಾಜ ಮುಖಿ ಕೆಲಸ ಮಾಡುತ್ತಿದ್ದೇವೆ. ಆದರೆ, ಚನ್ನಪಟ್ಟಣ ತಾಲೂಕು ನಾಗವಾರದಲ್ಲಿ ಆರೋಗ್ಯ ತಪಾಸಣಾ ಶಿಬಿರಕ್ಕೆ ಅಡ್ಡಿ ಪಡಿಸಿರುವುದನ್ನು ನೋಡಿದರೆ ಕಾಣದ ಕೈಗಳಿಂದ ನನ್ನ ಧೃತಿಗೆಡಿಸುವ ಪ್ರಯತ್ನ ನಡೆಯುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ ಎಂದು ಹೇಳಿದರು.

ನಾಗವಾರ ಸಾರ್ವಜನಿಕ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಆವರಣದಲ್ಲಿ ಅಕ್ಟೋಬರ್ 31ರಂದು ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲು ಅಕ್ಟೋಬರ್ 9ರಂದು ಅನುಮತಿ ಸಿಕ್ಕಿತ್ತು. ಆದರೆ, ಅ.30ರಂದು ಮಧ್ಯಾಹ್ನ ನೀತಿ ಸಂಹಿತೆ ನೆಪವೊಡ್ಡಿ ಶಿಬಿರಕ್ಕೆ ನೀಡಿದ್ದ ಅನುಮತಿ ರದ್ದು ಪಡಿಸಿದರು. ತಕ್ಷಣವೇ ಜಿಲ್ಲಾಧಿಕಾರಿ ಭೇಟಿಯಾಗಿ ಚರ್ಚೆ ನಡೆಸಿದಾಗ ಅವರು ಅನುಮತಿ ನೀಡಿದರು. ಅನುಮತಿ ರದ್ದು ಪಡಿಸಿದ ಹಿಂದೆ ಯಾರ ಕೈವಾಡ ಇದೆ ಎಂದು ಪ್ರಶ್ನಿಸಿದರು.

ನನಗೆ ರಾಜಕಾರಣಕ್ಕೆ ಬರುವ ಆಲೋಚನೆ ಇಲ್ಲ. ರಾಜಕಾರಣ ಮಾಡಲೇ ಬೇಕೆಂದರೆ ರಾಜ್ಯದಲ್ಲಿ 224 ಕ್ಷೇತ್ರಗಳಿವೆ. ಯಾವುದಾದರು ಒಂದು ಕ್ಷೇತ್ರಕ್ಕೆ ಹೋಗಿ ರಾಜಕಾರಣ ಮಾಡಬಹುದು. ನಾನು ಚನ್ನಪಟ್ಟಣದಲ್ಲಿ ಹುಟ್ಟಿ ಬೆಳೆದವಳು. ಇಲ್ಲಿನ ಜನರ ಕಷ್ಟ ಸುಖಗಳ ಅರಿವಿದೆ. ಆ ಉದ್ದೇಶದಿಂದ ಚನ್ನಪಟ್ಟಣದಲ್ಲಿ ಸಮಾಜ ಸೇವೆ ಮಾಡುತ್ತಿದ್ದೇನೆ.

- ನಿಶಾ ಯೋಗೇಶ್ವರ್ , ಶಾಸಕ ಸಿ.ಪಿ.ಯೋಗೇಶ್ವರ್ ಪುತ್ರಿ.

ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ: ಯೋಗೇಶ್ವರ್

ಚನ್ನಪಟ್ಟಣ: ಮಳೆಗಾಲದಲ್ಲಿ ಅಂತರ್ಜಲ ಮಟ್ಟ ಹೆಚ್ಚಿರುವುದರಿಂದ ಕೊಳವೆಬಾವಿಗಳಲ್ಲಿ ನೀರು ಲಭ್ಯವಾಗುತ್ತದೆ. ಆದರೆ ಮಳೆ ಕೊರತೆಯಾದಾಗ ಅಂತರ್ಜಲ ಮಟ್ಟ ಕುಸಿದು ನೀರಿನ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ಕಾವೇರಿ ನೀರನ್ನು ಶುದ್ಧೀಕರಿಸಿ ಎಲ್ಲ ಪ್ರದೇಶಗಳಿಗೂ ಪೂರೈಸುವ ಯೋಜನೆಯನ್ನು ಸರ್ಕಾರದಿಂದ ಜಾರಿಗೊಳಿಸಲಾಗುತ್ತಿದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್‌ ತಿಳಿಸಿದರು.

ತಾಲೂಕಿನ ಕಾರೆಕೊಪ್ಪ ಗ್ರಾಮದ ಗೆಂಡೆಕೆರೆ ಬಾಗಿನ ಸಮರ್ಪಣೆ ಹಾಗೂ ಸಿದ್ದಾಪುರ ಕೆರೆಗೆ ನೀರು ಹರಿಸುವ ಪೈಪ್‌ಲೈನ್ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸತ್ತೇಗಾಲ ಯೋಜನೆ ಮುಕ್ತಾಯದ ಹಂತದಲ್ಲಿದ್ದು, ಇದರಿಂದ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಬಗೆಹರಿಯಲಿದೆ. ಇದು ಜಾರಿಯಾದರೆ ತಾಲೂಕಿನ ಎಲ್ಲಾ ಕೆರೆಗೆ ಕಾವೇರಿ ನೀರನ್ನು ಹರಿಸಿ ಅವುಗಳನ್ನು ತುಂಬಿಸಿದ ಬಳಿಕ ಪ್ರತಿ ಹಳ್ಳಿಗೂ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶ ಹೊಂದಲಾಗಿದೆ ಎಂದರು.

ಇಡೀ ರಾಜ್ಯದಲ್ಲಿ ಬರ ಆವರಿಸಿದ್ದು ಇಂತಹ ಸಮಯದಲ್ಲೂ ನಿಮ್ಮೂರ ಕೆರೆಗೆ ನೀರು ಹರಿಯುತ್ತಿದೆ. ಇದನ್ನು ಅರಿತು ನೀರಿನ ಸದ್ಬಳಕೆಯ ಬಗ್ಗೆ ಅರಿವು ಬೆಳೆಸಿಕೊಳ್ಳಬೇಕು. ನ.೧ರಿಂದ ರಾಜ್ಯ ಸರ್ಕಾರ ಪ್ರತಿ ಲೀಟರ್ ಹಾಲಿಗೆ ೮ ರು. ದರ ಹೆಚ್ಚಿಸಿ ಅದರಲ್ಲಿ ೭ ರು.ಗಳನ್ನು ಉತ್ಪಾದಕರಿಗೆ ನೀಡಲು ಮುಂದಾಗಿದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಹಾಲು ಪೂರೈಸುವ ತಾಲೂಕುಗಳಲ್ಲಿ ಚನ್ನಪಟ್ಟಣ ಪ್ರಮುಖವಾದದ್ದು, ಇದರಿಂದ ಸ್ಥಳೀಯ ರೈತರಿಗೆ ಆರ್ಥಿಕ ಲಾಭ ದೊರೆಯಲಿದೆ. ಅಲ್ಲದೆ ತಾಲೂಕಿನ ಕಣ್ವ ಬಳಿ ಬೃಹತ್ ಪಶು ಆಹಾರ ತಯಾರಿಕಾ ಘಟಕ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಇದರಿಂದ ಗ್ರಾಮೀಣರ ಜೀವನಮಟ್ಟ ಸುಧಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ರೇಷ್ಮೆ ನಿಗಮದ ಉಪಾಧ್ಯಕ್ಷ ಎಸ್.ಗಂಗಾಧರ್‌, ಹಾಪ್‌ಕಾಮ್ಸ್ ಮಾಜಿ ಅಧ್ಯಕ್ಷ ಕೋಡಂಬಳ್ಳಿ ಶಿವಮಾದು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬ್ಯಾಡರಹಳ್ಳಿ ರಾಮಚಂದ್ರು, ಶ್ಯಾನುಭೋಗನಹಳ್ಳಿ ಪ್ರದೀಪ್, ಪಟೇಲ್ ಶ್ರೀನಿವಾಸ್, ವಿರೂಪಾಕ್ಷಿಪುರ ಶ್ರೀನಿವಾಸ್, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಮೋಹನ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸುರೇಶ್ ಸೇರಿದಂತೆ ಗ್ರಾಮಸ್ಥರು ಹಾಗೂ ಮುಖಂಡರು ಉಪಸ್ಥಿತರಿದ್ದರು.

PREV
Read more Articles on
click me!

Recommended Stories

ಬಿಡದಿ ಟೌನ್‌ಶಿಪ್: 2 ಗ್ರಾಮಗಳ 3271 ರೈತರ, 1883 ಎಕರೆ ಭೂ ಸ್ವಾಧೀನಕ್ಕೆ ಅಧಿಸೂಚನೆ
ಕಾಡು ಮರೆತು ಊರ ಮನೆ ಗೇಟ್ ಕಾಯ್ತಿದೆ ನರಭಕ್ಷಕ ಚಿರತೆ! ರಾಮನಗರದಲ್ಲಿ ಬೆಚ್ಚಿಬಿದ್ದ ಗ್ರಾಮಸ್ಥರು!