
ರಾಘು ಕಾಕರಮಠ
ಅಂಕೋಲಾ: ಸಮುದ್ರದಲ್ಲಿ ಸಿಗಬೇಕಾದ ಕೊಕ್ಕರಾ ಮೀನುಗಳು ಹಳ್ಳದ ನೀರಿನಲ್ಲಿ ಭಾರಿ ಪ್ರಮಾಣದಲ್ಲಿ ಕಾಣಿಸಿಕೊಂಡು, ಗಾಳ ಹಾಕಿದ ಯುವಕರಿಗೆ ಒಂದರ ಹಿಂದೆ ಒಂದರಂತೆ ಸಿಕ್ಕಿರುವ ಅಪರೂಪದ ಘಟನೆ ಕೇಣಿಯಲ್ಲಿ ಕುತೂಹಲ ಮೂಡಿಸಿದೆ.
ಅಲಗೇರಿ ಕಂಡುಗದ್ದೆಯ ನಿವಾಸಿಗಳಾದ ಸಂದೇಶ್ ಗೌಡ, ಕೃಷ್ಣ ಗೌಡ, ಅಜಯ್ ಗೌಡ, ನಾಗರಾಜ ಗೌಡ ಹಾಗೂ ಮಂಜುನಾಥ್ ಗೌಡ ಅವರು ಕೇಣಿ ಹಳ್ಳಕ್ಕೆ ತೆರಳಿ ಎಂದಿನಂತೆ ಗಾಳ ಹಾಕಿ ಮೀನು ಹಿಡಿಯುತ್ತಿದ್ದರು. ಆದರೆ ಈ ಬಾರಿ ಗಾಳಕ್ಕೆ ಸಿಕ್ಕ ಮೀನುಗಳ ಪ್ರಮಾಣ ಕಂಡು ಅವರಿಗೇ ಅಚ್ಚರಿ ಎದುರಾಗಿದೆ. ಒಂದರ ಹಿಂದೆ ಒಂದರಂತೆ ಕೊಕ್ಕರಾ ಮೀನುಗಳು ಗಾಳಕ್ಕೆ ಬೀಳುತ್ತಿದ್ದಂತೆ ಮೀನು ಬೇಟೆಯ ಸಂಭ್ರಮ ಇಮ್ಮಡಿಗೊಂಡಿದೆ.
ಸಾಮಾನ್ಯವಾಗಿ ಕೊಕ್ಕರಾ ಮೀನು ಸಮುದ್ರದಲ್ಲಿ ದೊರೆಯುತ್ತದೆ. ಕೇಣಿ ಹಳ್ಳವು ಸಮುದ್ರ ಸಂಗಮ ಪ್ರದೇಶದ ಅಂಚಿನಲ್ಲಿರುವುದರಿಂದ ಸಮುದ್ರದ ಏರಿನ ಸಂದರ್ಭದಲ್ಲಿ ನೀರಿನೊಂದಿಗೆ ಮೀನುಗಳು ಹಳ್ಳದ ಮೇಲ್ಭಾಗಕ್ಕೆ ಬಂದಿರಬಹುದು ಎಂಬುದು ಸ್ಥಳೀಯರ ಅಂದಾಜಾಗಿದೆ.
ಆದರೆ ನಿರೀಕ್ಷೆಗೂ ಮೀರಿ ಕೊಕ್ಕರಾ ಮೀನುಗಳು ದೊರೆತಿರುವುದು ವಿಶೇಷವಾಗಿದೆ. ಗಾಳ ಹಾಕಿದವರಿಗೆ ಒಂದೆರಡು ಮೀನುಗಳ ಬದಲು ನೂರಾರು ಮೀನುಗಳು ಸಿಕ್ಕಿರುವ ಸುದ್ದಿ ಹರಡುತ್ತಿದ್ದಂತೆ ಸುತ್ತಮುತ್ತಲಿನ ಜನರೂ ಕೇಣಿ ಹಳ್ಳದತ್ತ ಆಗಮಿಸಿ ಮೀನು ಬೇಟೆಯನ್ನು ವೀಕ್ಷಿಸಿದರು.
ಸಾಮಾನ್ಯವಾಗಿ ಮೀನು ಹಿಡಿಯಲು ತೆರಳಿದಾಗ ಕೆಲವೇ ಮೀನುಗಳು ಸಿಗುವುದು ಸಹಜ. ಆದರೆ ಒಂದೇ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಕೊಕ್ಕರಾ ಮೀನುಗಳು ಗಾಳಕ್ಕೆ ಸಿಕ್ಕಿರುವುದು ಅಪರೂಪ ಎಂದು ಸ್ಥಳೀಯರು ಹೇಳಿಕೊಂಡರು.
ಗಾಳಕ್ಕೆ ಸಿಕ್ಕ ನೂರಾರು ಕೊಕ್ಕರಾ ಮೀನುಗಳನ್ನು ಕಂಡು ಯುವಕರು ಸಂತಸ ವ್ಯಕ್ತಪಡಿಸಿದ್ದು, ಈ ಅಪರೂಪದ ಮೀನು ಬೇಟೆ ಇದೀಗ ಕೇಣಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಚರ್ಚೆಗೆ ಗ್ರಾಸವಾಗಿದೆ ಎಂದು ಸುದೀಪ ಬಂಟ ತಿಳಿಸಿದ್ದಾರೆ.
ಕೊನೆಗೆ ಗಾಳಕ್ಕೆ ಸಿಕ್ಕ ಮೀನುಗಳನ್ನು ಸಂಗ್ರಹಿಸಿಕೊಂಡ ಯುವಕರು ಅವುಗಳನ್ನು ಮನೆಗೆ ಕೊಂಡೊಯ್ದರು. ಸಮುದ್ರದ ಮೀನು ಹಳ್ಳದ ನೀರಿನಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಸಿಕ್ಕಿರುವ ಘಟನೆ ಸ್ಥಳೀಯರ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಸಿದ್ದಾಪುರ: ನಮ್ಮ ಹೊಟ್ಟೆ ಮೇಲೆ ಹೊಡಿಬೇಡಿ; ಹೊರರಾಜ್ಯದ ಕ್ಷೌರಿಕ ಅಂಗಡಿಗೆ ಅವಕಾಶ ನೀಡದಂತೆ ಮನವಿ