1714 ಕೋಟಿ ಪೈಕಿ 817 ಕೋಟಿ ಬಳಕೆ| ಆರು ಜಿಲ್ಲೆಯಲ್ಲಿಯೂ ದಾಟದ ಶೇ. 50 ಬಳಕೆ|ಕೊಪ್ಪಳ ಜಿಲ್ಲೆಗೆ ಹಂಚಿಕೆಯಾಗಿರುವ ಅನುದಾನ ಮಾತ್ರ ತೀರಾ ಕಡಿಮೆ|ಕಲಬುರಗಿ ಮತ್ತು ರಾಯಚೂರು ಜಿಲ್ಲೆಗೆ ಸಿಂಹಪಾಲು|
ಸೋಮರಡ್ಡಿ ಅಳವಂಡಿ
ಕೊಪ್ಪಳ[ಡಿ.20]: ಕಲ್ಯಾಣ ಕರ್ನಾಟಕ ಅನುದಾನ ಬಳಕೆಯ ಶೇಕಡಾವಾರು ಪ್ರಮಾಣದಲ್ಲಿ ಕೊಪ್ಪಳ ಜಿಲ್ಲೆ ಮುಂದಿದ್ದರೆ ಬೀದರ್ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಆದರೆ, ಕೊಪ್ಪಳ ಜಿಲ್ಲೆಗೆ ಹಂಚಿಕೆಯಾಗಿರುವ ಅನುದಾನ ಮಾತ್ರ ತೀರಾ ಕಡಿಮೆ ಎನ್ನುವುದು ಗಮನಾರ್ಹ ಸಂಗತಿ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಜಿಲ್ಲೆಯ ಜನಪ್ರತಿನಿಧಿಗಳ ಬೇಜವಾಬ್ದಾರಿಗೆ ಇದು ಸಾಕ್ಷಿಯಾಗಿದ್ದು, ಕಲ್ಯಾಣ ಕರ್ನಾಟಕದ 6 ಜಿಲ್ಲೆಯ ಪೈಕಿ ಕೊಪ್ಪಳಕ್ಕೆ ಅನುದಾನ ತೀರಾ ಕಡಿಮೆಯಾಗಿದ್ದು, ಕಲಬುರಗಿ ಮತ್ತು ರಾಯಚೂರು ಜಿಲ್ಲೆಗೆ ಸಿಂಹಪಾಲು ದೊರೆತಿದೆ. 2019ರ ಸಾಲಿನಲ್ಲಿ ಹಂಚಿಕೆಯಾಗಿರುವ 1500 ಕೋಟಿ ಪೈಕಿ ಕಲಬುರಗಿ ಜಿಲ್ಲೆಗೆ 413.58 ಕೋಟಿ, ಕಳೆದ ವರ್ಷದ ಉಳಿದ ಅನುದಾನ 53.45 ಕೋಟಿ ಸೇರಿ 467 ಕೋಟಿ ನೀಡಲಾಗಿದೆ. ಆನಂತರದ ಸ್ಥಾನದಲ್ಲಿ ರಾಯಚೂರು ಜಿಲ್ಲೆಗೆ ಪ್ರಸಕ್ತ ವರ್ಷ 264.84 ಹಾಗೂ ಕಳೆದ ವರ್ಷದ ಬಾಕಿ ಅನುದಾನ 48.25 ಕೋಟಿ ಸೇರಿ 313.09 ಕೋಟಿ ನೀಡಿದರೆ ಬಳ್ಳಾರಿ ಜಿಲ್ಲೆಗೆ 297.46 ಕೋಟಿ, ಬೀದರ್ 252.07 ಕೋಟಿ, ಯಾದಗಿರಿಗೆ 187.33 ಕೋಟಿ ದಕ್ಕಿದ್ದರೆ ಕೊಪ್ಪಳಕ್ಕೆ ಮಾತ್ರ ಕೇವಲ 179.62 ಕೋಟಿ ದೊರಕಿದೆ.
ಜನಪ್ರತಿನಿಧಿಗಳ ಬೇಜವಾಬ್ದಾರಿ:
ಅನುದಾನ ಹಂಚಿಕೆಯಲ್ಲಿ ಸ್ಥಳೀಯ ಶಾಸಕರು ಸರ್ಕಾರದ ಮಟ್ಟದಲ್ಲಿ ಒತ್ತಡ ಹಾಕಬೇಕು ಮತ್ತು ಪ್ರಸ್ತಾವನೆ ಕಳುಹಿಸಿಕೊಡಬೇಕು. ಆದರೆ, ಅದ್ಯಾವುದನ್ನು ಮಾಡದೆ ಇರುವುದರಿಂದ ಜಿಲ್ಲೆಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಅನುದಾನ ಕಡಿಮೆ ಬರಲು ಕಾರಣವಾಗಿದೆ. ಹಲವು ವರ್ಷಗಳಿಂದಲೂ ಈ ಅನ್ಯಾಯ ಮುಂದುವರಿಯುತ್ತಲೇ ಇದ್ದು, ಕಲ್ಯಾಣ ಕರ್ನಾಟಕ ಅನುದಾನ ಎಂದರೆ ಕೇವಲ ಕಲಬುರಗಿಗೆ ಎನ್ನುವಂತೆ ಆಗಿದೆ.
ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳು ಇವೆ. ವಿಶೇಷವಾಗಿ ಶಾಲಾ ಕೊಠಡಿಗಳು ಶಿಥಿಲಗೊಂಡಿವೆ. ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯಗಳು ಇಲ್ಲ. ಕೊಪ್ಪಳ ಜಿಲ್ಲಾಸ್ಪತ್ರೆಗೆ ಬೆಡ್ ಇಲ್ಲದಿರುವುದರಿಂದ ನೆಲದ ಮೇಲೆ ಮಲಗುತ್ತಾರೆ. ಇಷ್ಟೆಲ್ಲ ಗಂಭೀರ ಸಮಸ್ಯೆಗಳು ಇದ್ದರೂ ಕಲ್ಯಾಣ ಕರ್ನಾಟಕ ಅನುದಾನ ಹಂಚಿಕೆಯಲ್ಲಿ ಮಾತ್ರ ಪ್ರತಿ ವರ್ಷವೂ ಕೊಪ್ಪಳಕ್ಕೆ ಅನ್ಯಾಯವಾಗುತ್ತಲೇ ಇದೆ. ಕಲಬುರಗಿ ಜಿಲ್ಲೆಗೆ 413 ಕೋಟಿ ಕೊಡುವುದಾದರೆ ಕೊಪ್ಪಳಕ್ಕೆ ಕನಿಷ್ಠ 300 ಕೋಟಿ ಸಿಗಬೇಕಾಗಿತ್ತು ಎಂಬುದು ಸಾರ್ವಜನಿಕರ ಅಭಿಪ್ರಾಯ. ಹೀಗೆ ಪ್ರತಿ ಬಾರಿಯೂ ಅನ್ಯಾಯವಾಗುತ್ತಲೇ ಇದ್ದರೂ ಜನಪ್ರತಿನಿಧಿಗಳು ಮಾತ್ರ ಮೌನವಹಿಸಿದ್ದಾರೆ.
ಬಳಕೆಯಲ್ಲಿ ಮುಂದೆ:
ಬಂದಿರುವ ಅನುದಾನದ ಶೇಕಡಾವಾರಾ ಬಳಕೆಯಲ್ಲಿ ಕೊಪ್ಪಳ ಜಿಲ್ಲೆ ಮುಂದೆ ಇದೆ. ಅದರಲ್ಲೂ ನವ್ಹೆಂಬರ್ ಅಂತ್ಯಕ್ಕೆ ಬಳಕೆಯ ಲೆಕ್ಕಚಾರವನ್ನು ತೆಗೆದುಕೊಂಡರೆ ನೂರಕ್ಕೆ ನೂರರಷ್ಟುಅನುದಾನ ಬಳಕೆ ಮಾಡುವ ಮೂಲಕ ಶೇಕಡಾವಾರು ಬಳಕೆಯಲ್ಲಿ ಮುಂದಿದೆ. ಅನುಕ್ರಮವಾಗಿ ಬಳ್ಳಾರಿ, ಯಾದಗಿರಿ, ರಾಯಚೂರು, ಕಲಬುರಗಿ, ಬೀದರ ಜಿಲ್ಲೆಗಳು ನಂತರದ ಸ್ಥಾನದಲ್ಲಿವೆ.
ಕಲ್ಯಾಣ ಕರ್ನಾಟಕ ಅನುದಾನ ಬಳಕೆ
ಜಿಲ್ಲೆ ಅನುದಾನ ಒಟ್ಟು ವೆಚ್ಚ ಶೇಕಡಾ ಕೋಟಿಗಳಲ್ಲಿ
ಬಳ್ಳಾರಿ 297.46 ಕೋಟಿ 161.97 54.45
ಬೀದರ 252.07 . 99.31 39.40
ಕಲಬುರಗಿ 467.02 . 211.59 45.31
ಕೊಪ್ಪಳ 179.62 . 100.92 56.19
ರಾಯಚೂರು 313.09 . 150.28 48.00
ಯಾದಗಿರಿ 187.33 . 90.57 48.35
ಈ ಬಗ್ಗೆ ಮಾತನಾಡಿದ ಕಲ್ಯಾಣ ಕರ್ನಾಟಕ ಅನುದಾನ ಬಳಕೆಯ ಪ್ರಮಾಣದಲ್ಲಿ ಕೊಪ್ಪಳ ಮುಂದಿದೆ. ಕೊಟ್ಟಿರುವ ಅನುದಾನದಲ್ಲಿ ಇದುವರೆಗಿನ ಗುರಿಯಲ್ಲಿ ಶೇ. 101ರಷ್ಟು ಅನುದಾನ ಬಳಕೆ ಮಾಡಲಾಗಿದೆ ಎಂದು ಕೊಪ್ಪಳ ಎಡಿಸಿ ಪಿ. ಮಾರುತಿ ಅವರು ತಿಳಿಸಿದ್ದಾರೆ.