‘ಸಚಿವ ಸಿ.ಟಿ. ರವಿಗೆ ಪಾಕಿಸ್ತಾನದಲ್ಲಿ ಸಂಬಂಧಿಗಳು ಇರಬಹುದು’

Suvarna News   | Asianet News
Published : Dec 20, 2019, 07:47 AM IST
‘ಸಚಿವ ಸಿ.ಟಿ. ರವಿಗೆ ಪಾಕಿಸ್ತಾನದಲ್ಲಿ ಸಂಬಂಧಿಗಳು ಇರಬಹುದು’

ಸಾರಾಂಶ

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಅಸಂವಿಧಾನಿಕ| ಜಾತಿ-ಧರ್ಮದ ಹೆಸರಿನಲ್ಲಿ ಕೇಂದ್ರ ಸರ್ಕಾರ ರಾಜಕೀಯ: ಖಾದರ್‌ ಆರೋಪ|ಪಾಕಿಸ್ತಾನದ ವಿಷಯ ಪ್ರಸ್ತಾಪಿಸದೇ ಬಿಜೆಪಿ ನಾಯಕರಿಗೆ ಚುನಾವಣೆಯಲ್ಲಿ ಮತ ಬೀಳುವುದಿಲ್ಲ|ಪದೇ ಪದೇ ಬಿಜೆಪಿ ನಾಯಕರು ಪಾಕಿಸ್ತಾನದ ಬಗ್ಗೆ ಮಾತನಾಡುತ್ತಿದ್ದಾರೆ|

ಕುಷ್ಟಗಿ[ಡಿ.20]: ಪೌರತ್ವ ತಿದ್ದುಪಡಿ ಕಾಯ್ದೆ ಮಂಡಿಸುವ ಮೂಲಕ ಮಹಾತ್ಮ ಗಾಂಧೀಜಿ ಕನಸು ಹಾಗೂ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ತತ್ವ ಸಿದ್ಧಾಂತಗಳನ್ನು ಕೇಂದ್ರ ಸರ್ಕಾರ ಗಾಳಿಗೆ ತೂರುವ ಕೆಲಸ ಮಾಡುತ್ತಿದೆ ಎಂದು ಮಾಜಿ ಸಚಿವ ಯು.ಟಿ. ಖಾದರ್‌ ಹೇಳಿದ್ದಾರೆ.

ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡಲು ಹೊರಟ್ಟಿದ್ದು ಅಸಂವಿಧಾನಿಕವಾಗಿದೆ. ಈ ಕಾಯ್ದೆ ಮಂಡಿಸುವ ಮೂಲಕ ದೇಶದಲ್ಲಿ ಗಲಾಟೆ, ಪ್ರತಿಭಟನೆಗಳು ನಡೆಯುವಂತೆ ಮಾಡಿದೆ. ಬಿಜೆಪಿ ಜನಸಾಮಾನ್ಯರೊಂದಿಗೆ ಭಾವನಾತ್ಮಕವಾಗಿ ಆಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂಬ ಉದ್ದೇಶದಿಂದ 144 ಕಲಂ ಜಾರಿಗೊಳಿಸಿರುವುದು ಸರಿಯಾದ ಕ್ರಮವಲ್ಲ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕೇಂದ್ರ ಸರ್ಕಾರ ಜಾತಿ, ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡಲು ಹೊರಟಿದೆ ಎಂದು ಆರೋಪಿಸಿದ ಖಾದರ್‌, ಪೌರತ್ವ ತಿದ್ದುಪಡಿ ಕಾಯ್ದೆ ರಾಜ್ಯದಲ್ಲಿ ಜಾರಿಯಾದರೆ ಕರ್ನಾಟಕವೇ ಹೊತ್ತಿ ಉರಿಯಲಿದೆ ಎಂದು ನಾನು ಹೇಳಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ತಿಳಿಸಿದರು.

ಸಿಟಿ ರವಿಗೆ ತಿರುಗೇಟು:

ಯು.ಟಿ. ಖಾದರ್‌ಗೆ ನಾಗರಿಕ ಹಕ್ಕನ್ನು ನಿರಾಕರಿಸುವುದಿಲ್ಲ. ಪಾಕಿಸ್ತಾನದಿಂದ ಅವರ ಸಂಬಂಧಿಗಳನ್ನು ಕರೆತಂದು ದೇಶದ ಪೌರತ್ವ ನೀಡಿ ಎಂದರೆ ನೀಡುವುದಿಲ್ಲ ಎಂಬ ಸಚಿವ ಸಿ.ಟಿ. ರವಿ ಹೇಳಿಕೆಗೆ ತಿರುಗೇಟು ನೀಡಿದ ಖಾದರ್‌, ನನಗೆ ಪಾಕಿಸ್ತಾನದಲ್ಲಿ ಯಾವುದೇ ಸಂಬಂಧಿಗಳು ಇಲ್ಲ. ಸಚಿವ ಸಿ.ಟಿ. ರವಿ ಪದೇ ಪದೇ ಪಾಕಿಸ್ತಾನದ ಬಗ್ಗೆ ಮಾತನಾಡುತ್ತಿರುವುದನ್ನು ನೋಡಿದರೆ ಬಹುಶಃ ಅವರಿಗೆ ಪಾಕಿಸ್ತಾನದಲ್ಲಿ ಸಂಬಂಧಿಗಳು ಇರಬಹುದು ಎಂದು ಕುಟುಕಿದರು.

ಪಾಕಿಸ್ತಾನದ ವಿಷಯ ಪ್ರಸ್ತಾಪಿಸದೇ ಬಿಜೆಪಿ ನಾಯಕರಿಗೆ ಚುನಾವಣೆಯಲ್ಲಿ ಮತ ಬೀಳುವುದಿಲ್ಲ. ಹೀಗಾಗಿ ಅವರು ಪದೇ ಪದೇ ಬಿಜೆಪಿ ನಾಯಕರು ಪಾಕಿಸ್ತಾನದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ ಖಾದರ್‌, ಕೇಂದ್ರ ಸರ್ಕಾರ ಭಾರತದ ಪೆಟ್ರೋಲಿಯಂ ಕಂಪನಿಗಳನ್ನು ಸೌದಿ ಅರೇಬಿಯಾಕ್ಕೆ ಮಾರಾಟ ಮಾಡಲು ಹೊರಟಿದೆ ಎಂದು ಆರೋಪಿಸಿದರು.

ಖಾದರ್‌ ಬಂಧಿಸಬೇಕು ಎಂಬ ಪ್ರಮೋದ ಮುತಾಲಿಕ್‌ ಹೇಳಿಕೆಗೆ, ದೇಶಕ್ಕಾಗಿ ನಾನು ಜೈಲಿಗೆ ಹೋಗಲು ಸಿದ್ಧ. ಗಲ್ಲು ಶಿಕ್ಷೆ ಅನುಭವಿಸಲು ಸಿದ್ಧನಿದ್ದೇನೆ ಎಂದು ತಿರುಗೇಟು ನೀಡಿದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ದೇಶದ ಆರ್ಥಿಕ ಪರಿಸ್ಥಿತಿ ತೀವ್ರವಾಗಿ ಕುಸಿದಿದೆ. ಇಷ್ಟಾದರೂ ಆರ್ಥಿಕ ಸ್ಥಿತಿ ಸುಧಾರಿಸಲು ಕ್ರಮಕೈಗೊಳ್ಳದ ಕಾರಣ ಪೌರತ್ವ ಕಾಯ್ದೆ ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ದೇಶದ ಜನರನ್ನು ದಿಕ್ಕು ತಪ್ಪಿಸುತ್ತಿದೆ ಎಂದು ಕಿಡಿಕಾರಿದರು.

PREV
click me!

Recommended Stories

ಬೆಂಗಳೂರು: ಮಗಳನ್ನ ಮದುವೆ ಮಾಡಿಕೊಡದ ತಾಯಿಗೆ ಬೆಂಕಿ ಹಚ್ಚಿದ್ದ ಕಿರಾತಕ ತಮಿಳುನಾಡಿನಲ್ಲಿ ಅರೆಸ್ಟ್!
ಹೊಸ ವರ್ಷದ ಸಂಭ್ರಮಕ್ಕೆ ಬ್ರೇಕ್; ಚಿಕ್ಕಮಗಳೂರಿನ 22 ಪ್ರವಾಸಿ ತಾಣಗಳಿಗೆ ಪ್ರವೇಶ ನಿಷೇಧಿಸಿದ ಜಿಲ್ಲಾಡಳಿತ!