
ಚಿಕ್ಕಮಗಳೂರು (ಮಾ.9) : ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಭಾವೈಕ್ಯತಾ ಕೇಂದ್ರ ಬಾಬಾ ಬುಡನ್‌ಗಿರಿಯಲ್ಲಿ ಈ ಬಾರಿಯೂ ಉರುಸ್‌ನ ಮೊದಲ ದಿನದಂದು ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ ನಡೆಯಿತು.
ಮಾ.8 ರಿಂದ ಮೂರು ದಿನಗಳ ಕಾಲ ಜಿಲ್ಲಾಡಳಿತ ಆಶ್ರಯದಲ್ಲಿ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ(Baba Budan swamy dargah)ದಲ್ಲಿ ಉರುಸ್(Urus) ನಡೆಯಲಿದ್ದು, ಇದಕ್ಕೆ ಬುಧವಾರದಂದು ಚಾಲನೆ ನೀಡಲಾಯಿತು. ಶಾಖಾದ್ರಿಗಳ ನೇತೃತ್ವದಲ್ಲಿ ಮುಸ್ಲಿಂ ಸಂಪ್ರದಾಯದಂತೆ ಉರುಸ್ ಆಚರಣೆಗೆ ಅವಕಾಶ ನೀಡಬೇಕೆಂದು ಹಿಂದಿನ ಕೆಲವು ವರ್ಷಗಳಿಂದ ಉರುಸ್‌ನ ಮೊದಲ ದಿನದಂದು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಬರುತ್ತಿದ್ದ ಫಕೀರರು ಶಾಖಾದ್ರಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಈ ಬಾರಿ ರಾಜ್ಯ ಸರ್ಕಾರ ದತ್ತಪೀಠದಲ್ಲಿ ಪೂಜಾ ವಿಧಿ ವಿಧಾನಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡಿರುವ ಕ್ರಮಗಳ ವಿರುದ್ಧ ಮುಸ್ಲಿಂ ಸಮುದಾಯ(Muslim community)ದ ಮುಖಂಡರು ಹಾಗೂ ವಿವಿಧ ಮುಸ್ಲಿಂ ಸಂಘಟನೆಗಳ ಮುಖಂಡರು ಒಟ್ಟಾಗಿ ಇದೇ ಮೊದಲ ಬಾರಿಗೆ ಪ್ರತಿಭಟನೆಗೆ ಇಳಿದಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಬಂದ್ ಮಾಡಲು ಕಾಂಗ್ರೆಸ್‌ಗೆ ನೈತಿಕತೆ ಇದ್ಯಾ? : ಈಶ್ವರಪ್ಪ...
ಪ್ರತಿಭಟನೆ: ದತ್ತಪೀಠ(Dattapeetha)ದಲ್ಲಿ ಪೂಜಾ ವಿಧಿ ವಿಧಾನಕ್ಕೆ ಸಂಬಂಧಿಸಿದಂತೆ ಕಾಲ ಕಾಲಕ್ಕೆ ಸೂಕ್ತ ತೀರ್ಮಾನ ತೆಗೆದುಕೊಳ್ಳಲು ರಾಜ್ಯ ಸರ್ಕಾರದ ಸಚಿವ ಸಂಪುಟದ ಉಪ ಸಮಿತಿಯ ಶಿಫಾರಸ್ಸಿನ ಮೇರೆಗೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ದತ್ತಪೀಠ ವ್ಯವಸ್ಥಾಪನಾ ಸಮಿತಿ ರಚನೆ ಮಾಡಿತು. ಈ ಸಮಿತಿ ದತ್ತಜಯಂತಿ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಹಿಂದೂ ಅರ್ಚಕರನ್ನು ನೇಮಕ ಮಾಡಿತ್ತು. ದತ್ತಜಯಂತಿ ಮುಗಿದರೂ ಕೂಡ ಅರ್ಚಕರನ್ನು ಮುಂದುವರೆಸಲಾಗಿದೆ.
ಭಕ್ತರು ನೀಡುತ್ತಿರುವ ಕಾಣಿಕೆ ದುರುಪಯೋಗವಾಗುತ್ತಿದೆ. ಮುಸ್ಲಿಂ ಸಮುದಾಯದ ಒಂದೊಂದೇ ಸಂಪ್ರದಾಯವನ್ನು ಗಿರಿಯಲ್ಲಿ ಮೊಟಕುಗೊಳಿಸಲಾಗುತ್ತಿದೆ. ಈ ವ್ಯವಸ್ಥಾಪನಾ ಸಮಿತಿಯನ್ನು ರದ್ದುಪಡಿಸಬೇಕು, ಅದರಡಿಯಲ್ಲಿ ನಡೆಯುವ ಉರುಸ್ ಬಹಿಷ್ಕರಿಸಲಾಗುವುದು ಎಂದು ಮುಸ್ಲಿಂ ಸಮುದಾಯದವರನ್ನು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಆದರೆ, ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಆದೇಶ ಪಾಲನೆ ಮಾಡಲೇಬೇಕಾದ ಅನಿವಾರ್ಯತೆಯಿಂದ ಮೂರು ದಿನಗಳ ಉರುಸ್‌ಗೆ ವಿದ್ಯುಕ್ತವಾಗಿ ಬುಧವಾರ ಚಾಲನೆ ನೀಡಲಾಯಿತು.
ಸಂಜೆ ವೇಳೆಗೆ ಮುಸ್ಲಿಂ ಸಮುದಾಯದ ಮುಖಂಡ ಕೆ. ಮಹಮದ್, ಗೌಸ್ ಮೊಹಿಯುದ್ದೀನ್ ಶಾಖಾದ್ರಿ, ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ಜಿಲ್ಲಾಧ್ಯಕ್ಷ ಜಂಶೀದ್ ಖಾನ್, ಅಂಜುಮನ್ ಮಾಜಿ ಅಧ್ಯಕ್ಷ ನಾಸೀರ್, ನೇತೃತ್ವದಲ್ಲಿ ಮುಸ್ಲಿಂ ಸಮುದಾಯದವರು ದತ್ತಪೀಠದ ಪ್ರವೇಶ ದ್ವಾರದ ಎದುರು ಕಪ್ಪು ಪಟ್ಟಿಕಟ್ಟಿಕೊಂಡು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಹಾಕಿದರು. ದತ್ತಪೀಠದ ವ್ಯವಸ್ಥಾಪನಾ ಸಮಿತಿಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಕೆಲ ಸಮಯದ ನಂತರ ಪ್ರತಿಭಟನೆಯನ್ನು ಕೈಬಿಟ್ಟು ಚಿಕ್ಕಮಗಳೂರಿಗೆ ವಾಪಸ್ ಬಂದರು.
ಉರುಸ್ ನಿನ್ನೆ ಅಲ್ಲ; ಇಂದು
ಮುಸ್ಲಿಂ ಸಂಪ್ರದಾಯದ ಪ್ರಕಾರ, ಹೋಳಿ ಹುಣ್ಣಿಮೆ(Holi hunnime)ಯ ಮರುದಿನ ಉರುಸ್ ಆರಂಭವಾಗಬೇಕಿತ್ತು. ಅಂದರೆ, ಬುಧವಾರ ಅಲ್ಲ, ಗುರುವಾರ ಉರುಸ್ ಆರಂಭವಾಗಬೇಕಾಗಿತ್ತು. ಆದರೆ, ಜಿಲ್ಲಾಡಳಿತ ಒಂದು ದಿನ ಮೊದಲೇ ಉರುಸ್‌ಗೆ ಚಾಲನೆ ನೀಡಿದೆ ಎಂಬುದು ಮುಸ್ಲಿಂ ಸಮುದಾಯದ ಆರೋಪ.
ಉರುಸ್ ಸಂಪ್ರದಾಯದಂತೆ ನಡೆಯಬೇಕು, ಅಂದರೆ, ಒಂದು ವಾರದ ಮೊದಲೇ ಇಲ್ಲಿಗೆ ಸಮೀಪದ ಜೋಳ್ದಾಳ್ ಗ್ರಾಮದಲ್ಲಿರುವ ಪಂಚ್ ಫೀರ್ ದರ್ಗಾದಿಂದ ಗಂಧವನ್ನು ತೆಗೆದು ಅಲ್ಲಿಂದ ಉಪ್ಪಳ್ಳಿಗೆ ಬಂದು, ನಂತರ ಹನುಮಂತಪ್ಪ ವೃತ್ತದ ಬಳಿ ಇರುವ ಬಡ ಮಕಾನ್‌ಗೆ ತಂದು ಅಲ್ಲಿ ಪೂಜೆ ಸಲ್ಲಿಸಿದ ನಂತರ ವಿವಿಧ ರಾಜ್ಯಗಳಿಂದ ಬರುವ ಫಕೀರರ ಸಮ್ಮುಖದಲ್ಲಿ ಅತ್ತಿ ಗುಂಡಿಗೆ ತೆಗೆದುಕೊಂಡು ಹೋಗಿ ಮರು ದಿನ ಶಾಖಾದ್ರಿಗಳ ನೇತೃತ್ವದಲ್ಲಿ ಬಾಬಾ ಬುಡನ್ ಗಿರಿಗೆ ಗಂಧ ತೆಗೆದುಕೊಂಡು ಹೋಗಲಾಗುವುದು.
ದತ್ತಜಯಂತಿ ವೇಳೆ ಶಾಂತಿಸುವ್ಯವಸ್ಥೆಗಾಗಿ ಜಿಲ್ಲಾದ್ಯಂತ ಬಂದೋಬಸ್ತ್
ಈ ಸಂಪ್ರದಾಯದ ಪ್ರಕಾರ ಗುರುವಾರ ಬಾಬಾ ಬುಡನ್‌ಗಿರಿಗೆ ಶಾಖಾದ್ರಿ ನೇತೃತ್ವದಲ್ಲಿ ಗಂಧ ತೆಗೆದುಕೊಂಡು ಹೋಗಲಾಗುವುದು. ಅಲ್ಲಿ ಗೋರಿಗಳಿಗೆ ಗಂಧ ಹಚ್ಚಿ, ಹೂವು ಮತ್ತು ಹಸಿರು ಬಟ್ಟೆಹೊದಿಸಲು ಜಿಲ್ಲಾಡಳಿತ ಅವಕಾಶ ನೀಡುವುದಿಲ್ಲ, ಅದ್ದರಿಂದ ಪ್ರತಿ ವರ್ಷದಂತೆ ಈ ಬಾರಿಯೂ ಗುರುವಾರ ಪ್ರತಿಭಟನೆ ನಡೆಯುವ ಸಾಧ್ಯತೆ ಇದೆ.