
ದಕ್ಷಿಣ ಕನ್ನಡ (ಸೆ.10): ಟಾರ್ಪಾಲು ಹೊದಿಕೆಯ ಗುಡಿಸಿಲನಲ್ಲಿ ಆಶ್ರಯ ಪಡೆದಿದ್ದ ಮಹಿಳೆಗೆ ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ತನ್ನ ಸುವರ್ಣ ಮಹೋತ್ಸವದ ನೂತನ ಮನೆ ನಿರ್ಮಿಸಿ ಮಾದರಿಯಾಗಿದೆ.
ಉಪ್ಪಿನಂಗಡಿ ಗ್ರಾಮದ ಕಜೆಕ್ಕಾರ್ ಎಂಬಲ್ಲಿನ ನಿವಾಸಿ ಭಾಗಿ ಎಂಬವರು ತೀರಾ ಬಡವರಾಗಿದ್ದು, ಒಂಟಿಯಾಗಿ ಟರ್ಪಾಲಿನ ಜೋಪಡಿಯೊಂದರಲ್ಲಿ ವಾಸಿಸುತ್ತಿದ್ದರು. ಈ ಪರಿಸರದಲ್ಲಿ ಆರ್ ಎಸ್ ಎಸ್ ಪ್ರಾಯೋಜಿತ ತುಡರ್ ಕಾರ್ಯಕ್ರಮ, ಕಾಳಿಕಾಂಬಾ ಭಜನಾ ಮಂಡಳಿ ಪ್ರಾಯೋಜಿತ ಮನೆಯಂಗಳದ ಭಜನೆ ಮೊದಲಾದ ಕಾರ್ಯಕ್ರಮದ ನಡೆದ ವೇಳೆ ಮಹಿಳೆಯ ಸಮಸ್ಯೆ ಸಮಾಜದ ಅರಿವಿಗೆ ಬಂದಿತ್ತು.
ಇದೇ ಸಮಯದಲ್ಲಿ ಉಪ್ಪಿನಂಗಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ 50 ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ಮನೆಯೊಂದನ್ನು ನಿರ್ಮಿಸಿಕೊಡುವ ಬಗ್ಗೆ ತೀರ್ಮಾನಿಸಲಾಗಿತ್ತು. ಸಮಿತಿಯ ಆಶಯಕ್ಕೆ ಸ್ಪಂದಿಸಿದ ಟೀಮ್ ದಕ್ಷಿಣ ಕಾಶಿ, ಟೀಮ್ ಅಘೋರಾ, ಉದ್ಯಮಿಗಳಾದ ಸುಜೀರ್ ಗಣಪತಿ ನಾಯಕ್, ಡಾ.ಎಂ. ಆರ್ ಶೆಣೈ, ಚಂದಪ್ಪ ಮೂಲ್ಯ, ಮೋಹನ್ ಕುಮಾರ್ ಉಜಿರೆ, ಯು ಜಿ ರಾಧಾ, ಹರೀಶ್ ಶೆಟ್ಟಿ ಗಾಂಧೀಪಾರ್ಕ್, ಸಿಎ ಬ್ಯಾಂಕ್ ಉಪ್ಪಿನಂಗಡಿ, ಕರಾಯ ಶ್ರೀಮತಿ ಎಂ ನಾಯಕ್, ಶಶಿಧರ್ ನಟ್ಟಿಬೈಲ್, ವೇಣುಗೋಪಾಲ ನೋಂಡಾ, ಪ್ರಸನ್ನ ದರ್ಬೆ, ಕೆ ರಾಧಾಕೃಷ್ಣ ನಾಯಕ್, ಗುಣಕರ ಅಗ್ನಾಡಿ, ಪಟ್ಲ ಪೌಂಡೇಶನ್, ಕಾಳಿಕಾಂಬಾ ಭಜನಾ ಮಂಡಳಿ ಸದಸ್ಯರ ಸಹಕಾರದಿಂದ ಹೊಸ ಮನೆ ನಿರ್ಮಾಣವಾಯಿತು. 2026ರ ಜನವರಿಯಲ್ಲಿ ಶಿಲಾನ್ಯಾಸ ನಡೆದು ಇದೀಗ ಪೂರ್ಣತೆಯ ಹಂತ ತಲುಪಿದೆ. ಸುವ್ಯವಸ್ಥಿತ ಮನೆಯನ್ನು ಸೆ.10ರಂದು (ಇಂದು) ಭಾಗಿಯವರಿಗೆ ಹಸ್ತಾಂತರಿಸುವ ಮೂಲಕ ಅವರ ಬದುಕಿನಲ್ಲಿ ನೆಮ್ಮದಿಯ ಭಾವನೆ ಮೂಡಿಸಲಾಗುತ್ತಿದೆ.
ಗಣೇಶೋತ್ಸವ ಸಮಿತಿಯು ನಿರ್ಮಿಸಿ ಕೊಟ್ಟ ಮನೆಯು ಆರ್‌ಸಿಸಿಯ ಮನೆ ಆಗಿದ್ದು, ಇದಕ್ಕೆ ಸುಮಾರು 10 ಲಕ್ಷ ದಷ್ಟು ರು. ವೆಚ್ಚ ತಗುಲಿದೆ. ಹಾಲ್, ಒಂದು ಊಟದ ಹಾಲ್, ಬೆಡ್ ರೂಂ, ಅಡುಗೆ ಕೋಣೆ ಹಾಗೂ ಮನೆಗೆ ತಾಗಿಕೊಂಡೇ ಸ್ನಾನಗೃಹ ಮತ್ತು ಶೌಚಾಲಯದ ನಿರ್ಮಾಣವಾಗಿದೆ. ಇದರೊಂದಿಗೆ ಸ್ನಾನ ಗೃಹಕ್ಕೆ ನೀರಿನ ಸ್ಟೀಲ್ ಅಂಡೆಯನ್ನು ಕೂಡಾ ಸಮಿತಿಯೇ ಅಳವಡಿಸಿದೆ. ಎಲ್ಲ ಕೋಣೆಗಳಿಗೆ ಕಿಟಕಿ ಬಾಗಿಲುಗಳ ಜೋಡಣೆಯೂ ಆಗಿದ್ದು, ವಯರಿಂಗ್, ಪ್ಲಂಬಿಂಗ್ ಕೆಲಸವನ್ನೂ ಮನೆಯ ಸುತ್ತಲೂ ಇಂಟರ್‌ಲಾಕ್ ಅಳವಡಿಸಲಾಗಿದೆ.
ಸುಮಾರು 8 ರಿಂದ 10 ಲಕ್ಷ ರು. ವೆಚ್ಚದ ಸುಂದರವಾದ ಮನೆಯನ್ನು ನಿರ್ಮಿಸಲಾಗಿದೆ. ೧೦ರಂದು ಹಸ್ತಾಂತರ ಕಾರ್ಯ ನಡೆಯಲಿದ್ದು, ಬೆಳಗ್ಗೆ ಗಣಹೋಮ ನಡೆಯಲಿದೆ. ಸಂಜೆ ಮನೆ ನಿರ್ಮಾಣ ಕಾರ್ಯಕ್ಕೆ ಕೈಜೋಡಿಸಿದ ಎಲ್ಲರನ್ನೂ ಕರೆದು ದೀಪ ಬೆಳಗಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.
-ಕೆ ಸುಧಾಕರ ಶೆಟ್ಟಿ, ಗಣೇಶೋತ್ಸವ ಸಮಿತಿ ಅಧ್ಯಕ್ಷರು