
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಡಿಎ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅನುಭೋಗದಲ್ಲಿ ಇರುವ ಸಾರ್ವಜನಿಕರಿಂದ ಆಸ್ತಿ ಮಾರ್ಗಸೂಚಿ ದರದ ಆಧಾರದಲ್ಲಿ ಶುಲ್ಕ ಸಂಗ್ರಹಿಸಿ ಸಕ್ರಮಗೊಳಿಸುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಅಧಿನಿಯಮ 2026ಕ್ಕೆ ರಾಜ್ಯಪಾಲರು ಅಂಗೀಕಾರ ಸೂಚಿಸಿದ್ದು ಅಧಿಕೃತ ರಾಜ್ಯಪತ್ರ ಹೊರಡಿಸಲಾಗಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆಯ ಸೆಕ್ಷನ್ 38 (ಡಿ) ಅಡಿಯಲ್ಲಿ, ಬಿಡಿಎ ಸ್ವಾಧೀನಪಡಿಸಿಕೊಂಡ ಜಾಗದಲ್ಲಿ ನಿಯಮಬಾಹಿರವಾಗಿ ಅಥವಾ ಅನಧಿಕೃತವಾಗಿ ಮನೆ ಅಥವಾ ಕಟ್ಟಡ ನಿರ್ಮಿಸಿರುವ ನಾಗರಿಕರಿಗೆ ಅದನ್ನು ಸಕ್ರಮ ಮಾಡಿಕೊಳ್ಳಲು ಮತ್ತು ಕಾನೂನುಬದ್ಧ ಮಾಲೀಕತ್ವ ಪಡೆಯಲು ಸರ್ಕಾರ ಅವಕಾಶ ನೀಡಿದೆ. ಈ ತಿದ್ದುಪಡಿ ವಿಧೇಯದ ಮೂಲಕ ಈ ಹಿಂದೆ ನಿಗದಿಪಡಿಸಲಾಗಿದ್ದ ಶುಲ್ಕದಲ್ಲಿ ಶೇ.50ರಷ್ಟು ಇಳಿಕೆ ಮಾಡಲಾಗಿದೆ.
ಮೂಲ ಅಧಿನಿಯಮದ ಸೆಕ್ಷನ್ 10ರಲ್ಲಿ ಇದ್ದ ಆಡಳಿತಾತ್ಮಕ ವೆಚ್ಚದ ಮಿತಿಯನ್ನು 50 ಲಕ್ಷ ರು.ಗಳಿಂದ 5 ಕೋಟಿ ರು.ಗಳಿಗೆ ಹೆಚ್ಚಿಸಲಾಗಿದೆ. ಅನಧಿಕೃತ ಕಟ್ಟಡಗಳ ಸಕ್ರಮ ದರಗಳ ಸೆಕ್ಷನ್ 38ಡಿ ರಲ್ಲಿ ಮೂಲೆ ನಿವೇಶನಗಳನ್ನು ಹೊರತುಪಡಿಸಿ ಕಟ್ಟಡ ಹೊಂದಿರುವ ಭೂಮಿಯ ಸಕ್ರಮಕ್ಕಾಗಿ ಮಾರ್ಗಸೂಚಿ ಮೌಲ್ಯ ಆಧರಿತ ಶುಲ್ಕ ನಿಗದಿಪಡಿಸಲಾಗಿದ್ದು, ಶೇ.50ರಷ್ಟು ಇಳಿಕೆ ಮಾಡಲಾಗಿದೆ.
ಪ್ರಾಧಿಕಾರದ ಭೂಮಿಗಳಲ್ಲಿನ ಅನಧಿಕೃತ ಅದಿಭೋಗದಾರರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಅಧಿನಿಯಮ 2026ರ ಪ್ರಾರಂಭದ ದಿನಾಂಕದಿಂದ ಎರಡು ವರ್ಷಗಳೊಳಗಾಗಿ ಈ ಪ್ರಕರಣದಡಿಯಲ್ಲಿ ನಿವೇಶನದ ಹಂಚಿಕೆಯನ್ನು ಪಡೆಯಬೇಕು. ಇಲ್ಲದಿದ್ದಲ್ಲಿ ಪ್ರಾಧಿಕಾರವು ಅಂತಹ ಅನಧಿಕೃತ ಅದಿಭೋಗದಾರರನ್ನು ಹೊರ ಹಾಕಬಹುದಾಗಿದೆ.
ಈ ನಿಯಮವು ಕೇವಲ ಖಾಲಿ ನಿವೇಶನಗಳಿಗೆ ಅನ್ವಯಿಸುವುದಿಲ್ಲ. ಆ ಜಾಗದಲ್ಲಿ ಕಾಂಕ್ರೀಟ್ ಮನೆ ಅಥವಾ ಕಟ್ಟಡ ನಿರ್ಮಾಣವಾಗಿರಬೇಕು. ಕಾಯ್ದೆ ಜಾರಿಗೆ ಬರುವ ಮುನ್ನ ಕನಿಷ್ಠ 12 ವರ್ಷಗಳ ಕಾಲ ಆ ಜಾಗದಲ್ಲಿ ಮನೆ ಅಥವಾ ಕಟ್ಟಡ ಕಟ್ಟಿ ವಾಸವಿರಬೇಕು ಅಥವಾ ಸ್ವಾಧೀನ ಹೊಂದಿರಬೇಕು. ಒಬ್ಬ ವ್ಯಕ್ತಿಗೆ ಗರಿಷ್ಠ 4,000 ಚದರ ಅಡಿ ವರೆಗಿನ ಜಾಗವನ್ನು ಮಾತ್ರ ಈ ನಿಯಮದಡಿ ಸಕ್ರಮ ಮಾಡಿಕೊಡಲಾಗುತ್ತದೆ.