ಹಣ ಯಾವ ರೀತಿ ಪೋಲು ಮಾಡಬಹುದು ಅನ್ನೋದಕ್ಕೆ ಈ ಯೋಜನೆಯೇ ಸಾಕ್ಷಿ. ಒಂದೆಡೆ ಹಲವು ವರ್ಷಗಳ ಹಿಂದೆ ನಾಮ್ ಕೆ ವಾಸ್ತೆ ನಿರ್ಮಾಣ ಮಾಡಿರೋ ಸಣ್ಣ ಚೆಕ್ ಡ್ಯಾಂ. ಇನ್ನೊಂದೆಡೆ ಇತ್ತೀಚೆಗೆ ನಿರ್ಮಾಣ ಮಾಡಿರೋ ಕಳಪೆ ಕಾಮಗಾರಿ ಪಿಚ್ಚಿಂಗ್.
ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಉತ್ತರ ಕನ್ನಡ (ಮೇ.17): ಹಣ ಯಾವ ರೀತಿ ಪೋಲು ಮಾಡಬಹುದು ಅನ್ನೋದಕ್ಕೆ ಈ ಯೋಜನೆಯೇ ಸಾಕ್ಷಿ. ಒಂದೆಡೆ ಹಲವು ವರ್ಷಗಳ ಹಿಂದೆ ನಾಮ್ ಕೆ ವಾಸ್ತೆ ನಿರ್ಮಾಣ ಮಾಡಿರೋ ಸಣ್ಣ ಚೆಕ್ ಡ್ಯಾಂ (Check Dam). ಇನ್ನೊಂದೆಡೆ ಇತ್ತೀಚೆಗೆ ನಿರ್ಮಾಣ ಮಾಡಿರೋ ಕಳಪೆ ಕಾಮಗಾರಿ (Poor Quality Construction) ಪಿಚ್ಚಿಂಗ್. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಕರ್ಮದಿಂದಾಗಿ ಜನಸಾಮಾನ್ಯರು ನೆರೆ ಭೀತಿ ಎದುರಿಸುತ್ತಿದ್ದು, ಈ ಮಳೆಗಾಲದಲ್ಲಿ (Rainy Season) ಮತ್ತೆ ತಮ್ಮ ಸ್ಥಿತಿಯೇನು ಅಂತಾ ಆತಂಕದಲ್ಲೇ ದಿನದೂಡುವಂತಾಗಿದೆ. ಅಷ್ಟಕ್ಕೂ ಈ ಸಮಸ್ಯೆ ಇರೋದಾದ್ರೂ ಎಲ್ಲಿ ಅಂತೀರಾ. ಈ ಸ್ಟೋರಿ ನೋಡಿ. ಜನರ ತೆರಿಗೆಯ ಹಣವನ್ನು ಯಾವ್ಯಾವ ರೀತಿಯಲ್ಲಿ ಪೋಲು ಮಾಡಬಹುದು ಅನ್ನೋದಕ್ಕೆ ಈ ಯೋಜನೆಗಳೇ ಸಾಕ್ಷಿ.
ಯಾಕಂದ್ರೆ, ಈ ಯೋಜನೆಗಳಿಂದ ಜನರಿಗೆ ಉಪಕಾರದ ಬದಲು ಉಪದ್ರವಾದದ್ದೇ ಹೆಚ್ಚು. ಹೌದು, ಉತ್ತರ ಕನ್ನಡ (Uttara Kannada) ಜಿಲ್ಲೆಯ ಹೊನ್ನಾವರ ತಾಲೂಕಿನ ಭಾಸ್ಕೇರಿಯಲ್ಲಿ ಹಲವು ವರ್ಷಗಳ ಹಿಂದೆ ನಿರ್ಮಾಣವಾಗಿರುವ ಸಣ್ಣ ಚೆಕ್ ಡ್ಯಾಂ ಹಾಗೂ ಇದೇ ಹೊಳೆಯ ಬದಿ ಇತ್ತೀಚೆಗೆ ನಿರ್ಮಾಣ ಮಾಡಲಾಗಿರುವ ಪಿಚ್ಚಿಂಗ್. 2009-10ನೇ ಸಾಲಿನಲ್ಲಿ ಭಾಸ್ಕೇರಿ ಹೊಳೆಯಲ್ಲಿ ಸೇತುವೆಗಿಂತ ಕೊಂಚ ದೂರದಲ್ಲಿ 27 ಲಕ್ಷ ರೂ. ವೆಚ್ಚದಲ್ಲಿ ಸಣ್ಣ ಚೆಕ್ ಡ್ಯಾಂ ನಿರ್ಮಾಣ ಮಾಡಲಾಗಿತ್ತು. ಈ ಯೋಜನೆಯಲ್ಲಿ ಕೇವಲ ಪಿಲ್ಲರ್ಸ್ ನಿರ್ಮಾಣ ಮಾಡಲಾಗಿದ್ದು, ಒಂದು ಬಾರಿ ಇದಕ್ಕೆ ಕಬ್ಬಿಣದ ಪ್ಲೇಟ್ ಹಾಕಲಾಗಿತ್ತು.
Uttara Kannada: ಮಾರುಕಟ್ಟೆಗೆ ಲಗ್ಗೆ ಇಟ್ಟ ಕರಿ ಈಶಾಡ್ ಮಾವಿನ ಹಣ್ಣು: ಖರೀದಿಗೆ ಮುಗಿಬಿದ್ದ ಜನತೆ
ಆದರೆ, ಕಾಲ ಕ್ರಮೇಣ ಆ ಪ್ಲೇಟ್ ತುಕ್ಕು ಹಿಡಿದು ಇನ್ನೊಂದೆಡೆ ಬಿದ್ದುಕೊಂಡಿದೆ. ಯಾವಾಗ ಈ ಸಣ್ಣ ಚೆಕ್ ಡ್ಯಾಂ ನಿರ್ಮಾಣ ಮಾಡಲಾಗಿದೆಯೋ ಅಂದಿನಿಂದ ಈ ಪ್ರದೇಶದ ಜನರಿಗೆ ನೆರೆ ಕಾಟ ತಪ್ಪಿದಂತಿಲ್ಲ. ಪ್ರತೀ ಮಳೆಗಾಲದಲ್ಲಿ ಈ ಚೆಕ್ ಡ್ಯಾಂ ತಳಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಕಸ ತುಂಬುವುದಲ್ಲೇ, ಹೊಳೆಯಲ್ಲಿ ಹರಿದುಬರುವ ಬೃಹತ್ ಮರಗಳು ಕೂಡಾ ಇಲ್ಲೇ ಸಿಲುಕಿಕೊಳ್ಳುತ್ತವೆ. ಇದರಿಂದ ನೀರು ಸರಾಗವಾಗಿ ಹರಿಯಲಾಗದೆ ತುಂಬಿಕೊಂಡು ಪಕ್ಕದಲ್ಲೇ ಇರೋ ತೋಟಗಳಿಗೆ ಹಾಗೂ ಹಲವು ಮನೆಗಳಿಗೆ ಪ್ರತೀ ವರ್ಷ ಹೊಕ್ಕುತ್ತಿದೆ. ಅವೈಜ್ಞಾನಿಕವಾಗಿ ಈ ಪ್ರದೇಶದಲ್ಲಿ ಸಣ್ಣ ಚೆಕ್ ಡ್ಯಾಂ ನಿರ್ಮಾಣ ಮಾಡಲಾಗಿದ್ದು, ಇದರಿಂದಾಗಿಯೇ ಸ್ಥಳೀಯರು ಪ್ರತೀ ವರ್ಷ ಸಂಕಷ್ಟ ಎದುರಿಸುತ್ತಿದ್ದಾರೆ.
ಈ ಪ್ರದೇಶದಲ್ಲಿ ಹೆಚ್ಚು ನೆರೆ ಕಾಣಿಸಿಕೊಂಡಿದ್ದರಿಂದಲೇ ಸ್ಥಳೀಯ ನಿವಾಸಿಯೋರ್ವರು ಕಳೆದ ಮಳೆಗಾಲದ ಸಮಯದಲ್ಲಿ 5-6 ತೆಂಗಿನ ಮರ, ಪಂಪ್ ಹೌಸ್ ಹಾಗೂ ಪಂಪ್‌ವೊಂದನ್ನು ಕಳೆದುಕೊಂಡಿದ್ದಾರೆ. ಈ ಕಾರಣದಿಂದ ಈ ಅವೈಜ್ಞಾನಿಕ ಚೆಕ್ ಡ್ಯಾಂ ತೆಗೆಯಿಸಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. ಇನ್ನು ಈ ಅವೈಜ್ಞಾನಿಕ ಸಣ್ಣ ಚೆಕ್ ಡ್ಯಾಂ ಬಳಿಯೇ ಇತ್ತೀಚೆಗೆ ಒಂದೆಡೆ 50ಲಕ್ಷ ರೂ. ವೆಚ್ಚದಲ್ಲಿ ಪಿಚ್ಚಿಂಗ್ ಕೂಡಾ ನಿರ್ಮಾಣ ಮಾಡಲಾಗಿದೆ. ಸುಮಾರು 30 ಮೀಟರ್ ಕಾಂಕ್ರೀಟ್ ಪಿಚ್ಚಿಂಗ್ ಮಾಡಲಾಗಿದ್ದು, ಉಳಿದಂತೆ ಈ ಹಿಂದೆ ಇದ್ದ ಕೆಂಪು ಕಲ್ಲಿನ ಪಿಚ್ಚಿಂಗ್ ತೆಗೆದು ಸುಮಾರು150 ಮೀಟರ್ ಕಪ್ಪು ಕಲ್ಲಿನ ಪಿಚ್ಚಿಂಗ್ ಮಣ್ಣಿನ ಸಹಾಯದಿಂದ ಬೇಕಾಬಿಟ್ಟಿ ನಿರ್ಮಾಣ ಮಾಡಲಾಗಿದೆ. ಈ ಪಿಚ್ಚಿಂಗ್ ನಿರ್ಮಾಣದ ವಿರುದ್ಧ ದಿಕ್ಕಿನಲ್ಲಿ ಮನೆಗಳಿದ್ದು, ಈ ಮನೆಗಳೇ ಕಳೆದ ವರ್ಷದ ಮಳೆಗಾಲದ ಸಮಯದಲ್ಲಿ ನೆರೆಯಿಂದಾಗಿ ಭಾರೀ ಸಮಸ್ಯೆ ಎದುರಿಸಿದ್ದವು.
ಚಾರಣ ಪ್ರಿಯರಿಗೆ ಯೋಗ್ಯ ಸ್ಥಳ ಇತಿಹಾಸ ಪ್ರಸಿದ್ಧ ಭೀಮನ ಬುಗರಿ
ಈ ಬಾರಿ ಕೂಡಾ ನೆರೆ ಕಾಣಿಸಿಕೊಂಡರೆ ಮತ್ತಷ್ಟು ತೆಂಗಿನ ಮರಗಳು, ಕೆಲವು ಮನೆಗಳ ಶೌಚಾಲಯ, ಪಂಪ್‌ಹೌಸ್ ಕುಸಿದು ಬೀಳುವ ಸಾಧ್ಯತೆಗಳಿರುವುದಲ್ಲದೇ, ಕೆಲವರ ಮನೆಗಳ ಒಳಗೂ ನೆರೆ ನೀರು ಹೊಕ್ಕುವ ಸಾಧ್ಯತೆಗಳಿವೆ. ಈ ಪಿಚ್ಚಿಂಗ್ ಪಕ್ಕದ ಮನೆಗಳಿರುವ ಬದಿಯಲ್ಲಿ ನಿರ್ಮಾಣ ಮಾಡಬೇಕಿತ್ತೋ ಹೊರತು, ಮನೆಗಳಿಲ್ಲದ ವಿರುದ್ಧ ದಿಕ್ಕಿನಲ್ಲಲ್ಲ. ಆದರೆ, ಇಲ್ಲಿ ಕೂಡಾ ಹಣ ಹೊಡೆಯೋ ಉದ್ದೇಶದಿಂದ ಬೇಕಾಬಿಟ್ಟಿ ಕೆಲಸ ಮಾಡಲಾಗಿದ್ದು, ಜನರನ್ನು ಮತ್ತೆ ಸಂಕಷ್ಟಕ್ಕೆ ನೂಕುವಂತಾಗಿದೆ. ಒಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಡೆಸುವ ಹಣ ಹೊಡೆಯೋ ಯೋಜನೆಯಿಂದಾಗಿ ಜನಸಾಮಾನ್ಯರು ಸಂಕಷ್ಟ ಎದುರಿಸುವಂತಾಗಿದೆ. ಈ ಕಾರಣದಿಂದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ಪ್ರತಿಕ್ರಿಯಿಸಿ ಇಲ್ಲಿನ ಅವೈಜ್ಞಾನಿಕ ಚೆಕ್ ಡ್ಯಾಂ ತೆಗೆಸಿ, ಮುಂದಿನ ಮಳೆಗೆ ಜನರ ಮನೆಗಳಿರುವ ಪಕ್ಕದಲ್ಲೇ ಮಣ್ಣು ಕುಸಿಯದಂತೆ ಪಿಚ್ಚಿಂಗ್ ಮಾಡಿಕೊಡಬೇಕಿದೆ.