
ಮಂಗಳೂರು (ಮೇ.24): ರಾಜ್ಯದಲ್ಲಿ ಸರ್ಕಾರ ಇದೆಯಾ ಎಂಬುದನ್ನು ನಿರೀಕ್ಷೆ ಮಾಡುತ್ತೀರಾ. ಇದೊಂದು ತೊಗಲುಗೊಂಬೆ ಸರ್ಕಾರ. ಯಾವಾಗ ತೊಲಗುತ್ತದೋ ಗೊತ್ತಿಲ್ಲ. ಈ ಸರ್ಕಾರ ನಿಂತ ನೀರಾಗಿದೆ. ಈ ಸರ್ಕಾರದಲ್ಲಿ ಇಚ್ಛಾಶಕ್ತಿ ಕೊರತೆ ಇದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ.ಸೋಮಣ್ಣ ಟೀಕಿಸಿದ್ದಾರೆ. ನಾನು ಏಳು ಬಾರಿ ಶಾಸಕನಾಗಿದ್ದೇನೆ. ರಾಜ್ಯದ ಆಗುಹೋಗುಗಳನ್ನು ಹತ್ತಿರದಿಂದ ಕಂಡಿದ್ದೇನೆ. ಆದರೆ ಇಂತಹ ನಿರ್ಲಿಪ್ತ ಸರ್ಕಾರವನ್ನು ನೋಡಿಲ್ಲ. ಬಡವರನ್ನು, ಸಾಮಾನ್ಯ ಜನರನ್ನು ಅವರದ್ದೇ ಆದ ಟಾಸ್ಕ್‌ಗಳನ್ನು ಹಾಕಿಕೊಂಡು ಸಂದಿಗ್ಧ ಪರಿಸ್ಥಿತಿಯಲ್ಲೂ ದಾರಿತಪ್ಪಿಸುತ್ತಿದೆ ಎಂದರು.
ಸರ್ಕಾರ 55 ಕೇಸ್ ವಾಪಸ್ ಪಡೆದ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರದ ತಲೆಯಲ್ಲಿ ಏನಿದೆಯೋ ಗೊತ್ತಿಲ್ಲ. ಡಿಕೆ ಶಿವಕುಮಾರ್ ತಲೆಯಲ್ಲಿರುವ ಭಾವನೆಗಳು ಏನು ಗೊತ್ತಿಲ್ಲ. ಜನ ಉತ್ತರ ಕೊಡುವ ಕಾಲ ಹತ್ತಿರ ಬರುತ್ತಿದೆ. ಪ್ರಪಂಚಕ್ಕೆ ಗೊತ್ತಿದೆ ಅವರು ಮಾಡುತ್ತಿರುವ ಪಾಪದ ವ್ಯವಸ್ಥೆಗಳು. ಪಾಪಕ್ಕೆ ಪ್ರಾಯಶ್ಚಿತವಾಗುತ್ತೆ, ಯಾರ ಯಾರ ಓಲೈಕೆ ಮಾಡುತ್ತಿದ್ದಾರೆ ಅನ್ನೊದಕ್ಕಿಂತ ಹೆಚ್ಚಾಗಿ ಅವರು ಮಾಡುತ್ತಿರುವ ಪಾಪದ ವ್ಯವಸ್ಥೆಗಳು ಪ್ರಪಂಚಕ್ಕೆ ಗೊತ್ತಾಗುತ್ತಿದೆ. ಪಾಪದ ವ್ಯವಸ್ಥೆಗೆ ಪ್ರಾಯಶ್ಚಿತ ಕೂಡ ಆಗುತ್ತದೆ.
ರಾಜ್ಯದ ಜನರನ್ನು ಸಾಲದ ಕೂಪಕ್ಕೆ ತಳ್ಳಿದ್ದಾರೆ. ಇನ್ನೊಂದೆಡೆ ರಾಜ್ಯದ ಜನರನ್ನು ಕೂಪಮಂಡೂಕ ಮಾಡಿದ್ದಾರೆ. ಅದಕ್ಕೆ ತಕ್ಕುದಾದ ಪ್ರತಿಫಲ ರಾಜ್ಯದ ಜನ ನೀಡಲಿದ್ದಾರೆ. ಅವಶ್ಯಕತೆ ಇಲ್ಲದ ವಿಚಾರಗಳನ್ನು ಜನರ ಮೇಲೆ ಗೂಬೆ ಕೂರಿಸಲಾಗಿದೆ. ಒಂದು ಸಮಾಜವನ್ನು ಇನ್ನೊಂದು ಸಮಾಜದ ಮೇಲೆ ಎತ್ತಿಕಟ್ಟುವ ಪಾಪದ ಕೆಲಸವನ್ನು ಮಾಡಲಾಗುತ್ತಿದೆ ಎಂದರು. ಕಾಕ್ರೋಚ್ ಜನತಾ ಪಕ್ಷದ ಕುರಿತು ಪ್ರತಿಕ್ರಿಯಿಸಿದ ಅವರು, ಇಂತಹ ಎಷ್ಟೋ ಪಕ್ಷಗಳು ಅಣಬೆಗಳಂತೆ ಹುಟ್ಟಿದೆ, ಹೋಗಿದೆ.
ಸುಳ್ಳನ್ನು ಸತ್ಯವಾಗಿಸುವ ಪ್ರಯತ್ನವಾಗುತ್ತಿದೆ. ನರೇಂದ್ರ ಮೋದಿ ಸರ್ಕಾರ ದೇಶವನ್ನು ಪ್ರಪಂಚದ ಭೂಪಟದಲ್ಲಿ ಎರಡನೇ ಅಥವಾ ಮೊದಲ ಸಾಲಿಗೆ ತೆಗೆದುಕೊಂಡು ಹೋಗಲಿದೆ ಎಂದರು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಆಗಬಾರದಾಗಿತ್ತು. ಅದಕ್ಕೆ ಯಾವ ಕ್ರಮ ಕೈಗೊಳ್ಳಬೇಕೋ, ಅದನ್ನು ವಹಿಸಲಾಗುತ್ತದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ ಎಂದರು. ಸೋಮಣ್ಣ ರಾಜ್ಯ ರಾಜಕಾರಣಕ್ಕೆ ಬರ್ತಾರ ಎಂಬ ಪ್ರಶ್ನೆಗೆ, ನನಗೆ ಇದರ ಬಗ್ಗೆ ಏನೇನೂ ಗೊತ್ತಿಲ್ಲ. ಪ್ರಧಾನ ಮಂತ್ರಿ ಕೆಲಸ ಕೊಟ್ಟಿದ್ದಾರೆ, ಮಾಡುತ್ತಿದ್ದೇನೆ. ಮುಂದಿನ ತೀರ್ಮಾನವನ್ನು ರಾಷ್ಟ್ರ ನಾಯಕರು ಮಾಡಲಿದ್ದಾರೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆ ಕುರಿತು ಪ್ರತಿಕ್ರಿಯೆ ನೀಡಿ, ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು, ಅಧ್ಯಕ್ಷ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ. ಕೆಲವೊಂದು ಸುಧಾರಣೆ ತರಲು ಸಲಹೆಗಳನ್ನು ಕೇಳಿದ್ದಾರೆ. 48 ವರ್ಷದಿಂದ ನಾನು ರಾಜಕಾರಣದಲ್ಲಿದ್ದೇನೆ, ಕೆಲವು ಉಪಯುಕ್ತ ಚಿಂತನೆಗಳು ನಡೆಯುತ್ತಿದೆ. ಈ ಹಿನ್ನೆಲೆ ನನ್ನ ಅನುಭವದ ಆಧಾರದಲ್ಲಿ ಸಲಹೆಗಳನ್ನು ನೀಡಿದ್ದೇನೆ. ಎಲ್ಲ ನಿರ್ಧಾರಗಳನ್ನ ಪಕ್ಷದ ಹಿರಿಯರು ಕೈಗೊಳ್ಳಲಿದ್ದಾರೆ. ರಾಜ್ಯಾಧ್ಯಕ್ಷ ಬದಲಾವಣೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.
ರಾಜ್ಯಸಭೆಗೆ ಎಚ್.ಡಿ. ದೇವೇಗೌಡ ಪುನರಾಯ್ಕೆ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ, ಎನ್‌ಡಿಎ ಮೈತ್ರಿಕೂಟದಲ್ಲಿ ದೇವೇಗೌಡರಿದ್ದಾರೆ. ಈ ನಿಟ್ಟಿನಲ್ಲಿ ರಾಷ್ಟ್ರದ ಪ್ರಧಾನಿ ಮತ್ತು ಹೈಕಮಾಂಡ್ ತೀರ್ಮಾನ ಮಾಡುತ್ತಾರೆ. ದೇವೇಗೌಡರಿಗೆ ನೀಡುವ ಸ್ಥಾನಮಾನದ ಬಗ್ಗೆ ಹೇಳುವಷ್ಟು ದೊಡ್ಡವನು ನಾನಲ್ಲ. ರಾಜ್ಯಸಭೆಗೆ ದೇವೇಗೌಡರನ್ನು ಕಳುಹಿಸುವ ಬಗ್ಗೆ ನನಗೆ ಗೊತ್ತಿಲ್ಲ, ನನ್ನೊಂದಿಗೆ ಯಾರು ಚರ್ಚೆ ಮಾಡಿಲ್ಲ. ಪಕ್ಷ, ನಮ್ಮ ನಾಯಕರು ಏನೂ ತೀರ್ಮಾನ ಮಾಡುತ್ತಾರೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಸಚಿವ ಸೋಮಣ್ಣ ಸ್ಪಷ್ಟಪಡಿಸಿದರು.