
ಬೆಂಗಳೂರು (ಮೇ.23): ಮುಂಗಾರು ಹಂಗಾಮಿಗೆ ರಾಜ್ಯದಲ್ಲಿ ಅಗತ್ಯ ಪ್ರಮಾಣದ ಬಿತ್ತನೆ ಬೀಜ ಲಭ್ಯವಿದೆ. ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ಮಳೆ ಆಗುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಬಿತ್ತನೆ ಬೀಜಗಳನ್ನು ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಿತ್ತನೆ ಬೀಜಗಳ ಸಮರ್ಪಕ ಪೂರೈಕೆಗೆ ಕೃಷಿ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ವಿವರಿಸಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿಗೆ 8960 ಕ್ವಿಂಟಲ್ ಸೋಯಾಬೀನ್, 1344 ಕ್ವಿಂಟಲ್ ಶೇಂಗಾ ಬೀಜಕ್ಕೆ ಅಂದಾಜು ಬೇಡಿಕೆ ಇದೆ. ಈಗಾಗಲೇ 2733 ಕ್ವಿಂಟಲ್ ಸೋಯಾಬೀನ್, 305 ಕ್ವಿಂಟಲ್ ಶೇಂಗಾ ಬೀಜ ದಾಸ್ತಾನು ಮಾಡಲಾಗಿದೆ. ಉಳಿದ ಬೇಡಿಕೆಯನ್ನು ಅಗತ್ಯದ ಆಧಾರದಲ್ಲಿ ಪೂರೈಸಲಾಗುವುದು ಎಂದು ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ರಾಜ್ಯ ಮಟ್ಟದಲ್ಲಿಯೂ ಸೋಯಾಬೀನ್ ಬೀಜಕ್ಕೆ 1.80 ಲಕ್ಷ ಕ್ವಿಂಟಲ್ ಬೇಡಿಕೆ ಅಂದಾಜಿದ್ದು, 2.09 ಲಕ್ಷ ಕ್ವಿಂಟಲ್ ದಾಸ್ತಾನಿದೆ. 70 ಸಾವಿರ ಕ್ವಿಂಟಲ್ ಶೇಂಗಾ ಬೀಜಕ್ಕೆ ಬೇಡಿಕೆ ಇದ್ದು, 74 ಸಾವಿರ ಕ್ವಿಂಟಲ್ ದಾಸ್ತಾನಿದೆ. ಒಟ್ಟಾರೆ ರಾಜ್ಯದಲ್ಲಿ ಎಲ್ಲಾ ಬೆಳೆಗಳ 4.71 ಲಕ್ಷ ಕ್ವಿಂಟಲ್ ಬಿತ್ತನೆ ಬೀಜದ ಬೇಡಿಕೆ ಇದ್ದು, 5.46 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ಲಭ್ಯವಿದೆ ಎಂದು ಹೇಳಿದ್ದಾರೆ.
ರೈತ ಸಂಪರ್ಕ ಕೇಂದ್ರಗಳಲ್ಲಿ ಕ್ಯೂಆರ್ ಕೋಡ್ ವ್ಯವಸ್ಥೆ ಅಳವಡಿಸಿ ಅರ್ಹ ರೈತರಿಗೆ ಪಾರದರ್ಶಕವಾಗಿ ಬೀಜ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಬೀಜ ಲಭ್ಯತೆಯಲ್ಲಿ ಯಾವುದೇ ಕೊರತೆ ಇಲ್ಲದೆ ಇರುವುದರಿಂದ ರೈತರು ಅನಗತ್ಯ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.