ಸಂಗೊಳ್ಳಿ ರಾಯಣ್ಣ ಜನ್ಮಸ್ಥಳ ಅಭಿವೃದ್ಧಿಗೆ ಬದ್ಧ: ಕೇಂದ್ರ ಸಚಿವ ಸುರೇಶ ಅಂಗಡಿ

By Kannadaprabha NewsFirst Published Jan 13, 2020, 12:40 PM IST
Highlights

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಚಾಲನೆ| ಮೇಜರ್‌ ಜನರಲ್‌ ಪ್ರಕಾಶ ಕಲಗೌಡ್ರ, ಪತ್ನಿ ಸಂಗೀತಾ ಅವರನ್ನು ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ನೀಡಿ ಗೌರವಿಸಲಾಯಿತು|ಪ್ರವಾಹದಿಂದ ತತ್ತರಿಸಿ ಜನತೆ ಸಂಕಷ್ಟ ಪರಿಸ್ಥಿತಿಯಲ್ಲಿ ಇರುವಾಗ ಉತ್ಸವವನ್ನು ಸರಳವಾಗಿ ಆಚರಣೆ|

ಬೈಲಹೊಂಗಲ(ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೇದಿಕೆ)(ಜ.13): ದೇಶದ ಪ್ರತಿಯೊಬ್ಬ ನಾಗರಿಕ ವೀರರ ಜೀವನ ಚರಿತ್ರೆಯನ್ನು ಅರಿತುಕೊಳ್ಳುವುದು ಅತೀ ಅವಶ್ಯವಾಗಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದ್ದಾರೆ.

ತಾಲೂಕಿನ ಸಂಗೊಳ್ಳಿ ಗ್ರಾಮದ ಸರ್ಕಾರಿ ಮೈದಾನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ-2020 ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರಾಯಣ್ಣ ಉತ್ಸವನ್ನು ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಸರ್ಕಾರ, ಜಿಲ್ಲಾಡಳಿತ ಪ್ರತಿವರ್ಷ ಉತ್ಸವವನ್ನು ಆಚರಣೆ ಮಾಡುತ್ತಾ ಬಂದಿರುವುದಕ್ಕೆ ಸಂತಸವಾಗಿದೆ. ಯಾರೂ ಇತಿಹಾಸ ಅರಿಯದವನು ಇತಿಹಾಸ ತಿಳಿಯಲು ಸಾಧ್ಯವಿಲ್ಲ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪ್ರವಾಹದಿಂದ ತತ್ತರಿಸಿ ಜನತೆ ಸಂಕಷ್ಟ ಪರಿಸ್ಥಿತಿಯಲ್ಲಿ ಇರುವಾಗ ಉತ್ಸವವನ್ನು ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ವಿಜೃಂಭಣೆಯಿಂದ ಆಚರಣೆ ಆಗಬೇಕು. ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ವೀರರಾಣಿ ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಇವರ ಬಾಂಧವ್ಯದ ಕುರಿತು ಪ್ರಚಾರಕ್ಕಾಗಿ ದೇಶಾದ್ಯಂತ ಪುಸ್ತಕಗಳು ಹೊರತರಬೇಕಾಗಿದೆ. ಇವತ್ತು ಮೇಜರ್‌ ಜನರಲ್‌ ಅಂದಿನ ಜನರಲ್‌ ರಾಯಣ್ಣ ಆಗಿದ್ದರು. ಆಧುನಿಕ ಶಿಕ್ಷಣ ಪದ್ಧತಿ ವೀರರ ಇತಿಹಾಸವನ್ನು ಮಕ್ಕಳಿಗೆ ಮರೆಮಾಚುತ್ತಿದೆ. ರಾಯಣ್ಣನ ಹುಟ್ಟೂರಿನ ಸಮಗ್ರ ಅಭಿವೃದ್ದಿಗೆ ಕೇಂದ್ರ, ರಾಜ್ಯ ಸರ್ಕಾರ ಬದ್ದವಾಗಿದೆ ಎಂದರು. ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದ ಯಾವುದೇ ಜನಾಂಗದ ಜನರಿಗೆ ತೊಂದರೆ ಇಲ್ಲ. ಈ ಕುರಿತು ವಿನಾಕಾರಣ ಪ್ರತಿಪಕ್ಷದವರು ಗೊಂದಲಮಯ ಮಾಡುತ್ತಿರುವುದು ಸರಿಯಿಲ್ಲ ಎಂದರು.

ವಿಧಾನ ಪರಿಷತ್‌ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಕಿತ್ತೂರು ಶಾಸಕ ಮಹಾಂತೇಶ ದೊಡಗೌಡ್ರ ಮಾತನಾಡಿ, ರಾಯಣ್ಣನ ಇತಿಹಾಸ ಅಜರಾಮರವಾಗುವಂತೆ ಸೈನಿಕ ಶಾಲೆ ಕಾಮಗಾರಿ ಪ್ರಗತಿಯಲ್ಲಿದೆ. ತ್ಯಾಗ ಬಲಿದಾನದ ನಾಡಿನ ಕೀರ್ತಿಯ ಇತಿಹಾಸದ ಪುಟಗಳಲ್ಲಿ ಉಳಿಯಲು ಎಲ್ಲರೂ ಶ್ರಮಿಸಬೇಕು ಎಂದರು.

ಸಾನ್ನಿಧ್ಯವನ್ನು ಸಂಗೊಳ್ಳಿ ಹಿರೇಮಠದ ಗುರುಸಿದ್ಧಲಿಂಗೇಶ್ವರ ಸಂಸ್ಥಾನದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ಚನ್ನಮ್ಮನ ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮಿಜಿ ಆರ್ಶೀವಚನ ನೀಡಿದರು.
ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, 150 ಕೋಟಿ ವೆಚ್ಚದ ಸೈನಿಕ ಶಾಲೆ 2022ಕ್ಕೆ ಪ್ರಾರಂಭವಾಗಲಿದೆ. 47ಕೋಟಿ ವೆಚ್ಚದ ಬೇವಿನಕೊಪ್ಪ, ಸಂಗೊಳ್ಳಿ ಬ್ರಿಡ್ಜ್‌ ಶೀಘ್ರದಲ್ಲಿ ಪ್ರಾರಂಭಗೊಳ್ಳಿದೆ. 2.50 ಕೋಟಿ ವೆಚ್ಚದಲ್ಲಿ ಸಂಗೊಳ್ಳಿ ಗ್ರಾಮದಲ್ಲಿ ಸುಸಜ್ಜಿತವಾದ ಆಸ್ಪತ್ರೆ, ಅನೇಕ ಅಭಿವೃದ್ಧಿ ಕಾಮಗಾರಿ ಪ್ರಾರಂಭವಾಗಲಿವೆ ಎಂದರು.

ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ಡ, ಜಿಲ್ಲಾಧಿಕಾರಿ ಡಾ.ಎಸ್‌.ಬಿ.ಬೊಮ್ಮನಹಳ್ಳಿ, ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ರಾಯಣ್ಣ ಪ್ರಾಧಿಕಾರದ ಎಚ್‌.ಮಲ್ಲೇಶಪ್ಪ, ಮೇಜರ್‌ ಜನರಲ್‌ ಪ್ರಕಾಶ ಕಲಗೌಡ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಜಿಪಂ.ಸದಸ್ಯ ಅನಿಲ ಮೇಕಲಮರ್ಡಿ, ತಾಪಂ.ಅಧ್ಯಕ್ಷೆ ನೀಲವ್ವ ಫಕೀರನ್ನವರ ಇದ್ದರು. ಈ ಸಂಧರ್ಬದಲ್ಲಿ ಕಾರ್ಗಿಲ್‌ ಯುದ್ದದಲ್ಲಿ ಭಾಗವಹಿಸಿದ್ದ ಮೇಜರ್‌ ಜನರಲ್‌ ಪ್ರಕಾಶ ಕಲಗೌಡ್ರ,ಪತ್ನಿ ಸಂಗೀತಾ ಅವರನ್ನು ಸನ್ಮಾನಿಸಿ ಸಂಗೊಳ್ಳಿ ರಾಯಣ್ಣ-2020 ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
 

click me!