'ನೆಹರೂ ತಪ್ಪಿನಿಂದ ಚೀನಾ ಭಾರತದೊಂದಿಗೆ ಸದಾ ತಂಟೆ'

By Kannadaprabha NewsFirst Published Dec 7, 2020, 11:28 AM IST
Highlights

ಸ್ವಾತಂತ್ರ್ಯದ ಬಳಿಕ ಭಾರತೀಯ ಸೈನ್ಯವನ್ನು ಸದೃಢಗೊಳಿಸದ ಪರಿಣಾಮ 1962ರಲ್ಲಿ ಚೀನಾ ಆಕ್ರಮಣ| ಭಾರತದ 36 ಸಾವಿರ ಚದರ ಅಡಿ ಪ್ರದೇಶ ಚೀನಾ ಪಾಲು| ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸೇನೆಯಲ್ಲಿ ಗಮನಾರ್ಹ ಬದಲಾವಣೆ| ಕಳೆದ ಆರು ವರ್ಷಗಳಲ್ಲಿ ಭಾರತ ರಕ್ಷಣಾ ವ್ಯವಸ್ಥೆಯಲ್ಲಿನ ಎಲ್ಲ ವಿಭಾಗಗಳಲ್ಲಿಯೂ ಪಾರದರ್ಶಕತೆಗೆ ಆದ್ಯತೆ ನೀಡಿದೆ: ಜೋಶಿ| 

ಹುಬ್ಬಳ್ಳಿ(ಡಿ.07):  ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಭಾರತದ ರಕ್ಷಣಾ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ ಆಗಿದ್ದು, ಒಂದಿಂಚು ಸ್ಥಳವನ್ನೂ ಕಬಳಿಸಲು ಚೀನಾಕ್ಕೆ ನಮ್ಮ ಸೈನಿಕರು ಅವಕಾಶ ಕೊಟ್ಟಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. 

ನಗರದಲ್ಲಿ ಭಾನುವಾರ ನಡೆದ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್‌ ಕ್ಷೇತ್ರದ ಪ್ರಶಿಕ್ಷಣ ವರ್ಗದ 4ನೇ ಗೋಷ್ಠಿಯಲ್ಲಿ ಆತ್ಮನಿರ್ಭರ ಭಾರತ ಸಂಕಲ್ಪ ಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯದ ಬಳಿಕ ಭಾರತೀಯ ಸೈನ್ಯವನ್ನು ಸದೃಢಗೊಳಿಸದ ಪರಿಣಾಮ 1962ರಲ್ಲಿ ಚೀನಾ ಆಕ್ರಮಣವಾಯಿತು. ಭಾರತದ 36 ಸಾವಿರ ಚದರ ಅಡಿ ಪ್ರದೇಶ ಚೀನಾ ಪಾಲಾಯಿತು. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸೇನೆಯಲ್ಲಿ ಗಮನಾರ್ಹ ಬದಲಾವಣೆ ಆಗಿದೆ. ಕಳೆದ ಆರು ವರ್ಷಗಳಲ್ಲಿ ಭಾರತ ರಕ್ಷಣಾ ವ್ಯವಸ್ಥೆಯಲ್ಲಿನ ಎಲ್ಲ ವಿಭಾಗಗಳಲ್ಲಿಯೂ ಪಾರದರ್ಶಕತೆಗೆ ಆದ್ಯತೆ ನೀಡಿದೆ ಎಂದು ತಿಳಿಸಿದ್ದಾರೆ. 

ಸ್ಮಾರ್ಟ್‌ ಯೋಜನೆ ಒಂದೇ ಸಮುಚ್ಚಯದಡಿ ರೂಪಿಸಿ: ಪ್ರಹ್ಲಾದ ಜೋಶಿ

ನೆಹರೂ ತಪ್ಪಿನಿಂದ ಚೀನಾ ಭಾರತದೊಂದಿಗೆ ಸದಾ ತಂಟೆ ಮಾಡುತ್ತಿದೆ. ಟಿಬೇಟ್‌ ವಿರುದ್ಧ ಧ್ವನಿ ಎತ್ತಿದ್ದರಿಂದ ಇಂದು ಚೀನಾ ಭಾರತದ ಗಡಿ ತನಕ ಬಂದಿದೆ. ಪಾಕಿಸ್ತಾನಕ್ಕೆ ಭಾರತವನ್ನು ಹೋಲಿಕೆ ಮಾಡುವುದು ಸೂಕ್ತವಲ್ಲ. ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವವಿಲ್ಲ. ಅರ್ಥವ್ಯವಸ್ಥೆ ಇಲ್ಲವೆ ಇಲ್ಲ. ಅಂತ ದೇಶಕ್ಕೆ ನಾವು ಹೋಲಿಕೆ ಮಾಡಿಕೊಳ್ಳುವುದು ಸಾಧ್ಯವೆ ಎಂದರು.

ಮುಂಬರುವ ದಿನಗಳಲ್ಲಿ ಭಾರತ ಚೀನಾದೊಂದಿಗೆ ಹೋಲಿಕೆ ಮಾಡಿಕೊಂಡು ಸೈನ್ಯದ ಬಲವನ್ನು ವೃದ್ಧಿಸುತ್ತದೆ. 36 ವರ್ಷಗಳಲ್ಲಿ ಭಾರತಕ್ಕೆ ಯುದ್ಧ ವಿಮಾನಗಳಿರಲಿಲ್ಲ. ಪ್ರಧಾನಿ ಮೋದಿ ಭಾರತೀಯ ರಕ್ಷಣಾ ವಲಯದಲ್ಲಿ ಆಧುನಿಕತೆಗೆ ತಕ್ಕಂತೆ ಯುದ್ಧೋಪಕರಣ ಒದಗಿಸಿದರ ಪರಿಣಾಮ ಸದ್ಯ ದೇಶದ ರಕ್ಷಣಾ ವಲಯದಲ್ಲಿ ರಫೇಲ್‌ ಯುದ್ಧ ವಿಮಾನಗಳು ಸೇರ್ಪಡೆ ಆಗುತ್ತಿವೆ. ಲಡಾಕ್‌ನಲ್ಲಿ ಭಾರತೀಯ ಸೈನ್ಯ ಚೀನಾವನ್ನು ಸಮರ್ಥವಾಗಿ ಎದುರಿಸುತ್ತಿದೆ ಎಂದರು. ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ ಸಾಹುಕಾರ, ವೀರಣ್ಣ ಸವಡಿ, ಸಂತೋಷ ಚವ್ಹಾಣ ವೇದಿಕೆಯಲ್ಲಿದ್ದರು.
 

click me!