'ಮಹದಾಯಿ ವಿಚಾರದಲ್ಲಿ ಮರುಪರಿಶೀಲನೆ ಸಮಿತಿ ಆಗುವ ಪ್ರಶ್ನೆಯೇ ಇಲ್ಲ'

By Web DeskFirst Published Nov 23, 2019, 2:30 PM IST
Highlights

ಯಾವುದೇ ರಾಜ್ಯ ಸರ್ಕಾರ ಇಂತಹ ಆರೋಪ ಮಾಡಿದಾಗ ಪರಿಶೀಲನೆ ಮಾಡುವುದು ಸಹಜ| ಯಾವುದೇ ಹೊಸ ಸಮಿತಿ ರಚಿಸಿಲ್ಲ| ಈಗಿರುವ ಅಧಿಕಾರಿಗಳ ಸಮಿತಿಗೆ ಪರಿಶೀಲಿಸಲು ಹೇಳಿದ್ದಾರೆ| ಗೆಜೆಟ್ ನೋಟಿಫಿಕೇಶನ್ ಹೊರಡಿಸಲು ಪೂರ್ವ ತಯಾರಿ ಮಾಡಿಕೊಳ್ಳಲಾಗುತ್ತಿದೆ| ಯೋಜನೆ ಜಾರಿಗೆ ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ| ಏನು ಪ್ರಯತ್ನ ನಡೆಸಿದ್ದೇವೆಂದು ಬಹಿರಂಗವಾಗಿ ಹೇಳಲ್ಲ ಎಂದ ಪ್ರಲ್ಹಾದ್ ಜೋಶಿ| 

ಹುಬ್ಬಳ್ಳಿ(ನ.23): ಮಹದಾಯಿ ವಿಚಾರದಲ್ಲಿ ಮರುಪರಿಶೀಲನೆ ಸಮಿತಿ ಆಗುವ ಪ್ರಶ್ನೆಯೇ ಇಲ್ಲ, ಕಾಂಗ್ರೆಸ್‌ನವರು ಚುನಾವಣೆಗಾಗಿ ಗಿಮಿಕ್ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಹೇಳಿದ್ದಾರೆ. 

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕುಡಿಯುವ ನೀರಿಗೆ ಪರಿಸರ ಇಲಾಖೆಯ ಅನುಮತಿ ಕೇಳಿದ್ದೆವು, ಅವರು ಅನುಮತಿ ಕೊಟ್ಟಿದ್ದಾರೆ.ಗೋವಾದವರು ಕೃಷಿಗೆ ಅನುಮತಿ ಕೇಳಿದ್ದೇವೆ ಎಂದು ಆರೋಪಿಸಿದ್ದಾರೆ.ಕೃಷಿಗಾಗಿ ಕಾಲುವೆ ಜೋಡಿಸಿದ್ದಾರೆಂದು ನಮ್ಮ ವಿರುದ್ಧ ದೂರಿದ್ದಾರೆ. ಮರುಪರಿಶೀಲನೆ ಬಗ್ಗೆ  ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಪರಿಶೀಲನೆ ಮಾಡುವುದಾಗಿ ಹೇಳಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ. 

ಯಾವುದೇ ರಾಜ್ಯ ಸರ್ಕಾರ ಇಂತಹ ಆರೋಪ ಮಾಡಿದಾಗ ಪರಿಶೀಲನೆ ಮಾಡುವುದು ಸಹಜ.ಯಾವುದೇ ಹೊಸ ಸಮಿತಿ ರಚಿಸಿಲ್ಲ. ಈಗಿರುವ ಅಧಿಕಾರಿಗಳ ಸಮಿತಿಗೆ ಪರಿಶೀಲಿಸಲು ಹೇಳಿದ್ದಾರೆ. ಗೆಜೆಟ್ ನೋಟಿಫಿಕೇಶನ್ ಹೊರಡಿಸಲು ಪೂರ್ವ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಯೋಜನೆ ಜಾರಿಗೆ ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ. ಏನು ಪ್ರಯತ್ನ ನಡೆಸಿದ್ದೇವೆಂದು ಬಹಿರಂಗವಾಗಿ ಹೇಳಲ್ಲ ಎಂದು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಹಾರಾಷ್ಟ್ರದಲ್ಲಿ ಆದ ರಾಜಕೀಯ ಬದಲಾವಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಮಹಾರಾಷ್ಟ್ರ ಜನರು ನರೇಂದ್ರ ಮೋದಿ ಮತ್ತು ದೇವೇಂದ್ರ ಫಡ್ನವೀಸ್ ನೇತೃತ್ವಕ್ಕೆ ಮತ ಹಾಕಿದ್ದಾರೆ. ಬಾಳಾಸಾಹೇಬ್ ಜೀವನ, ವಿಚಾರಧಾರೆಯ ಹೋರಾಟಕ್ಕೆ ವಿರುದ್ಧವಾಗಿ ಶಿವಸೇನೆಯವರು ಕಾಂಗ್ರೆಸ್ ಜೊತೆಗೆ ಹೋಗಿದ್ದರು.ದುರಾಸೆ, ದುರಹಂಕಾರದ ಕಾರಣ ಬಿಜೆಪಿ ಸ್ನೇಹ ಬಿಟ್ಟಿದ್ದರು ಎಂದು ಹೇಳಿದ್ದಾರೆ. 

ಮಹಾರಾಷ್ಟ್ರದಲ್ಲಿ ಸ್ಥಿರ ಸರ್ಕಾರದ ಅವಶ್ಯಕತೆ ಇದೆ. ಹೀಗಾಗಿ ಅನಿವಾರ್ಯವಾಗಿ ಎನ್‌ಸಿಪಿಯೊಂದಿಗೆ ನಾವು ಸರ್ಕಾರ ರಚಿಸಿದ್ದೇವೆ. ಸಂಜಯ್ ರಾವುತ್ ಎನ್ನುವ ದುರಹಂಕಾರಿ ಮನುಷ್ಯನಿಗೆ, ಉದ್ಧವ್ ಠಾಕ್ರೆ ಎನ್ನುವ ಅಧಿಕಾರದ ದುರಾಸೆಯ ವ್ಯಕ್ತಿಗೆ ಈ ಪಾಠ ಕಲಿಸುವುದು ಅನಿವಾರ್ಯವಾಗಿತ್ತು. ಕೇಂದ್ರ ಸರ್ಕಾರ ಯಾವುದೇ ರೀತಿಯ ಅಧಿಕಾರ ದುರ್ಬಳಕೆ ಮಾಡಿಕೊಂಡಿಲ್ಲ. ಶಿವಸೇನಾ ಸುಧಾರಿಸಲು ಸಮಯ ಕೊಟ್ಟೆವು, ಸುಧಾರಣೆ ಆಗಲಿಲ್ಲ ಹೀಗಾಗಿ ಅವರ ಸಂಗ ಬಿಡಬೇಕಾಯಿತು. ಶಿವಸೇನಾ ನಮ್ಮನ್ನು ಬ್ಲ್ಯಾಕ್‌ಮೇಲೆ ಮಾಡಲು ಪ್ರಯತ್ನಿಸಿದ್ದರು. ಸಂಪೂರ್ಣ ಎನ್‌ಸಿಪಿ ನಮ್ಮ ಬಳಿ ಬರುತ್ತೆ ನೋಡುತ್ತಿರಿ ಎಂದು ಹೇಳಿದ್ದಾರೆ. 

ಉಪಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಆಗುತ್ತದೆ ಎಂದು ಗುಪ್ತಚರ ವರದಿ ಬಂದಿರುವ ವಿಚಾರದ ಬಗ್ಗೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಯಾವುದೇ ಗುಪ್ತಚರ ಮಾಹಿತಿ ಬಂದಿಲ್ಲ. ನಾನು ಬಿಜೆಪಿ ಹೈಕಮಾಂಡ್‌ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದೇನೆ. ಇನ್ನು ಯಾರಿಗೆ ಇಂತಹ ವರದಿ ಬಂದಿದೆ ನನಗೆ ಗೊತ್ತಿಲ್ಲ. ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವಿದೆ. ಬಹುಮತಕ್ಕೆ ಅಗತ್ಯವಾಗುವ ಸ್ಥಾನಕ್ಕಿಂತ ಹೆಚ್ಚಿನ ಸ್ಥಾನದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ತಿಳಿಸಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.

click me!