
ಮಂಜುನಾಥ
ಮಂಡ್ಯ: ಚಂಡು ಕೈಯಲ್ಲಿದ್ದರೆ ಜಗತ್ತನ್ನೇ ಗೆದ್ದು ಬಿಡುವ ಛಲ, ಗುರಿ ಆಕಾಶದೆತ್ತರ, ಕಣ್ಣು ತುಂಬಾ ಕನಸು. ಆದರೆ, ಕಿತ್ತು ತಿನ್ನುವ ಬಡತನ. ಆದರೂ, ಸತತ ಪರಿಶ್ರಮದೊಂದಿಗೆ ಬಡತನದ ಬೆಂಕಿಯ ನಡುವೆಯೂ ಪ್ರತಿಭೆಯನ್ನು ಅರಳಿಸಿಕೊಂಡು ರಣಜಿ ತಂಡ ಪ್ರವೇಶಿಸಿದ ಮಂಡ್ಯ ಹುಡುಗನ ರೋಚಕ ಯಶೋಗಾಥೆ ಇಲ್ಲಿದೆ ಓದಿ.
ಮಂಡ್ಯದಿಂದ ಕೇವಲ 10 ಕಿ.ಮೀ ದೂರದಲ್ಲಿಲ್ಲದ ಲೋಕಸರ ಎಂಬ ಪುಟ್ಟ ಹಳ್ಳಿ, ಆ ಊರಿನ ಹುಡುಗನೇ ಎಲ್.ಆರ್.ಕುಮಾರ್. ತಾಯಿ ಅಂಗನವಾಡಿ ಕಾರ್ಯಕರ್ತೆ, ಕೂಲಿ ಕೆಲಸ ಮಾಡುವ ತಂದೆ. ದಿನದ ದುಡಿಮೆಯೇ ಬದುಕಿಗೆ ಆಧಾರ. ಕುಟುಂಬದಲ್ಲಿ ಶಾಲೆಯ ಫೀಸ್ ಕಟ್ಟುವುದಕ್ಕೂ ಸಾಧ್ಯವಾಗದ ಕೆಟ್ಟ ಪರಿಸ್ಥಿತಿ ಇತ್ತು.
ಎಲ್.ಆರ್.ಕುಮಾರ್‌ಗೆ ಕ್ರಿಕೆಟ್‌ನಲ್ಲಿ ಎಲ್ಲೆಯಿಲ್ಲದ ಹುಚ್ಚು, ತಾನೂ ಕ್ರಿಕೆಟರನಾಗಬೇಕೆಂಬ ಕನಸನ್ನು ಕಂಡ. ನಾನು ಕ್ರಿಕೆಟರಾಗುತ್ತೇನೆಂದು ಹೆತ್ತವರ ಬಳಿ ಹೇಳಿದಾಗ, ಮಗಾ, ಅದೆಲ್ಲಾ ನಮ್ಮಂಥವರಿಗೆಲ್ಲ, ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗ ಪಡೆದುಕೊಂಡರೆ ನಮಗಷ್ಟೇ ಸಾಕು ಎಂದು ತಾಯಿ ಕಣ್ಣೀರಿಡುತ್ತಾ ಹೇಳಿದರು. ಆದರೆ, ಮಗನಿಗೆ ಹಿಡಿದಿದ್ದ ಕ್ರಿಕೆಟ್ ಹುಚ್ಚು ಕಡಿಮೆಯಾಗಲಿಲ್ಲ. ಮಗನ ಕ್ರಿಕೆಟ್ ವ್ಯಾಮೋಹ ಕಂಡ ಹೆತ್ತವರು ಅವನು ಹೈಸ್ಕೂಲ್ ಹಂತಕ್ಕೆ ಬಂದಾಗ ಕಷ್ಟಪಟ್ಟು ಹಣ ಒಟ್ಟುಗೂಡಿಸಿ ಮಗನಿಗೊಂದು ಕ್ರಿಕೆಟ್ ಜರ್ಸಿ ಮತ್ತು ಕಿಟ್ ಕೊಡಿಸಿದರು. ಅಲ್ಲಿಂದ ಶುರುವಾಗಿದ್ದು ಈ ಮಂಡ್ಯದ ಗಂಡಿನ ನೈಜ ಸಂಗ್ರಾಮ.
ಮಂಡ್ಯದ ಪಿಇಟಿ ಕ್ರೀಡಾಂಗಣದಲ್ಲಿ ಅಭ್ಯಾಸ ಶುರು ಮಾಡಿದ ಕುಮಾರ್, ಅಂಡರ್-14 ಮೈಸೂರು ವಲಯ ತಂಡಕ್ಕೆ ಆಯ್ಕೆಯಾದರು. ಮಂಡ್ಯದಿಂದ ಮೈಸೂರಿಗೆ ಪಂದ್ಯಗಳನ್ನಾಡಲು ಹೋಗಲು ಟೆಂಪೋ ಟ್ರಾವೆಲರ್‌ಫೇರ್ ₹200 ಬೇಕಿತ್ತು. ಕೈಯಲ್ಲಿ ಬಿಡಿಗಾಸಿಲ್ಲದ ಕುಮಾರ್, ಹಳ್ಳಿಗಳಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡಿ ಬಂದ ಹಣದಿಂದಲೇ ರೈಲು ಟಿಕೆಟ್ ಪಡೆದು ಮೈಸೂರಿಗೆ ಪಯಣಿಸುತ್ತಿದ್ದರು. ಹುಡುಗನ ಬದ್ಧತೆ ಕಂಡು ಕೋಚ್ ಮಹಾದೇವ್ ಕ್ರಿಕೆಟ್ ಫೀಸಿನಲ್ಲಿ ರಿಯಾಯ್ತಿ ನೀಡಿ, ಉಚಿತವಾಗಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಟ್ಟರು.
ಫಲವಾಗಿ, 2016-17ರ ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ಕರ್ನಾಟಕ ಅಂಡರ್-16 ತಂಡ ಪ್ರತಿನಿಧಿಸಿದ್ದ ಕುಮಾರ್, ಗೋವಾ, ಆಂಧ್ರಪ್ರದೇಶ, ಹೈದರಾಬಾದ್ ವಿರುದ್ಧ ಆಲ್‌ರೌಂಡ್ ಪ್ರದರ್ಶನ ನೀಡಿ ಮಿಂಚಿದರು.
"ನನ್ನನ್ನು ಕಂಡರೆ ನನ್ನ ತಾಯಿಗೆ ತುಂಬಾ ಆಸೆ. ಸ್ಕೂಲ್ ಫೀಸ್ ಕಟ್ಟಲು ಸಾಧ್ಯವಾಗದಿದ್ದ ಸಮಯದಲ್ಲೂ ನನಗೆ ಕ್ರಿಕೆಟ್ ಕಿಟ್ ಕೊಡಿಸಿದರು. ಅವರ ಆಶೀರ್ವಾದದಿಂದ ನಾನು ಈ ಹಂತಕ್ಕೆ ಬೆಳೆದಿದ್ದೇನೆ. ಇಂದು ನಾನು ರಣಜಿ ತಂಡಕ್ಕೆ ಆಯ್ಕೆಯಾಗಿದ್ದೇನೆ. ನನಗಾಗಿ ತಾಯಿ ತುಂಬಾ ಕಷ್ಟಪಟ್ಟಿದ್ದಾರೆ. ಶಾಲೆ ಫೀಸ್ ಕಟ್ಟಲು ಕಷ್ಟವಿದ್ದಾಗಲೂ ಕ್ರಿಕೆಟ್ ಕಿಟ್ ಕೊಡಿಸಿದರು. ಆದರೆ, ಇವತ್ತು ನನ್ನ ಸಾಧನೆ ಮತ್ತು ರಣಜಿ ಪ್ರವೇಶವನ್ನು ನೋಡಲು ತಂದೆ-ತಾಯಿ ಇಬ್ಬರೂ ಇಲ್ಲ, ರಣಜಿ ಪ್ರವೇಶವನ್ನು ನೋಡಲು ತಂದೆ-ತಾಯಿ ಇಬ್ಬರೂ ಇಲ್ಲ ಎಂದು ಕಣ್ಣೀರಿಡುತ್ತಾರೆ ಎಲ್.ಆರ್.ಕುಮಾರ್."
ಎಲ್.ಆರ್.ಕುಮಾರ್, ಕ್ರಿಕೆಟ್ ಆಟಗಾರ
2023ರ ಮಹಾರಾಜ ಟ್ರೋಫಿ ವೇಳೆ ಈ ಹುಡುಗನ ಕಿಚ್ಚು 'ಪೀಣ್ಯ ಎಕ್ಸ್‌ಪ್ರೆಸ್' ಅಭಿನವ್ ಮಿಥುನ್ ಕಣ್ಣಿಗೆ ಬತ್ತು. ಬೌಲಿಂಗ್ ರನ್ ಅಪ್, ಆಕ್ಷನ್‌ನಲ್ಲಿದ್ದ ದೋಷಗಳನ್ನು ಸರಿಪಡಿಸಿದ ಮಿಥುನ್, ಕಳೆದ ಮೂರು ವರ್ಷಗಳಿಂದ ಕುಮಾರ್‌ಪಾಲಿಗೆ ಸ್ವಂತ ಅಣ್ಣನಂತೆ ನಿಂತರು. ಮೆಟ್ರೋ ಸ್ಟೇಷನ್ ಬಳಿ ಕಾಯುತ್ತಿದ್ದು ಅಭ್ಯಾಸಕ್ಕೆ ಕರೆದೊಯ್ದು ಬೌಲಿಂಗ್ ಪಾಠ ಹೇಳಿಕೊಟ್ಟರು.
ಅತ್ತ ಹುಬ್ಬಳ್ಳ ಟೈಗರ್ಸ್ ತಂಡದಲ್ಲಿ 'ದಾವಣಗೆರೆ ಎಕ್ಸ್‌ಪ್ರೆಸ್' ವಿನಯಕುಮಾರ್ ಗರಡಿಯಲ್ಲಿ ಪಳಗಿದ ಕುಮಾರ್, ಮಹಾರಾಜ ಟ್ರೋಫಿ, ಡಾ.ತಿಮ್ಮಪ್ಪಯ್ಯ ಟ್ರೋಫಿ ಹಾಗೂ KSCA ಲೀಗ್ ಪಂದ್ಯಗಳಲ್ಲಿ ವಿಕೆಟ್‌ಗಳ ಕೊಯ್ಲು ನಡೆಸಿ ಧೂಳೆಬ್ಬಿಸಿದರು. ಇದೀಗ ಕರ್ನಾಟಕ ತಂಡದ ಹೆಡ್ ಕೋಚ್ ಆಗಿರುವ ವಿನಯ್‌ಕುಮಾರ್, ಹಳ್ಳಿಯಿಂದ ಬಂದ ಮತ್ತೊಬ್ಬ ಗ್ರಾಮೀಣ ಪ್ರತಿಭೆಯನ್ನು ಕರ್ನಾಟಕ ರಣಜಿ ತಂಡಕ್ಕೆ ಪ್ರವೇಶಿಸುವಂತೆ ಮಾಡಿದ್ದಾರೆ.