Nirmala Sitharaman Visits Udupi: ಉಡುಪಿಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ, ಶ್ರೀ ಕೃಷ್ಣ ದರ್ಶನ

Published : Jun 13, 2026, 01:06 PM IST
Nirmala Sitharaman Visits Udupi Sri Krishna Matha

ಸಾರಾಂಶ

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉಡುಪಿ ಜಿಲ್ಲಾ ಪ್ರವಾಸ ಕೈಗೊಂಡು, ಪ್ರಸಿದ್ಧ ಶ್ರೀ ಕೃಷ್ಣ ಮಠ, ಕಾಪು ಮಾರಿಗುಡಿ ಹಾಗೂ ಉಚ್ಚಿಲ ಮಹಾಲಕ್ಷ್ಮಿ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರು ಬಿಜೆಪಿ ಜಿಲ್ಲಾ ಪ್ರಶಿಕ್ಷಣ ವರ್ಗ ಕಾರ್ಯಕ್ರಮವನ್ನು ಉದ್ಘಾಟಿಸಿ, ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಉಡುಪಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಉಡುಪಿ ಜಿಲ್ಲೆಗೆ ಆಗಮಿಸಿದ್ದು, ಕರಾವಳಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಉಡುಪಿಯಲ್ಲಿ ಆಯೋಜಿಸಲಾಗಿರುವ ಭಾರತೀಯ ಜನತಾ ಪಕ್ಷದ (BJP) ಜಿಲ್ಲಾ ಪ್ರಶಿಕ್ಷಣ ವರ್ಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಸಚಿವರು, ಈ ಸಂದರ್ಭದಲ್ಲಿ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ: ಕಡಗೋಲು ಕೃಷ್ಣನ ದರ್ಶನ

ಉಡುಪಿಗೆ ಆಗಮಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೊದಲು ಐತಿಹಾಸಿಕ ಪ್ರಸಿದ್ಧ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದರು. ಮಠದ ಕನಕನ ಕಿಂಡಿಯ ಮೂಲಕ ಕಡಗೋಲು ಕೃಷ್ಣನ ಭವ್ಯ ದರ್ಶನ ಪಡೆದ ಸಚಿವರು, ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಕೃಷ್ಣ ಮಠದ ಆವರಣದಲ್ಲಿರುವ ಪುರಾತನ ದೇವಾಲಯಗಳಾದ ಶ್ರೀ ಅನಂತೇಶ್ವರ ಹಾಗೂ ಶ್ರೀ ಚಂದ್ರಮೌಳೀಶ್ವರ ದೇವಸ್ಥಾನಗಳಿಗೂ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು.

ಪರ್ಯಾಯ ಶಿರೂರು ಶ್ರೀಗಳಿಂದ ಗೌರವಾರ್ಪಣೆ

ಶ್ರೀ ಕೃಷ್ಣ ಮಠದ ಭೇಟಿಯ ವೇಳೆ ಪ್ರಸ್ತುತ ಪರ್ಯಾಯ ಪೀಠ ಅಲಂಕರಿಸಿರುವ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರನ್ನು ಕೇಂದ್ರ ವಿತ್ತ ಸಚಿವರು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಪರ್ಯಾಯ ಶಿರೂರು ಮಠಾಧೀಶರು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮಠದ ವತಿಯಿಂದ ಸಾಂಪ್ರದಾಯಿಕವಾಗಿ ಗೌರವಾರ್ಪಣೆ ಮಾಡಿ, ಫಲಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.

ಕಾಪು ಹೊಸ ಮಾರಿಗುಡಿ ಹಾಗೂ ಉಚ್ಚಿಲ ಮಹಾಲಕ್ಷ್ಮೀ ದೇಗುಲಕ್ಕೆ ಭೇಟಿ

ಮಠದ ದರ್ಶನದ ಬಳಿಕ ಸಚಿವರು ಉಡುಪಿ ಜಿಲ್ಲೆಯ ಕಾಪು ತಾಲೂಕಿನಲ್ಲಿರುವ ಪ್ರಸಿದ್ಧ ಕಾರ್ಣಿಕ ಕ್ಷೇತ್ರವಾದ 'ಹೊಸ ಮಾರಿಗುಡಿ' ದೇವಸ್ಥಾನಕ್ಕೆ ಭೇಟಿ ನೀಡಿದರು. ಅಲ್ಲಿ ಜಗನ್ಮಾತೆ ಶ್ರೀದೇವಿಯ ದರ್ಶನ ಪಡೆದು, ವಿಶೇಷ ಪೂಜೆ-ಅರ್ಚನೆಗಳನ್ನು ನೆರವೇರಿಸಿದರು. ದರ್ಶನದ ನಂತರ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳ ಜೊತೆ ಕೆಲಕಾಲ ಸಮಾಲೋಚನೆ ನಡೆಸಿದ ಅವರು, ಕ್ಷೇತ್ರ ಅಭಿವೃದ್ಧಿಯ ಕುರಿತು ಮಾಹಿತಿ ಪಡೆದರು. ತದನಂತರ ಕರಾವಳಿಯ ಮತ್ತೊಂದು ಪ್ರಮುಖ ಧಾರ್ಮಿಕ ಕೇಂದ್ರವಾದ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಾಲಯಕ್ಕೂ ಭೇಟಿ ನೀಡಿ ದೇವಿಯ ಕೃಪೆಗೆ ಪಾತ್ರರಾದರು.

ಬಿಜೆಪಿ ಜಿಲ್ಲಾ ಪ್ರಶಿಕ್ಷಣ ವರ್ಗ ಉದ್ಘಾಟನೆ

ಉಡುಪಿ ಜಿಲ್ಲಾ ಪ್ರವಾಸದ ಪ್ರಮುಖ ಉದ್ದೇಶವಾಗಿ, ಕಾಪು ತಾಲೂಕಿನ ಉಚ್ಚಿಲದ ಮಹಾಲಕ್ಷ್ಮೀ ದೇವಾಲಯದ ಆವರಣದಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ "ಬಿಜೆಪಿ ಜಿಲ್ಲಾ ಪ್ರಶಿಕ್ಷಣ ವರ್ಗ" ಕಾರ್ಯಕ್ರಮವನ್ನು ಕೇಂದ್ರ ಸಚಿವರು ಅಧಿಕೃತವಾಗಿ ಉದ್ಘಾಟಿಸಿದ್ದು. ಉದ್ಘಾಟನೆಯ ಬಳಿಕ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ದಿಕ್ಸೂಚಿ ಭಾಷಣ ಮಾಡಿದರು. ಸಚಿವರ ಭೇಟಿಯ ಹಿನ್ನೆಲೆಯಲ್ಲಿ ಉಡುಪಿ ಮತ್ತು ಕಾಪು ಭಾಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

PREV
Read more Articles on
click me!

Recommended Stories

Football: ಗ್ರಾಮೀಣ ಫುಟ್ಬಾಲ್ ಪ್ರತಿಭೆಗಳಿಗೆ ಸ್ಥಾಪಿಸಿದ್ದ ಬಳ್ಳಾರಿ ಕ್ರೀಡಾ ವಸತಿ ನಿಲಯ ಬೆಂಗಳೂರಿಗೆ ಶಿಫ್ಟ್!
Karnataka Rain: ರಾಜ್ಯದಲ್ಲಿ ಜೂ.18ರವರೆಗೆ ಮಳೆ ಮುಂದುವರಿಕೆ, ಬೆಂಗಳೂರಿನಲ್ಲಿ ಮಧ್ಯಾಹ್ನ ನಂತರ ಬಿರುಗಾಳಿ ಮಳೆ!