ರಾಮಕೃಷ್ಣ ದಾಸರಿ
ರಾಯಚೂರು (ಫೆ.1) : ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರು ಬುಧವಾರ 2023-24ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದು, ಜಿಲ್ಲೆ ಜನರು ಹಲವು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕರ್ನಾಟಕದಲ್ಲಿ ಚುನಾವಣೆ ಹತ್ತಿರವಾಗುತ್ತಿರುವುದರಿಂದ ರಾಜ್ಯಕ್ಕೆ ಅದರಲ್ಲಿಯೂ ಕಲ್ಯಾಣ ಕರ್ನಾಟಕ ಪ್ರದೇಶದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಬಿಜೆಪಿ ಕೇಂದ್ರ ಸರ್ಕಾರ ರಾಯಚೂರು ಜಿಲ್ಲೆಗೆ ಆದ್ಯತೆ ನೀಡುತ್ತದೆ ಜನರು ಆಸೆಗಣ್ಣನಿಂದ ಎದುರು ನೋಡುತ್ತಿದ್ದಾರೆ.
undefined
ಜಿಲ್ಲೆಯಲ್ಲಿ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ನೀಡಬೇಕು ಎಂಬುದು ಇಲ್ಲಿನ ಜನರ ಪ್ರಮುಖ ಬೇಡಿಕೆಯಾಗಿದೆ. ಇದಕ್ಕಾಗಿ 264 ದಿನಗಳಿಂದ ನಿಂತರವಾಗಿ ಧರಣಿ ಮತ್ತು 14 ದಿನಗಳಿಂದ ಸರಣಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ. ಜಿಲ್ಲೆ ಏಮ್ಸ್ ಬೇಡಿಕೆ ಬಗ್ಗೆ ಜಿಲ್ಲಾಡಳಿತದಿಂದ ಹಿಡಿದು ರಾಜ್ಯ ಸರ್ಕಾರದ ಮುಖಾಂತರ ಕೇಂದ್ರ ಸರ್ಕಾರದ ಗಮನ ಸಹ ಸೆಳೆಯಲಾಗಿದ್ದು, ಹೀಗಾಗಿ ಈ ಬಜೆಟ್ ಜಿಲ್ಲೆಯ ಜನರ ಕುತೂಹಲ ಕೆರಳಿಸಿದೆ. ರಾಯಚೂರು ಜಿಲ್ಲೆಗೆ ಏಮ್ಸ್ ಘೋಷಣೆಯಾಗುವುದೇ ಎಂದು ಜನರು ಎದುರು ನೋಡುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಆಗಮನ: ರಾಯಚೂರಿಗೆ ಘೋಷಣೆಯಾಗುವುದೆ ಏಮ್ಸ್?
ದೇಶದ ಪ್ರತಿಷ್ಠಿತ ಐಐಟಿಯಿಂದ ವಂಚಿತಗೊಂಡಿರುವ ಜಿಲ್ಲೆಗೆ ಹೆಸರಿಗೆ ಮಾತ್ರ ಐಐಐಟಿ(IIIT) ಸಂಸ್ಥೆಯನ್ನು ನೀಡಿರುವ ಕೇಂದ್ರವು ಕಳೆದ ನಾಲ್ಕು ವರ್ಷಗಳಿಂದ ಅನುದಾನವನ್ನು ನೀಡದೇ ನಿರ್ಲಕ್ಷ್ಯ ವಹಿಸಿದೆ. ಗದಗ-ವಾಡಿ ರೈಲು ಯೋಜನೆ ಘೋಷಣೆಯಾಗಿ ಎರಡು ದಶಕ ಕಳೆಯುತ್ತಿದ್ದು, ಇನ್ನು ಭೂ ಸ್ವಾಧೀನ ಪ್ರಕ್ರಿಯೆ ಪರಿಪೂರ್ಣಗೊಂಡಿಲ್ಲ. ರಾಯಚೂರು ನಗರದ ಕೇಂದ್ರ ರೈಲು ನಿಲ್ದಾಣದಲ್ಲಿ ಎಸ್ಕಲೇಟರ್ ನಿರ್ಮಾಣ, ಮೇಲ್ದರ್ಜೆಗೇರಿಸಲು ಹೆಚ್ಚಿನ ಅನುದಾನ ನೀಡಬೇಕು ಎನ್ನುವುದು ಜನರ ಒತ್ತಾಸೆಯಾಗಿದೆ.
ನೀತಿ ಆಯೋಗದಿಂದ ಜಾರಿಗೊಂಡಿರುವ ಮಹಾತ್ವಕಾಂಕ್ಷಿ ಜಿಲ್ಲೆಗಳಡಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆ ಸೇರಿಸಿದ್ದು, ಇದರಡಿಯಲ್ಲಿ ಮಕ್ಕಳ, ಮಹಿಳೆಯರ ಆರೋಗ್ಯ ಸುಧಾರಣೆ ಜೊತೆಗೆ ವಿವಿಧ ವಲಯಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನದ ಅಗತ್ಯವಿದ್ದು, ಪ್ರಸಕ್ತ ಬಜೆಟ್‌ನಲ್ಲಿ ಹೆಚ್ಚಿನ ಇದಕ್ಕೆ ಪ್ರಾಶಸ್ತ್ಯ ದೊರೆಯಲಿದೆಯೇ ನೋಡಬೇಕಾಗಿದೆ.
ಪ್ರಸಕ್ತ ಸಾಲಿನಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷಾಚರಣೆ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರ್ಕಾರವು ಸಿರಿಧಾನ್ಯಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹತ್ತು ಹಲವು ರೀತಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುತ್ತಿದೆ. ಕಳೆದ ವರ್ಷ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಯಚೂರಿಗೆ ಬಂದು ಸಿರಿಧಾನ್ಯಗಳ ಸಮಾವೇಶದಲ್ಲಿ ಭಾಗವಹಿಸಿ ಕಲ್ಯಾಣ ಕರ್ನಾಟಕ ಪ್ರದೇಶವನ್ನು ಸಿರಿಧಾನ್ಯಗಳ ಹಬ್ ಅನ್ನಾಗಿ ರೂಪಿಸಲಾಗುವುದು ಎಂದು ಘೋಷಿಸಿ ಹೋಗಿದ್ದರು. ಆ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಸಿರಿಧಾನ್ಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು, ಬೆಳೆಗಳ ಉತ್ಪಾದನೆ ಹೆಚ್ಚಿಸಲು, ಸಂಸ್ಕರಣೆ, ಮಾರುಕಟ್ಟೆವ್ಯವಸ್ಥೆ ಒದಗಿಸಿಕೊಡುವುದರ ಜೊತೆಗೆ ಸಿರಿಧಾನ್ಯಗಳಿಗೆ ಸಂಬಂಧಿಸಿದ ಉದ್ಯಮಿಗಳನ್ನು ಉತ್ತೇಜಿಸುವುದಕ್ಕಾಗಿ ಹೆಚ್ಚಿನ ಆದ್ಯತೆ ಜೊತೆಗೆ ಜಿಲ್ಲೆಗೆ ವಿಶೇಷ ಅನುದಾನವನ್ನು ನೀಡುವ ನಿರೀಕ್ಷೆ ಜನ ಹೊಂದಿದ್ದಾರೆ.
Raichuru: ಏಮ್ಸ್ ಮಂಜೂರು ಮಾಡಲು ಒತ್ತಾಯಿಸಿ ಬೃಹತ್ ಪ್ರತಿಭಟನೆ
ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಜಿಲ್ಲೆಗೆ ಏಮ್ಸ್ ಘೋಷಣೆ, ರೈಲು ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಗತ್ಯ ಅನುದಾನ, ಈ ಭಾಗದಲ್ಲಿ ಹೊಸ ಉದ್ಯಮಕ್ಕೆ ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ವಿಶೇಷ ಯೋಜನೆ ಘೋಷಣೆ ನಿರೀಕ್ಷೆಯಿದ್ದು, ಬಜೆಟ್‌ನಲ್ಲಿ ಜಿಲ್ಲೆಗೆ ಯಾವ ರೀತಿಯ ಆದ್ಯತೆ ನೀಡಲಿದೆ ಎನ್ನುವುದನ್ನು ನೋಡಬೇಕಾಗಿದೆ.
-ವೈ.ಪ್ರಸಾದರಾವ್, ವ್ಯಾಪಾರಿ, ರಾಯಚೂರು