Union Budget 2023: ಅಂಜನಾದ್ರಿ ಅಭಿವೃದ್ಧಿಗೆ ಸಿಕ್ಕಿತೇ ಅನುದಾನ?

By Kannadaprabha NewsFirst Published Feb 1, 2023, 9:42 AM IST
Highlights

ಗಂಗಾವತಿ ತಾಲೂಕಿನ ಕಿಷ್ಕಿಂಧೆಯ ಪ್ರದೇಶದ ಆಂಜನೇಯನ ಜನ್ಮಸ್ಥಳವಾಗಿರುವ ಅಂಜನಾದ್ರಿ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಅನುದಾನ ನೀಡುವುದೇ ಎಂದು ಜಿಲ್ಲೆಯ ಜನ ಕುತೂಹಲದಿಂದ ಕಾಯುತ್ತಿದ್ದಾರೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ (ಫೆ.1) : ಗಂಗಾವತಿ ತಾಲೂಕಿನ ಕಿಷ್ಕಿಂಧೆಯ ಪ್ರದೇಶದ ಆಂಜನೇಯನ ಜನ್ಮಸ್ಥಳವಾಗಿರುವ ಅಂಜನಾದ್ರಿ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಅನುದಾನ ನೀಡುವುದೇ ಎಂದು ಜಿಲ್ಲೆಯ ಜನ ಕುತೂಹಲದಿಂದ ಕಾಯುತ್ತಿದ್ದಾರೆ.

ಪೇಜಾವರ ಶ್ರೀಗಳೇ ಅಂಜನಾದ್ರಿಯನ್ನು ಅಯೋಧ್ಯೆ ಮಾದರಿಯಲ್ಲಿ ಅಭಿವೃದ್ಧಿ ಮಾಡಬೇಕು ಎಂದು ಹೇಳಿರುವುದರಿಂದ ಕೇಂದ್ರ ಬಜೆಟ್‌ನಲ್ಲಿ ನಿರೀಕ್ಷೆ ಮತ್ತಷ್ಟುಹೆಚ್ಚಿದೆ. ಸ್ವತಃ ಪ್ರಧಾನಿಯವರ ಕಚೇರಿಯಿಂದ ಖಾಸಗಿಯಾಗಿಯೂ ಅಭಿವೃದ್ಧಿ ಮಾಡುವುದಕ್ಕೆ ಸಾಮಾಜಿಕ ಹೊಣೆಗಾರಿಕೆ ನಿಧಿ ನೀಡುವಂತೆ ಕೋರಿಕೆಯ ಪತ್ರವೊಂದು ಬೃಹತ್‌ ಕೈಗಾರಿಕೆಗಳಿಗೆ ಬಂದಿದೆ ಎನ್ನಲಾಗುತ್ತಿದೆಯಾದರೂ ಅದಿನ್ನೂ ಕಾರ್ಯರೂಪ ಪಡೆದಿಲ್ಲ. ಇದರಿಂದ ಅಂಜನಾದ್ರಿಯ ಅಭಿವೃದ್ಧಿಯ ಕುರಿತು ಕೇಂದ್ರ ಸರ್ಕಾರದ ಮುಂದೆ ಪ್ರಸ್ತಾವನೆ ಇದೆ ಎನ್ನುವುದು ಪಕ್ಕಾ. ಹೀಗಾಗಿ ಈ ಬಾರಿಯ ಬಜೆಟ್‌ನಲ್ಲಿ ಅಂಜನಾದ್ರಿಗೆ ಕೇಂದ್ರ ಬಜೆಟ್‌ನಲ್ಲಿ ಅನುದಾನ ದೊರೆಯುತ್ತದೆ ಎನ್ನುವುದು ಸ್ಥಳೀಯ ಬಿಜೆಪಿ ಜನಪ್ರತಿನಿಧಿಗಳ ಅನಿಸಿಕೆ.

ಬಿಜೆಪಿ ಸರ್ಕಾರ ಆಂಜನೇಯ ದೇವರಿಗೆ ಅಪಮಾನ ಮಾಡಿದೆ: ವಿ.ಎಸ್‌. ಉಗ್ರಪ್ಪ

ಅಂಜನಾದ್ರಿಯನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಅಲ್ಲದೇ ಫೆ. 15ರಂದು ಅಭಿವೃದ್ಧಿ ಕಾಮಗಾರಿಗಳಿಗೆ ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಅವರಿಂದ ಅಡಿಗಲ್ಲು ಹಾಕಿಸಲು ಸಿದ್ಧತೆ ನಡೆದಿದೆ. ಈ ನಡುವೆ ಕೇಂದ್ರದ ಬಜೆಟ್‌ ಇರುವುದರಿಂದ ವಿಶೇಷ ಕುತೂಹಲ ಕೆರಳಿಸಿದೆ.

ಅಂಜನಾದ್ರಿಯಿಂದ ಅಯೋಧ್ಯೆಗೆ ರೈಲು:

ಅಂಜನಾದ್ರಿಯಿಂದ ರಾಮನ ಜನ್ಮಭೂಮಿಯವರೆಗೂ ರೈಲು ಓಡಿಸುವ ಕುರಿತು ಪ್ರಸ್ತಾಪ ಕಳೆದ ವರ್ಷದಿಂದ ಇದೆಯಾದರೂ ಅದಿನ್ನು ಜಾರಿಯಾಗಿಲ್ಲ. ಇದಕ್ಕಾಗಿ ಹೊಸ ಮಾರ್ಗವನ್ನು ನಿರ್ಮಾಣ ಮಾಡುವ ಅಗತ್ಯವಿಲ್ಲ. ಈಗಾಗಲೇ ಇರುವ ರೈಲು ಮಾರ್ಗವನ್ನೇ ಬಳಸಿ ಒಂದಷ್ಟುಮಾರ್ಗವನ್ನು ವಿಸ್ತರಣೆ ಮಾಡಿದರೆ ಈ ಯೋಜನೆ ಜಾರಿ ಮಾಡಬೇಕಾಗಿದೆ.

ಇದಲ್ಲದೆ ಜಿಲ್ಲೆಯಲ್ಲಿ ಅನೇಕ ರೈಲ್ವೆ ಯೋಜನೆಗಳು, ಹೊಸ ರೈಲುಗಳು ಘೋಷಣೆಯಾಗುವ ನಿರೀಕ್ಷೆ ಇದೆ. ಈಗಾಗಲೇ ಪ್ರಸ್ತಾವನೆಯಾಗಿರುವ ಆಲಮಟ್ಟಿರೈಲ್ವೆ ಯೋಜನೆ ಜಾರಿಗೆ ಮುಂದಾಗುವ ಸಾಧ್ಯತೆ ಇದೆ. ಈ ಕುರಿತು ಸಂಸದ ಸಂಗಣ್ಣ ಕರಡಿ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದು, ಪ್ರಸಕ್ತ ಬಜೆಟ್‌ನಲ್ಲಿ ಯೋಜನೆ ಘೋಷಿಸುವಂತೆ ಮನವಿ ಮಾಡಿದ್ದಾರೆ.

ಕಳೆದ ಮೂವತ್ತು ವರ್ಷಗಳಿಂದ ಕುಂಟುತ್ತಾ ಸಾಗುತ್ತಿರುವ ಮುನಿರಾಬಾದ್‌ ಮೆಹಬೂಬನಗರ ರೈಲ್ವೆ ಯೋಜನೆ ಬಹುತೇಕ ಪೂರ್ಣಗೊಂಡಿದ್ದರೂ ಇನ್ನು ಕಾಮಗಾರಿ ಬಾಕಿ ಇದೆ. ಅದನ್ನು ಪೂರ್ಣಗೊಳಿಸುವ ದಿಸೆಯಲ್ಲಿ ಅನುದಾನದ ಅಗತ್ಯವಿದೆ. ಇದಕ್ಕಿಂತ ಮಿಗಿಲಾಗಿ ಗದಗ- ವಾಡಿ ರೈಲ್ವೆ ಯೋಜನೆಯ ಕಾರ್ಯ ಪ್ರಗತಿಯಲ್ಲಿದ್ದರೂ ವೇಗ ನೀಡಬೇಕಿದೆ.

ಶ್ರೀರಾಮ ಸರ್ಕ್ಯೂಟ್:

ಶ್ರೀರಾಮ ದೇಶಾದ್ಯಂತ ಸುತ್ತಾಡಿರುವ ಮಾರ್ಗ ನಿರ್ಮಿಸಿ ಅದನ್ನು ಅಭಿವೃದ್ಧಿ ಮಾಡುವುದು ಅಲ್ಲದೆ ಪ್ರವಾಸಕ್ಕಾಗಿ ಯೋಜನೆಯನ್ನು ರೂಪಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರ ಈಗಾಗಲೇ ‘ಶ್ರೀರಾಮ ಸಕ್ರ್ಯೂಟ್‌’ಅನ್ನು ಪರಿಪೂರ್ಣವಾಗಿ ಜಾರಿಗೊಳಿಸಲು ಕೇಂದ್ರ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡುವ ನಿರೀಕ್ಷೆ ಇದೆ.

Koppal News: ಅಂಜನಾದ್ರಿ ಅಭಿವೃದ್ಧಿ ಕಾರ್ಯ ಶೀಘ್ರ ಕೈಗೊಳ್ಳಿ: ಸಚಿವ ಆನಂದ್ ಸಿಂಗ್

ಪ್ರಸಕ್ತ ಕೇಂದ್ರ ಬಜೆಟ್‌ನಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರ ಸೇರಿದಂತೆ ರಾಜ್ಯಕ್ಕೆ ಬಹುದೊಡ್ಡ ನಿರೀಕ್ಷೆಯನ್ನಿಡಲಾಗಿದೆ. ಅನೇಕ ಯೋಜನೆಗಳು ಘೋಷಣೆಯಾಗುವ ವಿಶ್ವಾಸವಿದೆ.

ಸಂಗಣ್ಣ ಕರಡಿ, ಸಂಸದರು ಕೊಪ್ಪಳ

ಅಯೋಧ್ಯೆಯಂತೆ ಅಂಜನಾದ್ರಿ ಅಭಿವೃದ್ಧಿಯಾಗಲಿ: ಪೇಜಾವರ ಶ್ರೀ

ಅಯೋಧ್ಯೆ ಮಾದರಿಯಲ್ಲಿ ಅಂಜನಾದ್ರಿ ಪ್ರದೇಶ ಅಭಿವೃದ್ಧಿ ಪಡಿಸುವಂತೆ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಸಲಹೆ ನೀಡಿದರು. ಮಂಗಳವಾರ ನಗರದ ಸತ್ಯನಾರಾಯಣ ಪೇಟೆಯ ವಿಜಯಧ್ವಜ ವಿದ್ಯಾಪೀಠದಲ್ಲಿ ಸಮುದಾಯ ಭವನಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈಗಾಗಲೇ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾಗಿದೆ. ಇದೇ ಮಾದರಿಯಲ್ಲಿ ಅಂಜನಾದ್ರಿ ಅಭಿವೃದ್ಧಿಯಾಗಬೇಕು. ಬರುವ ಭಕ್ತರಿಗೆ ಅನುಕೂಲ ಆಗಬೇಕೆಂದರು.

ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ರಾಜ್ಯ ಸರ್ಕಾರ .120 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ .40 ಕೋಟಿ ಅನುದಾನ ಮಂಜೂರಾಗಿದೆ. ಒಟ್ಟು .160 ಕೋಟಿ ಅನುದಾನದಲ್ಲಿ ಅಂಜನಾದ್ರಿ ದೇಗುಲ ಸೇರಿದಂತೆ ಈ ಪ್ರದೇಶದ ಅಭಿವೃದ್ಧಿ ಕೈಗೊಳ್ಳಲಾಗುತ್ತದೆ ಎಂದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಶ್ರೇಷ್ಠಿ, ವೈಶ್ಯ ಸಮಾಜದ ಮುಖಂಡ ದರೋಜಿ ರಂಗಣ್ಣ ಶೆಟ್ಟಿ, ನಗರಸಭಾ ಸದಸ್ಯ ವಾಸುದೇವ ನವಲಿ, ಶ್ರೀನಿವಾಸಚಾರ ಗೊರೆಬಾಳ, ವಾದಿರಾಜಚಾರ ಕಲ್ಮಂಗಿ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಾಲಿಂಗಪ್ಪ ಬನ್ನಿಕೊಪ್ಪ, ನ್ಯಾಯವಾದಿ ಹನುಮಂತರಾವ ಅಯೋಧ್ಯೆ ಇದ್ದರು.

click me!