ತುಳುನಾಡಿನ ಪುರಾಣ ಪ್ರಸಿದ್ಧ ಕೊಂಡಾಣ ದೈವಸ್ಥಾನದ ನಿರ್ಮಾಣ ಹಂತದ ಕಟ್ಟಡ ಧ್ವಂಸ ಪ್ರಕರಣ ಸಂಬಂಧಿಸಿ ಮೂವರು ಆರೋಪಿಗಳನ್ನ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ವರದಿ- ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್
ಮಂಗಳೂರು (ಮಾ.3): ತುಳುನಾಡಿನ ಪುರಾಣ ಪ್ರಸಿದ್ಧ ಕೊಂಡಾಣ ದೈವಸ್ಥಾನದ ನಿರ್ಮಾಣ ಹಂತದ ಕಟ್ಟಡ ಧ್ವಂಸ ಪ್ರಕರಣ ಸಂಬಂಧಿಸಿ ಮೂವರು ಆರೋಪಿಗಳನ್ನ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಭಾನುವಾರ ಬೆಳಗ್ಗಿನ ಜಾವ ನೂತನ ಭಂಡಾರ ಮನೆ ಧ್ವಂಸಗೈದಿದ್ದ ಮೂರು ಆರೋಪಿಗಳಾದ ಮುತ್ತಣ್ಣ ಶೆಟ್ಟಿ, ಧೀರಜ್ ಹಾಗೂ ಶಿವರಾಜ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕೋಟೆಕಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆನಂದ್ ದೂರಿನಡಿ ಎಫ್ಐಆರ್ ದಾಖಲಾಗಿತ್ತು. ಐಪಿಸಿ 143, 147, 148, 295, 427 r/w 149 ipc and 2A kpdlp act ಅಡಿ ಎಫ್ಐಆರ್ ದಾಖಲಿಸಲಾಗಿದೆ. ಭಂಡಾರ ಮನೆ ಧ್ವಂಸ ಕೃತ್ಯವನ್ನ ಮೂವರು ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಒಟ್ಟು 16 ಗುರಿಕಾರರು ಇರೋ ಕೊಂಡಾಣ ಪಿಲಿಚಾಮುಂಡಿ ದೈವಸ್ಥಾನದ ನೂತನ ಭಂಡಾರ ಮನೆ ನಿರ್ಮಾಣಕ್ಕೆ ವಿರೋಧವಿತ್ತು. ಹೀಗಾಗಿ ಧಾರ್ಮಿಕ ದತ್ತಿ ಕಮಿಷನರ್ ಹಾಗೂ ತಹಶೀಲ್ದಾರ್ ಅವರಿಗೂ ದೂರು ನೀಡಲಾಗಿತ್ತು. ಹೀಗಿದ್ದರೂ ಕಾಮಗಾರಿ ನಡೆಯುತ್ತಿದ್ದ ಕಾರಣ ಧ್ವಂಸ ಮಾಡಿದ್ದೇವೆ ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.
ಜೋಗಿಮಟ್ಟಿ ಅರಣ್ಯಧಾಮದಲ್ಲಿ ನೀರಿಗಾಗಿ ವನ್ಯಜೀವಿಗಳ ಹಾಹಾಕಾರ; ನೀರಿಗಾಗಿ ನಾಡಿಗೆ ಆಗಮನ!
ಕೊಂಡಾಣ ದೈವಸ್ಥಾನದ ಹಿಂದಿನ ಸಂಘರ್ಷ ಏನು?
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕೋಟೆಕಾರು ಗ್ರಾಮದ ಕಾರಣಿಕ ಕೊಂಡಾಣ ಕ್ಷೇತ್ರದಲ್ಲಿ ಶ್ರೀ ಪಿಲಿಚಾಮುಂಡಿ, ಬಂಟ, ವೈದ್ಯನಾಥ ಪರಿವಾರ ದೈವಗಳಿಗೆ ಕ್ಷೇತ್ರಕ್ಕೆ ತಾಗಿಕೊಂಡೇ ನೂತನ ಭಂಡಾರಮನೆ ನಿರ್ಮಾಣಗೊಳ್ಳುತ್ತಿತ್ತು. ಕೊಂಡಾಣ ಕ್ಷೇತ್ರಕ್ಕೆ ಸಂಬಂಧಿಸಿದ ಭಂಡಾರಮನೆ ಖಾಸಗಿ ಗುತ್ತಿನ ಮನೆ ಒಡೆತನದಲ್ಲಿತ್ತು. ಅದರಲ್ಲಿ ಕ್ಷೇತ್ರದ ದೈವಗಳ 15 ಕೋಟಿ ರೂ.ಗೂ ಹೆಚ್ಚು ಬೆಲೆಬಾಳುವ ಒಡವೆಗಳಿದ್ದವು. ಭಂಡಾರ ಮನೆಯನ್ನು ಮುಜರಾಯಿ ಇಲಾಖೆಗೆ ಸೇರಿಸಲು ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಕೃಷ್ಣಶೆಟ್ಟಿ ತಾಮಾರ್ ಶತಾಯಗತಾಯ ಪ್ರಯತ್ನಿಸಿದ್ದರು. ಆದರೆ ಇದಕ್ಕೆ ಭಂಡಾರ ಮನೆಯವರು ಸಮ್ಮತಿ ನೀಡಿರಲಿಲ್ಲ.
ಈ ಹಿನ್ನಲೆಯಲ್ಲಿ ಕ್ಷೇತ್ರದ ದೈವಗಳಿಗೆ ಬೇರೆಯೇ ಭಂಡಾರಮನೆ ನಿರ್ಮಾಣವಾಗಬೇಕೆಂದು ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದ ಕಾರಣ, ಕ್ಷೇತ್ರಕ್ಕೆ ತಾಗಿಕೊಂಡ ಜಮೀನನ್ನು ವ್ಯವಸ್ಥಾಪನಾ ಸಮಿತಿಯವರು ಖರೀದಿಸಿದ್ದರು. ಆ ಜಾಗದಲ್ಲಿ ಕಳೆದ ಜ.8ರಂದು ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಶೆಟ್ಟಿ ತಾಮಾರ್ ಮುಂದಾಳತ್ವದಲ್ಲಿ ನೂತನ ಭಂಡಾರ ಮನೆಗೆ ಶಿಲಾನ್ಯಾಸ ಮಾಡಲಾಗಿತ್ತು. ದಾನಿಗಳ ದೇಣಿಗೆಯಿಂದ ಭಂಡಾರ ಮನೆಯ ಶೇ.80 ಕಾಮಗಾರಿ ಪೂರ್ಣಗೊಂಡಿತ್ತು. ಈಗಿನ ವ್ಯವಸ್ಥಾಪನಾ ಸಮಿತಿಯ ಅಧಿಕಾರ ಅವಧಿ ಮುಗಿದಿದ್ದು, ಸಮಿತಿ ಅಧ್ಯಕ್ಷ ಕೃಷ್ಣಶೆಟ್ಟಿ ತಾಮಾರ್ ಅವರು ಕಳೆದ 2 ದಿವಸಗಳ ಹಿಂದಷ್ಟೇ ಅಧಿಕಾರವನ್ನ ಇಲಾಖೆಗೆ ಹಸ್ತಾಂತರಿಸಿದ್ದರು.
ರಾಮೇಶ್ವರಂ ಕೆಫೆ ಬ್ಲಾಸ್ಟ್ ಆರೋಪಿ ಬಗ್ಗೆ ಎಕ್ಸ್‌ಕ್ಲ್ಯೂಸಿವ್ ಸಾಕ್ಷಿ ಸಿಕ್ಕಿದೆ; ಗೃಹ ಸಚಿವ ಪರಮೇಶ್ವರ
ಕೃಷ್ಣಶೆಟ್ಟಿ ಅಧ್ಯಕ್ಷ ಸ್ಥಾನದಿಂದ ವಿಮುಕ್ತರಾಗುತ್ತಿದ್ದಂತೆ ಏಕಾಏಕಿ ನಿರ್ಮಾಣ ಹಂತದ ಭಂಡಾರ ಮನೆಯನ್ನ ನೆಲಸಮ ಮಾಡಿದ್ದಾರೆ. ಕಾನೂನು ಪ್ರಕಾರವಾಗಿಯೇ ಭಂಡಾರ ಮನೆ ನಿರ್ಮಿಸಲಾಗಿತ್ತು. ಅದಕ್ಕೆ ವಿರುದ್ಧವಾಗಿ ಮುತ್ತಣ್ಣ ಶೆಟ್ಟಿ ಸದಾಕಾಲ ಕೋರ್ಟಿನಲ್ಲಿ ದಾವೆ ಹೂಡುತ್ತಿದ್ದರು. ಅವರ ಚೇಲಾಗಳೇ ಈ ದುಷ್ಕೃತ್ಯ ಎಸಗಿರುವುದಾಗಿ ಆರೋಪ ಕೇಳಿಬಂದಿದೆ. ದೈವಗಳ ಆಭರಣ ಮತ್ತು ಪೂಜಾ ಪರಿಕರಗಳನ್ನು ಇಡುವ ಮನೆಯನ್ನ ಬಂಡಾರ ಮನೆ ಅಂತಾ ಕರೆಯುತ್ತಾರೆ. ನೂರಾರು ವರ್ಷಗಳಿಂದ ಮುತ್ತಣ್ಣ ಶೆಟ್ಟಿ ಕುಟುಂಬಸ್ಥರ ಸುಪರ್ದಿಯಲ್ಲೇ ಇರೋ ಒಡವೆಗಳನ್ನು ದೈವಗಳ ನೇಮೋತ್ಸವದ ದಿನ ದೈವ ಸ್ಥಾನಕ್ಕೆ ತಂದು ನೇಮೋತ್ಸವ ನಡೆಸುತ್ತಿದ್ದರು. ಕಾರ್ಣಿಕ ದೈವದ ಕೋಟ್ಯಾಂತರ ರೂ. ಒಡವೆಗಳ ಅಧಿಪತ್ಯಕ್ಕಾಗಿ ಸಂಘರ್ಷ ಇಲ್ಲಿ ನಡೆಯುತ್ತಿದೆ. ಘಟನೆ ಬೆನ್ನಲ್ಲೇ ಎರಡು ಬಣಗಳ ನಡುವೆ ಸಂಘರ್ಷ ತಾರಕಕ್ಕೆೇರಿದೆ. ದೈವಗಳ ಸಮ್ಮುಖದಲ್ಲಿ ಬಗೆ ಹರಿಯಬೇಕಾದ ವಿವಾದ ಪೊಲೀಸ್ ಠಾಣೆ ಅಂಗಳಕ್ಕೆ ಹೋಗಿದೆ. ಮುಂದೇನಾಗುತ್ತೆ ಕಾದು ನೋಡಬೇಕು.