
ಉಡುಪಿ: ಉಡುಪಿ ರಥಬೀದಿಯಲ್ಲಿ ಅದ್ಧೂರಿಯಾಗಿ ನಡೆದ ವಿಟ್ಲಪಿಂಡಿ ಉತ್ಸವದ ಸಮಾರೋಪದ ವೇಳೆ ಆಕಸ್ಮಿಕ ಅವಘಡ ಸಂಭವಿಸಿದೆ. ರಥೋತ್ಸವದ ಬಳಿಕ ಕೃಷ್ಣನ ಮಣ್ಣಿನ ಮೂರ್ತಿಯನ್ನು ಮಧ್ವ ಸರೋವರಕ್ಕೆ ಕೊಂಡೊಯ್ಯುವಾಗ ಪರ್ಯಾಯ ಶ್ರೀಗಳ ಕೈಯಿಂದ ಮೂರ್ತಿ ಜಾರಿ ಕೆಳಗೆ ಬಿದ್ದಿದೆ.
ನಿನ್ನೆ ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ವಿಟ್ಲಪಿಂಡಿ ಉತ್ಸವ ಅತ್ಯಂತ ಸಡಗರದಿಂದ ನಡೆಯಿತು. ಚಾತುರ್ಮಾಸ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣನ ಮಣ್ಣಿನ ಮೂರ್ತಿಯನ್ನು (ಮೃಣ್ಮಯ ಮೂರ್ತಿ) ರಥದಲ್ಲಿ ಪ್ರತಿಷ್ಠಾಪಿಸಿ ರಥೋತ್ಸವ ನಡೆಸಲಾಗಿತ್ತು. ರಥೋತ್ಸವ ಮುಗಿದ ಬಳಿಕ, ಸಂಪ್ರದಾಯದಂತೆ ಈ ಮಣ್ಣಿನ ಮೂರ್ತಿಯನ್ನು ಮಧ್ವ ಸರೋವರದಲ್ಲಿ ವಿಸರ್ಜಿಸಲು ಕೊಂಡೊಯ್ಯಲಾಗುತ್ತಿತ್ತು.
ಪರ್ಯಾಯ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಅವರು ರಥಾರೂಢವಾಗಿದ್ದ ಕೃಷ್ಣನ ಮೂರ್ತಿಯನ್ನು ಕೆಳಗಿಳಿಸಿ, ಮಧ್ವ ಸರೋವರಕ್ಕೆ ವಿಸರ್ಜನೆಗಾಗಿ ಕೊಂಡೊಯ್ಯುತ್ತಿದ್ದರು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಮೂರ್ತಿಯು ಸ್ವಾಮೀಜಿಯವರ ಕೈಯಿಂದ ಕೆಳಗೆ ಬಿದ್ದಿದೆ. ಪರಿಣಾಮವಾಗಿ ಮಣ್ಣಿನ ಮೂರ್ತಿಯು ಭಗ್ನಗೊಂಡಿದೆ ಎಂದು ತಿಳಿದುಬಂದಿದೆ.
ಉತ್ಸವದ ಪ್ರಮುಖ ಘಟ್ಟದಲ್ಲಿ ನಡೆದ ಈ ಘಟನೆಯಿಂದ ಭಕ್ತರಲ್ಲಿ ಆತಂಕ ಮತ್ತು ಆಶ್ಚರ್ಯ ಉಂಟಾಗಿದೆ. ಪ್ರತಿ ವರ್ಷವೂ ಮಣ್ಣಿನ ಮೂರ್ತಿಯನ್ನು ಮಧ್ವ ಸರೋವರದಲ್ಲಿ ವಿಸರ್ಜಿಸುವುದು ಪದ್ಧತಿಯಾಗಿದ್ದು, ವಿಸರ್ಜನೆಗೆ ಕೆಲವೇ ಕ್ಷಣಗಳಿರುವಾಗ ಈ ಆಕಸ್ಮಿಕ ಸಂಭವಿಸಿದೆ.