
ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟವೂ ಹಿಂದುಳಿದ ಜಾತಿಗಳ ಬೃಹತ್ ಜನ ಜಾಗೃತಿ ಸಮಾವೇಶವನ್ನು ಇದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಸಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಚಿಕ್ಕಬಳ್ಳಾಪುರ ಶಾಸಕ ಪ್ರದೀಕ್ ಈಶ್ವರ್ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಹೇಳುವ ಮೂಲಕ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ನಾನು ರಾಜಕಾರಣಕ್ಕೆ ಬಂದು ಮೂರು ವರ್ಷ ಆಗಿದೆ. ನಮ್ಮ ಸಿದ್ದರಾಮಯ್ಯ ಅವರ ಬಂದು 45 ವರ್ಷಗಳು ಆಗಿದೆ. ನನಗೆ ಅನಿಸಿದೆ ಯಾಕಪ್ಪ ರಾಜಕೀಯಕ್ಕೆ ಬಂದೇ ಗುರು ಅಂತ, ಆದರೆ 45 ವರ್ಷ ಕಾಲ ಹೋರಾಟ ಮಾಡಿದ್ದಾರೆ. ನನ್ನ ಎದೆಯಲ್ಲಿ ರಾಮನೂ ಇದ್ದಾನೆ, ಸಿದ್ದರಾಮಯ್ಯರೂ ಇದ್ದಾರೆ. ಸಿದ್ದರಾಮಯ್ಯ ಕುರುಬ ನಾಯಕ ಮಾತ್ರವಲ್ಲ ಅಹಿಂದ ನಾಯಕ, ಕುರಿ ಕಾಯುವವ ಅಂತ ಟೀಕೆ ಮಾಡುತ್ತಿದ್ದರು. ಆದರೆ ದಾಖಲೆ ಬಜೆಟ್ ಮಂಡಿಸಿದ ಖ್ಯಾತಿ ಸಿದ್ದರಾಮಯ್ಯಗೆ ಇದೆ ಎಂದು ಹೇಳಿದರು. ಅಲ್ಲದೇ ಭಾಷಣದ ಅಂತ್ಯದಲ್ಲಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಎರಡೆರಡು ಬಾರಿ ಘೋಷಣೆ ಕೂಗಿದರು.
ಸಚಿವ ಸಂತೋಷ್ ಲಾಡ್ ಮಾತನಾಡಿ, ಹಿಂದುಳಿದ ವರ್ಗಗಳ ಹೋರಾಟ ಪ್ರಾರಂಭ ಆಗಿ 25 ವರ್ಷವಾಗಿದೆ. ತಮಿಳುನಾಡಿನಲ್ಲಿ ಶೇಕಡಾ 65 ಮೀಸಲಾತಿ ಇದೆ. ಇಡೀ ಭಾರತದಲ್ಲಿ ಶೇಕಡಾ 45-50 ಹಿಂದುಳಿದ ವರ್ಗಗಳ ಜನಸಂಖ್ಯೆ ಇದೆ. ಎಲ್ಲರಿಗೂ ಸಮಪಾಲು ಸಮ ಬಾಳು ಆಗಬೇಕು. ವಿಧಾನಸಭೆ ಮತ್ತು ಲೋಕಸಭೆಯಲ್ಲೂ ಒಬಿಸಿಗೆ ಮೀಸಲಾತಿ ನೀಡಬೇಕು. ಒಬಿಸಿ ಕಾಲಂ ಅನ್ನು ಕೇಂದ್ರ ಸರ್ಕಾರ ಗಣತಿಯಿಂದ ತೆಗೆದುಬಿಟ್ಟಿದೆ. 60 ಕೋಟಿಗೂ ಹೆಚ್ಚು ಜನಸಂಖ್ಯೆ ಒಬಿಸಿ ವರ್ಗದವರು ದೇಶದಲ್ಲಿದ್ದಾರೆ. ಸಿದ್ದರಾಮಯ್ಯ ಆಯಸ್ಸು, ಆರೋಗ್ಯ ಹೆಚ್ಚಾಗಲಿ ಎಂದು ಹೇಳಿದರು.
ಇನ್ನು, ಸಮಾವೇಶದಲ್ಲಿ ಸಿದ್ದರಾಮಯ್ಯ ಅವರ ಎದುರೇ, ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡಬೇಕು ಎಂದು ಆಗ್ರಹಿಸುವ ಬ್ಯಾನರ್ ಪ್ರದರ್ಶನ ಮಾಡಿ ಬೆಂಬಲಿಗರು ಆಗ್ರಹಿಸಿದರು. ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಸಮಾವೇಶದಲ್ಲಿ, ಸಚಿವ ಮಧು ಬಂಗಾರಪ್ಪ, ಅಜಯ್ ಸಿಂಗ್, ಶಾಸಕ ಬಿಬಿ ಚಿಮ್ಮನಕಟ್ಟಿ, ಉಮೇಶ್ ಮೇಟಿ, ಬಸವರಾಜ ಶಿವಣ್ಣನವರ್, ಎಂಎಲ್ಸಿ ಗಾಯತ್ರಿ ಶಾಂತೇಗೌಡ, ನಾಗರಾಜ್ ಯಾದವ್ ಭಾಗಿಯಾಗಿದ್ದರು.