Udupi Rains; ಬೈಂದೂರು ಮಳೆ ದುರಂತ, ನೀರಿನಲ್ಲಿ ಕೊಚ್ಚಿ ಹೋದ ಬಾಲಕಿ!

By Gowthami KFirst Published Aug 8, 2022, 10:45 PM IST
Highlights

ಕರಾವಳಿ ಜಿಲ್ಲೆ ಉಡುಪಿಯಲ್ಲಿ ಮಳೆ ಅವಾಂತರ ಮುಂದುವರೆದಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಮತ್ತು ನೆರೆಗೆ ತುತ್ತಾಗಿರುವ ಬೈಂದೂರು ತಾಲೂಕಿನಲ್ಲಿ. ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ 2ನೇ ತರಗತಿ ವಿದ್ಯಾರ್ಥಿನಿ ಹೊಳೆಯ ನೀರಿನಲ್ಲಿ ಕೊಚ್ಚಿಹೋಗಿದ್ದಾಳೆ.

ಉಡುಪಿ (ಆ.8): ಕರಾವಳಿ ಜಿಲ್ಲೆ ಉಡುಪಿಯಲ್ಲಿ ಮಳೆ ಅವಾಂತರ ಮುಂದುವರೆದಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಮತ್ತು ನೆರೆಗೆ ತುತ್ತಾಗಿರುವ ಬೈಂದೂರು ತಾಲೂಕಿನಲ್ಲಿ. ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ 2ನೇ ತರಗತಿ ವಿದ್ಯಾರ್ಥಿನಿ ಹೊಳೆಯ ನೀರಿನಲ್ಲಿ ಕೊಚ್ಚಿಹೋಗಿದ್ದಾಳೆ. ಸೂಕ್ತ ಸಂಪರ್ಕ ಸೇತುವೆ ಇಲ್ಲದಿರೋದೆ ದುರ್ಘಟನೆಗೆ ಕಾರಣ. ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಸನ್ನಿಧಿ ಎಂಬ ಎರಡನೇ ತರಗತಿವಿದ್ಯಾರ್ಥಿನಿ ಶಾಲೆ ಬಿಟ್ಟು ಮನೆಗೆ ವಾಪಾಸ್ಸಾಗುತ್ತಿದ್ದ ವೇಳೆ ಕಾಲುಸಂಕ ದಾಟುವಾಗ ಆಯತಪ್ಪಿ ಬಿದ್ದಿದ್ದಾಳೆ.  ಸುತ್ತಮುತ್ತಲಿದ್ದವರು ಬರುವ ವೇಳೆ ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದಾಳೆ.ಬೊಳಂಬಳ್ಳಿಯ ಮಕ್ಕಿಮನೆ ಮನೆ ಪ್ರದೀಪ್ ಪೂಜಾರಿ ಹಾಗೂ ಸುಮಿತ್ರಾ ಅವರ ಪುತ್ರಿ  ಸನ್ನಿಧಿಗಾಗಿ ಸುತ್ತಮುತ್ತಲ ಪ್ರದೇಶಗಳಲ್ಲಿ ಹುಡುಕಾಟ ನಡೆದರೂ ಪತ್ತೆಯಾಗಿಲ್ಲ. 

ಚಪ್ಪರಿಕೆ ಎಂಬಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಸನ್ನಿಧಿ ಸೋಮವಾರ ಮನೆಗೆ ಆಯಾ ಜೊತೆ ವಾಪಾಸ್ಸಾಗುವಾಗ ಬೀಜಮಕ್ಕಿ ಎಂಬಲ್ಲಿ ಅವಘಡವಾಗಿದೆ. ಶಾಲೆ ಬೇಗ ಬಿಟ್ಟ ಕಾರಣ, ಈಕೆಯನ್ನು ಕರೆದೊಯ್ಯಲು ತಾಯಿ ಬಂದಿರಲಿಲ್ಲ. 

ಇಲ್ಲಿ ಹರಿಯುವ ತೊರೆ ಬೊಳಂಬಳ್ಳಿ ನದಿಗೆ ಸೇರುತ್ತದೆ. ನೀರಿನ ರಭಸ ಜೋರಾಗಿದ್ದು ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿರುವ ಸಾಧ್ಯತೆಯಿದೆ. ಸ್ಥಳಕ್ಕೆ ಬೈಂದೂರು ಶಾಸಕರಾದ ಬಿ.ಎಂ ಸುಕುಮಾರ್ ಶೆಟ್ಟಿ  ಭೇಟಿಕೊಟ್ಟು ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. 

ಉಡುಪಿ ಜಿಲ್ಲೆಯಲ್ಲೇ ಬೈಂದೂರು ಅತಿ ಹೆಚ್ಚು ಬಾರಿ ನೆರೆಗೆ ತುತ್ತಾದ ತಾಲೂಕು. ನದಿ ತೊರೆಗಳ ಕವಲುಗಳು, ಕುದ್ರು ಪ್ರದೇಶ ಹೆಚ್ಚಿರುವ ಕಾರಣ ತಾಲೂಕಿನ ಜನ ಮಳೆಗಾಲದಲ್ಲಿ ವಿಪರೀತ ಸಮಸ್ಯೆಗೆ ಒಳಗಾಗುತ್ತಾರೆ. ಶಾಲಾ ಮಕ್ಕಳಂತು ಬಹಳ ಕಷ್ಟಪಟ್ಟು ಓಡಾಡಬೇಕಾದ ಪರಿಸ್ಥಿತಿಯಿದೆ. ಸಂಪರ್ಕ ಸೇತುವೆಗಳು, ಕಿಂಡಿ ಅಣೆಕಟ್ಟು ರಸ್ತೆಗಳು ನಿರ್ಮಾಣ ಶೀಘ್ರ ಆಗಬೇಕಿದೆ.

click me!