ಹೂ ಮಳೆಗರೆದು ದಕ್ಷ ಇನ್ಸ್ಪೆಕ್ಟರ್ ಪ್ರಮೋದ್ ಕುಮಾರ್ ರನ್ನು ಬಿಳ್ಕೊಟ್ಟ ಉಡುಪಿ ಜನತೆ

By Gowthami KFirst Published Dec 9, 2022, 6:18 PM IST
Highlights

ಇತಿಹಾಸದಲ್ಲೇ ಮೊದಲ ಬಾರಿಗೆ ಪೋಲಿಸ್ ಇನ್ಸ್ ಪೆಕ್ಟರ್ ರೊಬ್ಬರಿಗೆ ಪುಷ್ಪಗಳ ಸುರಿ ಮಳೆಗೆರೆದು ಬೀಳ್ಕೊಟ್ಟಿದ್ದಾರೆ.  ನ್ಯಾಯ, ನಿಷ್ಟೆ, ಶುದ್ದ ಹಸ್ತದ ಪೋಲಿಸ್ ಇನ್ಸ್ ಪೆಕ್ಟರ್ ಆಗಿದ್ದ   ಪ್ರಮೋದ್ ಕುಮಾರ್ ವರ್ಗಾವಣೆಯಾಗಿದ್ದು ಬೀಳ್ಕೊಟ್ಟಿದ್ದಾರೆ.

ಉಡುಪಿ (ಡಿ.9): ಸತ್ಯ, ನಿಷ್ಠೆ, ಪ್ರಾಮಾಣಿಕತೆಗೆ ಉಡುಪಿಯ ಜನತೆ ಸದಾ ತಲೆ ಬಾಗುತ್ತಾರೆ. ಸಿನೆಮಾ ನಟ, ನಟಿ, ಸೆಲೆಬ್ರೆಟಿಗಳು ಬಂದರೂ, ಉಡುಪಿಯಲ್ಲಿ ಕಿಮ್ಮತ್ತು ಸಿಗುವುದು ಕಡಿಮೆ. ಪುಷ್ಪಗಳಿಂದ ಸ್ವಾಗತಿಸುವುದಂತೂ ಕನಸಿನ ಮಾತು. ಆದರೆ ಇತಿಹಾಸದಲ್ಲೇ ಮೊದಲ ಬಾರಿಗೆ ಪೋಲಿಸ್ ಇನ್ಸ್ ಪೆಕ್ಟರ್ ರೊಬ್ಬರಿಗೆ ಪುಷ್ಪಗಳ ಸುರಿ ಮಳೆಗೆರೆದು ಬೀಳ್ಕೊಟ್ಟಿದ್ದಾರೆ. ನ್ಯಾಯ, ನಿಷ್ಟೆ, ಶುದ್ದ ಹಸ್ತದ ಪೋಲಿಸ್ ಇನ್ಸ್ ಪೆಕ್ಟರ್ ಆಗಿ  ಶ್ರದ್ದೆಯಿಂದ ಉಡುಪಿ ನಗರ ಠಾಣೆಯ ಪೋಲಿಸ್ ನಿರೀಕ್ಷಕರಾಗಿದ್ದ ಪ್ರಮೋದ್ ಕುಮಾರ್ ವರ್ಗಾವಣೆಯಾಗಿದ್ದು, ಅವರಿಗೆ ಕೊಡವೂರು ದಿವ್ಯಾಂಗ ಸಂಘ, ಬೆಲ್ - ಓ - ಸೀಲ್ ಮಜ್ದೂರ್ ಸಂಘ ಸಂತೆಕಟ್ಟೆ, ಮಠದ ಬೆಟ್ಟು ಯುವಕ ಮಂಡಲ ಜಂಟಿ ಆಶ್ರಯದಲ್ಲಿ ಸನ್ಮಾನ ನಡೆಸಿ, ಬೀಳ್ಕೊಟ್ಟಿದ್ದಾರೆ. ಪ್ರಮೋದ್ ಕುಮಾರ್ ಹೆಸರು ಕೇಳಿದರೇ ರೌಡಿ ಶೀಟರ್ ಗಳ ಎದೆಯಲ್ಲಿ ನಡುಕ ಹುಟ್ಟುತ್ತದೆ. ಎಂತಹ ಕ್ಲಿಷ್ಟಕರ ಪ್ರಕರಣವನ್ನು ಭೇದಿಸುವ ಈ ಅಧಿಕಾರಿಯ ಹೆಸರು ಕೇಳಿದರೇ ಪಾಪಿಗಳ ಲೋಕದ ದೊರೆಗಳು ಬಾಲ ಮುದುರಿಕೊಂಡು ಅನೈತಿಕ ಚಟುವಟಿಕೆ ನಡೆಸುತ್ತಿರಲಿಲ್ಲ. 

ಅಕ್ರಮ ಚಟುವಟಿಕೆಗಳಿಗೆ ಬ್ರೇಕ್:
ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ 5 ಕ್ಲಬ್ ಗಳು, 25 ಕ್ಕೂ ಹೆಚ್ಚು ಮಟ್ಕಾ ಅಡ್ಡಯನ್ನು ಸಂಪೂರ್ಣವಾಗಿ ಬಂದ್ ಮಾಡಿಸಿದ ಕೀರ್ತಿ ಪ್ರಮೋದ್ ಕುಮಾರ್ ಅವರಿಗೆ ಸಲ್ಲುತ್ತದೆ. 

ಹಿಜಾಬ್ ವಿವಾದ ನಿರ್ವಹಣೆ:
ಉಡುಪಿಯಿಂದ ಆರಂಭವಾದ ಹಿಜಾಬ್ ವಿವಾದ ದೇಶದಾದ್ಯಂತ ಗದ್ದಲ ಎಬ್ಬಿಸಿತ್ತು. ಅಂದು ಎಂ.ಜಿ.ಎಮ್ ಕಾಲೇಜಿನಲ್ಲಿ ಹಿಂದೂ ಮತ್ತು ಮುಸ್ಲಿಂ ವಿದ್ಯಾರ್ಥಿಗಳು ಮುಖಾಮುಖಿಯಾದಾಗ, ಸ್ಥಳದಲ್ಲಿ ಇನ್ಸ್ ಪೆಕ್ಟರ್ ಪ್ರಮೋದ್ ಇದ್ದಾರೆ ಎಂಬ ಸುದ್ದಿಯನ್ನು ಕೇಳಿಯೇ ಯಾವೊಬ್ಬ ವಿದ್ಯಾರ್ಥಿಯೂ, ಉದ್ದಟನ ತೋರಿಸುವ ಪ್ರಯತ್ನ ಮಾಡಿರಲಿಲ್ಲ. ಕಾಲೇಜಿನ ಪ್ರಾಂಶುಪಾಲರು ಮತ್ತು ಅಧ್ಯಾಪಕ ವೃಂದದವರ ಮೂಲಕ ವಿದ್ಯಾರ್ಥಿಗಳನ್ನು ಸ್ಥಳದಿಂದ ಕಳುಹಿಸುವಲ್ಲಿ ಯಶಸ್ವಿಯಾದರು.

ಕರೋನಾ ಅವಧಿ ಯಶಸ್ವಿ ನಿರ್ವಹಣೆ:
ಕರೋನಾ ಲಾಕ್ ಡೌನ್ ಅವಧಿಯಲ್ಲಿ ಸ್ವಾತಂತ್ರ್ಯ ಕಳೆದುಕೊಂಡ ಜನರು ಪೋಲಿಸ್ ವ್ಯವಸ್ಥೆಯನ್ನು ದೂರುತ್ತಿರಬೇಕಾದರೇ, ಉಡುಪಿ ನಗರದಲ್ಲಿ ಇಲಾಖೆಯೊಂದಿಗೆ ಜನರು ಸಹಭಾಗಿಗಳಾಗುವಂತೆ ಮಾಡಿ, ಯಶ್ವಸಿಯಾಗಿ ಈ ಅವಧಿಯನ್ನು ನಿಭಾಯಿಸಿದಲ್ಲದೇ, ಕೋವಿಡ್ ಅವಧಿಯಲ್ಲೇ ನೆರವೇರಿದ ಪರ್ಯಾಯ ಉತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿದ ಕೀರ್ತಿ ಪ್ರಮೋದ್ ಕುಮಾರ್ ಮತ್ತು ಅವರ ತಂಡಕ್ಕೆ ಸಲ್ಲುತ್ತದೆ.

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭರ್ಜರಿ ಸರ್ಜರಿ, ನಿನ್ನೆ 108 ಇಂದು 30 ಮಂದಿ ವರ್ಗಾವಣೆ!

 

ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್:
ಮಾಜಿ ಸಚಿವ ಈಶ್ವರಪ್ಪನವರ ಮಂತ್ರಿಗಿರಿ ಕಿತ್ತುಕೊಂಡ ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸನ್ನು ಅನೇಕ ಒತ್ತಡಗಳ ನಡುವೆ ಯಶ್ವಸಿಯಾಗಿ ತನಿಖೆ ಪೂರ್ಣಗೊಳಿಸಿದ್ದಾರೆ. ಅನೇಕ ಪತ್ರಗಳ ನಡುವೆಯೂ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.

ಸರ್ಕಾರದ ಪ್ರಮುಖ ಇಲಾಖೆಗಳ ವರ್ಗಾವಣೆಗೆ ಸಿಎಂ ಬೊಮ್ಮಾಯಿ ಬ್ರೇಕ್‌..!

ಸಾಮಾನ್ಯ ನಾಗರಿಕನು ತನ್ನ ಸಮಸ್ಯೆ ಹೇಳಿಕೊಳ್ಳಲು ಠಾಣೆಗೆ ಬಂದರೇ, ತಾಳ್ಮೆಯಿಂದ ಅವರ ಸಮಸ್ಯೆಯನ್ನು ಆಲಿಸಿ ನ್ಯಾಯ ಒದಗಿಸಿಕೊಡುತ್ತಿದ್ದರು. ದಕ್ಷ ಅಧಿಕಾರಿಯನ್ನು ಗೌರವಿಸುವುದರ ಮೂಲಕ ಸಮಾಜಕ್ಕೆ ಒಂದು ಸಂದೇಶವನ್ನು ನೀಡಿದ್ದೇವೆ. ಪ್ರಮೋದ್ ಕುಮಾರ್ ಅವರಂತೆ ಇತರರು ಪ್ರಾಮಾಣಿಕರಾಗಿರಲಿ ಎಂದು ನಗರಸಭಾ ಸದಸ್ಯ ವಿಜಯ್ ಕೊಡವೂರು ಹೇಳಿದ್ದಾರೆ. ಇನ್ ಪೆಕ್ಟರ್  ಪ್ರಮೋದ್ ಕುಮಾರ್ ಅವರು, ಇದೀಗ ಕರಾವಳಿ ಕವಲು ಪಡೆಗೆ ವರ್ಗಾವಣೆಗೊಂಡಿದ್ದಾರೆ.

click me!