
ಉಡುಪಿ: ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳಿದ್ದ ಬಸ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿ, ಹಲವರು ಗಂಭೀರವಾಗಿ ಗಾಯಗೊಂಡ ಘಟನೆ ಬೈಂದೂರು ತಾಲೂಕಿನ ತ್ರಾಸಿ ಸಮೀಪ ನಡೆದಿದೆ.
ತ್ರಾಸಿ ಬೀಚ್ ಬಳಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ರಸ್ತೆ ಬದಿ ನಿಂತಿದ್ದ ಟ್ಯಾಂಕರ್‌ಗೆ ಅತಿ ವೇಗದಲ್ಲಿ ಬಂದ ಬಸ್ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ತೀವ್ರತೆಗೆ ಬಸ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಪರಿಣಾಮವಾಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಬಸ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು. ಶಂಕರಘಟ್ಟದ ರಂಭಾಪುರಿ ಕಾಲೇಜಿನ ಬಿಕಾಂ ವಿದ್ಯಾರ್ಥಿಗಳು ಕರಾವಳಿ ಭಾಗಕ್ಕೆ ಪ್ರವಾಸಕ್ಕಾಗಿ ಬಂದಿದ್ದು, ಮುರುಡೇಶ್ವರದಿಂದ ಉಡುಪಿಯತ್ತ ಪ್ರಯಾಣಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಸುಮಾರು 47 ಮಂದಿ ಪ್ರಯಾಣಿಸುತ್ತಿದ್ದ ಈ ಬಸ್‌ನಲ್ಲಿ ಡಿಕ್ಕಿಯ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇನ್ನೂ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ತಕ್ಷಣವೇ ಸ್ಥಳೀಯರು ಹಾಗೂ ಪೊಲೀಸರು ಸಮೀಪದ ಆಸ್ಪತ್ರೆಗಳಿಗೆ ಸಾಗಿಸಿದ್ದಾರೆ. ಹೆಚ್ಚಿನ ಗಾಯಾಳುಗಳನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿ ಗಾಯಾಳುಗಳನ್ನು ಹೊರತೆಗೆದು ಆಸ್ಪತ್ರೆಗೆ ರವಾನಿಸಿದರು. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅತಿ ವೇಗವೇ ಅಪಘಾತಕ್ಕೆ ಪ್ರಮುಖ ಕಾರಣವಾಗಿರಬಹುದು ಎಂದು ಶಂಕಿಸಲಾಗಿದ್ದು, ಈ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ರಸ್ತೆ ಬದಿ ನಿಂತಿದ್ದ ವಾಹನಗಳಿಗೆ ಡಿಕ್ಕಿ ಹೊಡೆಯುವಂತಹ ಘಟನೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚಾಲಕರು ವಿಶೇಷ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಈ ದುರ್ಘಟನೆ ಸ್ಥಳೀಯರಲ್ಲಿ ದುಃಖದ ವಾತಾವರಣ ಮೂಡಿಸಿದ್ದು, ಮೃತರ ಗುರುತು ಹಾಗೂ ಗಾಯಾಳುಗಳ ಸ್ಥಿತಿಗತಿ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.