ಬಬ್ಬುಸ್ವಾಮಿ ಕ್ಷೇತ್ರದ ಮೇಲ್ಛಾವಣಿ ನಿರ್ಮಾಣಕ್ಕೆ ಎಸ್ ಡಿಪಿ ಐ ಅಡ್ಡಿ
ಬಿಜೆಪಿ-ಎಸ್ ಡಿಪಿಐ ಒಳ ಮೈತ್ರಿ ಬಗ್ಗೆ ಹಿಂದೂ ಜಾಗರಣ ವೇದಿಕೆ ಸಂಶಯ
ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ ಹಿಂದೂ ಜಾಗರಣ ವೇದಿಕೆ
ಉಡುಪಿ, (ಮೇ.30): ಕರಾವಳಿಯ ದಲಿತ ಸಮುದಾಯದ ಮೂಲ ಕ್ಷೇತ್ರವಾಗಿರುವ ಕಂಚಿನಡ್ಕ ಬಬ್ಬುಸ್ವಾಮಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಕ್ಕೆ ಸ್ಥಳೀಯ ಮುಸ್ಲಿಂ ನಾಗರಿಕರಿಂದ ಅಡ್ಡಿ ಉಂಟಾಗಿದೆ ಎಂದು ಆರೋಪಿಸಲಾಗಿದೆ. ದಾನಿಯೊಬ್ಬರ ನೆರವಿನಿಂದ ಕ್ಷೇತ್ರಕ್ಕೆ ಮೇಲ್ಚಾವಣಿ ಅಳವಡಿಸಲು ಸಮುದಾಯದವರು ತಯಾರಿ ನಡೆಸಿದಾಗ, ವಿರೋಧ ವ್ಯಕ್ತಗೊಂಡಿದೆ. ಇದೀಗ ಹಿಂದೂ ಸಂಘಟನೆಗಳು ಮಧ್ಯಪ್ರವೇಶ ಮಾಡಿದ್ದು ಸ್ಥಳೀಯ ಪಂಚಾಯಿತಿಗೆ ಸೂಕ್ತ ನಿರ್ಧಾರ ಕೈಗೊಳ್ಳಲು ಒಂದು ವಾರದ ಕಾಲಾವಕಾಶ ನೀಡಿದೆ.
ದಲಿತ ಸಮುದಾಯದವರು ಅತಿಯಾಗಿ ನಂಬುವ ಬಬ್ಬುಸ್ವಾಮಿ ದೈವದ ಮೂಲ ಕ್ಷೇತ್ರವು ಪಡುಬಿದ್ರಿ ಗ್ರಾಮದ ಕಂಚಿನಡ್ಕ ಎಂಬಲ್ಲಿ ಇದೆ. ಕಂಚಿನಡ್ಕದ ಮಿಂಚಿನ ಬಾವಿ ಎಂಬ ಧಾರ್ಮಿಕ ಹಿನ್ನೆಲೆ ಇರುವ ಕ್ಷೇತ್ರವಿದು. ಆದರೆ ಅಭಿವೃದ್ಧಿ ಕಾಣದೆ ರಸ್ತೆಯೊಂದರ ಮಗ್ಗುಲಲ್ಲಿ ಈ ಕ್ಷೇತ್ರದ ಕಟ್ಟೆಗಳು ಇವೆ. ಕ್ಷೇತ್ರಕ್ಕೊಂದು ಸ್ವರೂಪ ನೀಡುವ ದೃಷ್ಟಿಯಿಂದ ದಲಿತ ಸಮುದಾಯದವರು ಕಳೆದ ಹಲವಾರು ವರ್ಷಗಳಿಂದ ಪ್ರಯತ್ನ ನಡೆಸುತ್ತಿದ್ದಾರೆ. ಇದೀಗ ದಾನಿಯೊಬ್ಬರು ಕ್ಷೇತ್ರಕ್ಕೆ ಮೇಲ್ಚಾವಣಿ ಹಾಕಲು ನೆರವು ನೀಡಲು ಮುಂದಾಗಿದ್ದಾರೆ. ಆದರೆ ಮೇಲ್ಚಾವಣಿ ಅಳವಡಿಸಲು ಪರಿಸರದ ಮುಸಲ್ಮಾನ ಸಮುದಾಯದ ನಾಗರಿಕರು ಅಡ್ಡಿಪಡಿಸಿದ್ದಾರೆ.
ಬಬ್ಬುಸ್ವಾಮಿ ಇಲ್ಲಿನ ಮಿಂಚಿನ ಬಾವಿಯಿಂದ ಅವತರಿಸಿದ ಧಾರ್ಮಿಕ ಹಿನ್ನೆಲೆ ಈ ಕ್ಷೇತ್ರಕ್ಕೆ ಇದೆ. ಆದರೆ ರಸ್ತೆಯ ಮಗ್ಗುಲಲ್ಲೇ ಪೂಜೆ-ಪುನಸ್ಕಾರಗಳನ್ನು ನಡೆಸುವುದು ಕಷ್ಟವಾದ ಕಾರಣ, ಕ್ಷೇತ್ರದ ಅಭಿವೃದ್ಧಿ ಮಾಡಲು ಮುಂದಾಗಿದ್ದಾರೆ.
ಮೊಮ್ಮಕ್ಕಳ ಕೈಚಳಕದಿಂದ ಅಜ್ಜನ ಸುಂದರಮೂರ್ತಿ ನಿರ್ಮಾಣ..!
ಕಂಚಿನಡ್ಕ ಮುಸ್ಲಿಂ ಬಾಹುಳ್ಯದ ಪ್ರದೇಶ. ಕ್ಷೇತ್ರದ ದೇವರ ಕಟ್ಟೆಯ ಮುಂದೆ ಕಾಂಕ್ರೀಟ್ ರಸ್ತೆ ಹಾದುಹೋಗುತ್ತದೆ. ಇದು ಸರಕಾರಿ ಸ್ಥಳವಾಗಿದ್ದು ಇಲ್ಲಿ ಮೇಲ್ಚಾವಣಿ ಅಳವಡಿಸಿದರೆ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂದು ಸಮುದಾಯ ಆರೋಪಿಸಿದೆ. ಸ್ಥಳೀಯ ಎಸ್ಡಿಪಿಐ ರಾಜಕೀಯ ಸಂಘಟನೆ ಅವರ ಬೆಂಬಲಕ್ಕೆ ನಿಂತಿದೆ. ಆದರೆ ರಸ್ತೆಗೆ ಯಾವುದೇ ಅಡ್ಡಿಯಾಗದ ರೀತಿಯಲ್ಲಿ ಸುಮಾರು ಇಪ್ಪತ್ತು ಅಡಿ ಎತ್ತರದಲ್ಲಿ ಕಾಂಕ್ರೀಟ್ ರಸ್ತೆಯನ್ನು ಒಳಗೊಂಡ ಮೇಲ್ಚಾವಣಿ ಹಾಕಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ.
ಪಡುಬಿದ್ರಿ ಪಂಚಾಯತ್ ವ್ಯಾಪ್ತಿಯಲ್ಲಿ ಈ ಕ್ಷೇತ್ರ ಇದೆ, ಪಂಚಾಯತ್ನಲ್ಲಿ ಬಿಜೆಪಿ ಆಡಳಿತವಿದೆ. ಬಿಜೆಪಿ ಆಡಳಿತವಿದ್ದರೂ ಧಾರ್ಮಿಕ ಕ್ಷೇತ್ರಗಳಿಗೆ ಅಡ್ಡಿಯಾಗುತ್ತಿರುವ ಬಗ್ಗೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಸ್ಥಳೀಯ ಪಂಚಾಯತ್ ನಲ್ಲಿ 3ಮಂದಿ ಎಸ್ಡಿಪಿಐ ಸದಸ್ಯರಿದ್ದಾರೆ, ಆಡಳಿತ ನಡೆಸುತ್ತಿರುವ ಬಿಜೆಪಿಗೆ ಬಹುಮತ ಇಲ್ಲ. ಆದ್ದರಿಂದ ಎಸ್ಡಿಪಿಐ ಮರ್ಜಿಗೆ ಬಿದ್ದು ಬಿಜೆಪಿ ಈ ರೀತಿ ವರ್ತಿಸುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆ ಆರೋಪಿಸಿದೆ.
ಕ್ಷೇತ್ರದ ಜೊತೆ ಗುರುತಿಸಿಕೊಂಡಿರುವ ಕೆಲ ದಲಿತ ಮುಖಂಡರು ಈ ಹಿಂದೆ ಎಸ್ಡಿಪಿಐ ಪಕ್ಷದಲ್ಲಿದ್ದರು. ಇದೀಗ ಕ್ಷೇತ್ರಕಾರ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಕೆಲವು ದಲಿತ ಮುಖಂಡರು ಎಸ್ಡಿಪಿಐ ಪಕ್ಷದಿಂದ ಹೊರ ಬಂದಿದ್ದಾರೆ. ದಲಿತ ಸಮುದಾಯದ ಬೆಂಗಾವಲಿಗೆ ಹಿಂದೂಜಾಗರಣ ವೇದಿಕೆ ನಿಂತಿದೆ. ವಾರದೊಳಗೆ ಈ ಸಮಸ್ಯೆಯನ್ನು ಬಗೆ ಹರಿಸದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ವೇದಿಕೆ ಹೇಳಿದೆ. ಈ ಕುರಿತು ಸಂಧಾನ ನಡೆಸಲು ಕಳೆದ ಸಭೆ ಕೂಡ ವಿಫಲವಾಗಿದೆ.