ಉಡುಪಿ: ಇಲ್ಲಿನ ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ರೋಹಿತ್ ಎನ್., ಶ್ರೇಯಸ್ ಕುಮಾರ್, ಐಶ್ವರ್ಯ ನಾಯಕ್ ಮತ್ತು ಮಾನಸ ಮಂಜುನಾಥ್ ಪೂಜಾರಿ ಅವರು ವಿಭಾಗದ ಸಹ ಪ್ರಾಧ್ಯಾಪಕ ಡಾ. ಮಧುಕರ ನಾಯಕ್ ಅವರ ಮಾರ್ಗದರ್ಶನದಲ್ಲಿ ‘ಡ್ಯೂಯಲ್ ಆಕ್ಸಿಸ್ ಸೋಲಾರ್ ಟ್ರಾಕಿಂಗ್ ಸಿಸ್ಟಮ್’ ಅನ್ನು ಅಭಿವೃದ್ಧಿಪಡಿಸಿದ್ದಾರೆ.
ಪ್ರಸ್ತುತ ಹೆಚ್ಚಿನ ಸೌರ ವಿದ್ಯುತ್ ಉತ್ಪಾದನಾ ಘಟಕಗಳು ಏಕ ಕಕ್ಷ ಟ್ರಾಕಿಂಗ್ ವ್ಯವಸ್ಥೆಗಳನ್ನು ಬಳಸುತ್ತಿವೆ. ಆದರೆ ಈ ವ್ಯವಸ್ಥೆಗಳಲ್ಲಿ ವಿದ್ಯುತ್ ಉತ್ಪಾದನೆ ಕಡಿಮೆಯಾಗುವುದರ ಜೊತೆಗೆ ಋತುಮಾನಕ್ಕೆ ಅನುಗುಣವಾಗಿ ಕಾರ್ಯಕ್ಷಮತೆಯಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಸೂರ್ಯನ ಸ್ಥಾನ ಬದಲಾಗುವ ಸಂದರ್ಭದಲ್ಲಿ ಗರಿಷ್ಠ ಸೌರ ಶಕ್ತಿಯನ್ನು ಪಡೆಯಲು ಈ ವ್ಯವಸ್ಥೆಗಳು ತಮ್ಮ ದಿಕ್ಕನ್ನು ಸಮರ್ಪಕವಾಗಿ ಹೊಂದಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳು ಡ್ಯುಯಲ್ ಆಕ್ಸಿಸ್ ಸೋಲಾರ್ ಟ್ರಾಕಿಂಗ್ ಸಿಸ್ಟಮ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ವ್ಯವಸ್ಥೆಯು ಸೆನ್ಸಾರಗಳು, ಕಂಟ್ರೋಲರ್‌ಗಳು ಮತ್ತು ಎರಡು ಮೋಟಾರ್‌ಗಳನ್ನು ಬಳಸಿಕೊಂಡು ಸೌರ ಫಲಕವನ್ನು ಅಡ್ಡ ಮತ್ತು ಲಂಬ ದಿಕ್ಕುಗಳಲ್ಲಿ ಸ್ವಯಂ ಚಾಲಿತವಾಗಿ ತಿರುಗಿಸಿ ಮತ್ತು ಓರೆಯಾಗಿಸಿ, ವರ್ಷಪೂರ್ತಿ ಗರಿಷ್ಟ ಸೂರ್ಯನ ಬೆಳಕನ್ನು ಪಡೆಯುವಂತೆ ಮಾಡುತ್ತದೆ. ಇದರ ಪರಿಣಾಮವಾಗಿ ಗರಿಷ್ಠ ಸೌರ ವಿದ್ಯುತ್ ಉತ್ಪಾದನೆ ಸಾಧ್ಯವಾಗುತ್ತದೆ.
ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲ ಡಾ. ನಾಗರಾಜ್ ಭಟ್ ಮತ್ತು ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ. ರಾಜಯತೀಶ್ ಯಾದವ್ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿ ಅಭಿನಂದಿಸಿದ್ದಾರೆ.