ಭಾನುವಾರ 13 ಪಾಸಿಟಿವ್ ಪ್ರಕರಣ ಪತ್ತೆ| 31 ಮಂದಿ ಕೋವಿಡ್‌ಮುಕ್ತರಾಗಿ ಬಿಡುಗಡೆ|ಭಾನುವಾರ ಒಟ್ಟು 168 ಕೋವಿಡ್ ಪರೀಕ್ಷೆ ವರದಿಗಳು ಬಂದಿವೆ| ಇನ್ನೂ 264 ವರದಿಗಳು ಬರಬೇಕಾಗಿವೆ|
ಉಡುಪಿ(ಜೂ.08): ಜಿಲ್ಲೆಯಲ್ಲಿ ಭಾನುವಾರ 13 ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 902ಕ್ಕೇರಿದೆ. ಕಳೆದ ಮೂರು ದಿನಗಳಿಂದ ದಿನವಹಿ ಸೋಂಕಿತರ ಸಂಖ್ಯೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿದ್ದ ಉಡುಪಿ ಜಿಲ್ಲೆ ಭಾನುವಾರ 7ನೇ ಸ್ಥಾನಕ್ಕೆ ಇಳಿದಿದೆ. ಆದರೆ ಒಟ್ಟು ಸೋಂಕಿತರ ಸಂಖ್ಯೆಯಲ್ಲಿ ಮಾತ್ರ ಇನ್ನೂ ಮೊದಲ ಸ್ಥಾನದಲ್ಲಿದೆ.
ಸೋಮವಾರ ಪತ್ತೆಯಾದ ಸೋಂಕಿತರಲ್ಲಿ 7 ಮಂದಿ ಪುರುಷರು, 5 ಮಂದಿ ಮಹಿಳೆಯರು ಮತ್ತು ಒಬ್ಬ 7 ವರ್ಷದ ಬಾಲಕನಾಗಿದ್ದಾರೆ. ಅವರಲ್ಲಿ 12 ಮಂದಿ ಮುಂಬೈಯಿಂದ ಬಂದವರಾದರೇ, ಒಬ್ಬರಿಗೆ ಸೋಂಕು ಹೇಗೆ ಬಂತು ಎಂಬುದನ್ನು ಜಿಲ್ಲಾಡಳಿತ ಪತ್ತೆ ಮಾಡುತ್ತಿದೆ.
undefined
ಉಡುಪಿ: ರಾ.ಹೆ.ಮೇಲ್ಸೇತುವೆಯಲ್ಲಿ ಪೇಜಾವರ ಶ್ರೀ ಹೆಸರಿನ ಫಲಕ!
ಭಾನುವಾರ 31 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 274 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇದೀಗ 624 ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿದ್ದಾರೆ.
ಭಾನುವಾರ ಒಟ್ಟು 168 ಕೋವಿಡ್ ಪರೀಕ್ಷೆ ವರದಿಗಳು ಬಂದಿವೆ. ಇನ್ನೂ 264 ವರದಿಗಳು ಬರಬೇಕಾಗಿವೆ. ಭಾನುವಾರ ಮತ್ತೆ 10 ಮಂದಿಯ ಗಂಟಲದ್ರವಗಳ ಮಾದರಿಗಳನ್ನು ಕೋವಿಡ್ ಪರೀಕ್ಷೆಗೆ ಕಳುಹಿಸಲಾಗಿದೆ. ಅವರಲ್ಲಿ 5 ಮಂದಿ ಕೊರೋನಾ ಸಂಪರ್ಕಿತರು, 4 ಮಂದಿ ಶೀತಜ್ವರದಿಂದ ಮತ್ತು ಒಬ್ಬರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದವರಾಗಿದ್ದಾರೆ.
ಪ್ರಸ್ತುತ ಜಿಲ್ಲೆಯಲ್ಲಿ 244 ಮಂದಿ ಹೋಮ್ ಕ್ವಾರಂಟೈನ್, 145 ಮಂದಿ ಸರ್ಕಾರಿ ಕ್ವಾರಂಟೈನ್, ಒಬ್ಬರು ಆಸ್ಪತ್ರೆ ಕ್ವಾರಂಟೈನ್ ಮತ್ತು 80 ಮಂದಿ ಐಸೋಲೇಷನ್ ವಾರ್ಡಿನಲ್ಲಿ ನಿಗಾದಲ್ಲಿದ್ದಾರೆ.
ಶೇ. 16.54 ಸೋಂಕಿತರು ಉಡುಪಿ ಜಿಲ್ಲೆಯಲ್ಲಿ!
ಇದುವರೆಗೆ ರಾಜ್ಯದಲ್ಲಿ ಒಟ್ಟು 5452 ಸೋಂಕಿತರು ಪತ್ತೆಯಾಗಿದ್ದಾರೆ. ಅವರಲ್ಲಿ ಅತೀ ಹೆಚ್ಚು 902 (ಶೇ 16.54) ಮಂದಿ ಉಡುಪಿ ಜಿಲ್ಲೆಯಲ್ಲಿದ್ದಾರೆ. ಉಳಿದಂತೆ ಕಲಬುರಗಿ ಜಿಲ್ಲೆಯಲ್ಲಿ 660 (ಶೇ 12.10), ಯಾದಗಿರಿ ಜಿಲ್ಲೆಯಲ್ಲಿ 515 (ಶೇ 9.44) ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 475 (ಶೇ 8.71) ಸೋಂಕಿತರಿದ್ದಾರೆ.