ಉಡುಪಿ ವೀಡಿಯೋ ಪ್ರಕರಣ: ಮದರಸ ನಿಷೇಧಕ್ಕೆ ಹಕ್ಕೊತ್ತಾಯ, ಇಬ್ಬರು ಹಿಂದೂ ಮುಖಂಡರ ವಿರುದ್ಧ ಕೇಸ್!

By Gowthami K  |  First Published Aug 4, 2023, 10:32 AM IST

ಪ್ರಚೋದನಕಾರಿ ಭಾಷಣ ಹಿನ್ನೆಲೆ ಇಬ್ಬರು ಹಿಂದೂ ಮುಖಂಡರ ಮೇಲೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.  ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್, ಬಜರಂಗದಳ ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.


ಉಡುಪಿ (ಜು.4): ಇಲ್ಲಿನ ಪ್ಯಾರಾಮೆಡಿಕಲ್‌ ಕಾಲೇಜಿನ ವೀಡಿಯೋ ಪ್ರಕರಣವನ್ನು ಖಂಡಿಸಿ ಭಜರಂಗದಳ ಮತ್ತು ವಿಶ್ವ ಹಿಂದು ಪರಿಷತ್‌ ವಿವಿಧ ಹಿಂದೂ ಸಂಘಟನೆಗಳ ಸಹಭಾಗಿತ್ವದಲ್ಲಿ ಗುರುವಾರ ಬೃಹತ್‌ ಪಾದಯಾತ್ರೆ ಮತ್ತು ಪ್ರತಿಭಟನೆಗಳನ್ನು ನಡೆಸಿತು. ಪ್ರತಿಭಟನೆಯಲ್ಲಿ ಘಟನೆಯ ಆರೋಪಿಗಳ ಹೆತ್ತವರನ್ನು ಬಂಧಿಸಿ ತನಿಖೆಗೊಳಪಡಿಸಬೇಕು, ಪ್ರಕರಣದಲ್ಲಿ ಪಿಎಫ್‌ಐ ಕೈವಾಡ ಇರುವುದರಿಂದ ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆಸಬೇಕು, ರಾಜ್ಯದಲ್ಲಿ ಮದರಸ ಶಿಕ್ಷಣ ನಿಷೇಧಿಸಬೇಕು ಎಂಬ ಹಕ್ಕೋತ್ತಾಯಗಳನ್ನು ಮಂಡಿಸಲಾಯಿತು.`

ಮುಖ್ಯ ಭಾಷಣ ಮಾಡಿದ ವಿಹಿಂಪ ಮುಖಂಡ ಶರಣ್‌ ಪಂಪ್‌ವೆಲ್ ಈ ಪ್ರಕಾರಣವು ಲವ್‌ ಜಿಹಾದ್‌ನ ಮುಂದುವರಿದ ಭಾಗವಾಗಿದ್ದು, ಆರೋಪಿ ವಿದ್ಯಾರ್ಥಿಗಳ ಹೆತ್ತವರು ನಿಷೇಧಿತ ಪಿಎಫ್‌ಐ ನಲ್ಲಿ ಸಕ್ರಿಯವಾಗಿರುವುದರಿಂದ, ಈ ಪ್ರಕರಣದಲ್ಲಿ ಪಿಎಫ್‌ಐನ ನೇರ ಕೈವಾಡ ಇರುವುದು ಸಾಬೀತಾಗಿದೆ ಎಂದು ಆರೋಪಿಸಿದರು.

Tap to resize

Latest Videos

undefined

ಮುಂಬೈನಲ್ಲೂ ಉಡುಪಿ ರೀತಿ ಹಿಜಾಬ್ ವಿವಾದ, ಕಾಲೇಜಲ್ಲಿ ಬುರ್ಖಾಗೆ ಬ್ರೇಕ್‌

ಇದುವರೆಗೆ ಮನೆಯೊಳಗೆ ಸೌಟು, ಪೊರಕೆ ಹಿಡಿಯುತ್ತಿದ್ದ ಹಿಂದೂ ತಾಯಂದಿರು ಮಾನರಕ್ಷಣೆಗೆ ಈಗ ಕೈಯಲ್ಲಿ ಶಸ್ತ್ರಾಸ್ತ್ರ ಹಿಡಿಯುವ ಕಾಲ ಬಂದಿದೆ, ಅಗತ್ಯ ಬಂದರೆ ತಲವಾರನ್ನು ಕೂಡ ಹಿಡಿಯಬೇಕು ಎಂದು ಪಂಪ್‌ವೆಲ್‌ ಕರೆ ನೀಡಿದರು.

ಪ್ರಚೋದನಕಾರಿ ಭಾಷಣ ಇಬ್ಬರ ವಿರುದ್ಧ ಕೇಸ್: ಇದೀಗ  ಪ್ರಚೋದನಕಾರಿ ಭಾಷಣ ಹಿನ್ನೆಲೆ ಇಬ್ಬರು ಹಿಂದೂ ಮುಖಂಡರ ಮೇಲೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.  ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್, ಬಜರಂಗದಳ ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದ್ದು, ಹಿಂದೂ ಮಹಿಳೆಯರು ಕೈಯಲ್ಲಿ ಶಸ್ತ್ರ ತಲವಾರು ಹಿಡಿಯುವಂತೆ ಶರಣ್ ಪಂಪ್ ವೆಲ್ ಕರೆ ನೀಡಿದ್ದರು.

ಉಡುಪಿ ವಿಡಿಯೋ ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯಿಸಿ ಕೃಷ್ಣಮಠ ಸಮೀಪದ ಪಾರ್ಕಿಂಗ್ ಏರಿಯಾದಲ್ಲಿ ನಡೆದಿದ್ದ ಪ್ರತಿಭಟನಾ ಸಭೆಯಲ್ಲಿ ಆದಿ ಉಡುಪಿ ಬೆತ್ತಲೆ ಪ್ರಕರಣವನ್ನು ಉಲ್ಲೇಖಿಸಿ ಭಾಷಣ ಮಾಡಿದ್ದ ದಿನೇಶ್ ಮೆಂಡನ್ ವಿರುದ್ಧವೂ ಉಡುಪಿ ನಗರ ಠಾಣಾ ಎಸ್ ಐ ಪುನೀತ್ ಮೂಲಕ ಸುಮೋಟೋ ಪ್ರಕರಣ ದಾಖಲು ಮಾಡಲಾಗಿದೆ.

ಉಡುಪಿ ವಿಡಿಯೋ ಪ್ರಕರಣ: ಆರೋಪಿಗಳ ಹೆತ್ತವರ ಬಂಧನಕ್ಕೆ ಆಗ್ರಹ, ಮದರಸ ನಿಷೇಧಕ್ಕೆ ಹಕ್ಕೊತ್ತಾಯ

ಇನ್ನು ಪ್ರತಿಭಟನೆಯಲ್ಲಿ ಹಿಂದೂಪರ ನಾಯಕಿ ರಶ್ಮಿ ಸಮಂತ್‌ ಮಾತನಾಡಿ, ಉಡುಪಿಯ ಈ ಘಟನೆಯ ಬಗ್ಗೆ ಹಿಂದೂ ಸಮಾಜ ಮೌನವಾಗಿರುವುದು ಅಚ್ಚರಿಯಾಗಿದೆ. ಇಂತಹ ಘಟನೆಗಳಲ್ಲಿ ಒಂದು ಬಾರಿ ಯುವತಿಯರ ಮಾನ ಹೋದರೆ ಅದು ಜೀವನ ಪರ್ಯಂತ ನೋವಿಗೆ ಕಾರಣವಾಗುತ್ತದೆ. ಆದ್ದರಿಂದ ಮುಂದೆ ಇಂತಹ ಘಟನೆಗಳು ನಡೆಯದಂತೆ ಹಿಂದೂ ಸಮಾಜ ಜಾಗೃತವಾಗಬೇಕಾಗಿದೆ ಎಂದರು.

ವೇದಿಕೆಯ ಮೇಲೆ ಬಜರಂಗದಳದ ರಾಜ್ಯ ಸಂಚಾಲಕ ಸುನಿಲ್‌ ಕೆ.ಆರ್‌., ವಿಹಿಂಪ ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ಪ್ರಾಂತ ಪ್ರಮುಖ್‌ ಕಿಶೋರ್‌ ಮಂಗಳೂರು, ಎಬಿವಿಪಿ ಪ್ರಾಂತ ಪ್ರಮುಖ್‌ ಹರ್ಷಿತ್‌ ಕೊಯ್ಲ ಉಪಸ್ಥಿತರಿದ್ದರು. ಕಾರ್ಯದರ್ಶಿ ದಿನೇಶ್‌ ಮೆಂಡನ್‌ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಇದಕ್ಕೆ ಮೊದಲು ಜೋಡುಕಟ್ಟೆಯಿಂದ ಕೃಷ್ಣಮಠದ ಪಾರ್ಕಿಂಗ್‌ ಪ್ರದೇಶದ ವರೆಗೆ ನಡೆದ ಐದು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ಬೃಹತ್‌ ಪಾದಯಾತ್ರೆಯಲ್ಲಿ ಶಾಸಕರಾದ ಸುನಿಲ್‌ ಕುಮಾರ್‌, ಯಶಪಾಲ್‌ ಸುವರ್ಣ, ಕಿರಣ್‌ ಕುಮಾರ್‌ ಕೊಡ್ಗಿ, ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್‌ ನಾಯಕ್‌ ಕುಯಿಲಾಡಿ, ನಾಯಕರಾದ ಶ್ಯಾಮಲಾ ಕುಂದರ್‌, ಉದಯಕುಮಾರ್‌ ಶೆಟ್ಟಿ, ಪ್ರಮೋದ್‌ ಮಧ್ವರಾಜ್, ರಘುಪತಿ ಭಟ್‌, ರೇಶ್ಮಾ ಉದಯ ಶೆಟ್ಟಿಮತ್ತಿರರು ಭಾಗವಹಿಸಿದ್ದರು.

ನೂರಾರು ಸಂಖ್ಯೆಯಲ್ಲಿ ಪೊಲೀಸರನ್ನು ಮೆರವಣಿಗೆ, ಪ್ರತಿಭಟನಾ ಸ್ಥಳದಲ್ಲಿ ಬಿಗಿ ಬಂದೊಬಸ್ತ್‌ ನಿಯೋಜಿಸಲಾಗಿದ್ದು. ಎಸ್ಪಿ ಅಕ್ಷಯ್‌ ಮಚ್ಚಿಂದ್ರ ಮತ್ತು ಎಎಸ್ಪಿ ಸಿದ್ದಲಿಂಗಪ್ಪ ಸ್ಥಳಕ್ಕೆ ಬಂದು ಹಕ್ಕೋತ್ತಾಯ ಮನವಿಯನ್ನು ಸ್ವೀಕರಿಸಿದರು.

ಮೊಬೈಲ್‌ನಲ್ಲಿ ಬೇರೆ ನಗ್ನ ಚಿತ್ರಗಳಿದ್ದವು: ಉಡುಪಿಯ ವೀಡಿಯೋ ಘಟನೆ ಇದೇ ಮೊದಲನೆಯದಲ್ಲ, ಆರೋಪಿಯೊಬ್ಬಳಿಂದ ಜಪ್ತು ಮಾಡಲಾದ ಮೊಬೈಲ್‌ನಲ್ಲಿ ಬೇರೆ ನಗ್ನಚಿತ್ರಗಳೂ ಪತ್ತೆಯಾಗಿವೆ ಎಂದು ವಿಹಿಂಪ ನಾಯಕ ಶರಣ್‌ ಪಂಪ್‌ವೆಲ್ ಪ್ರತಿಭಟನೆಯಲ್ಲಿ ಆರೋಪಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್‌ ಅಧಿಕಾರಿಗಳು, ಇದು ವಿದ್ಯಾರ್ಥಿನಿಯ ಖಾಸಗಿ ವಿಷಯ, ಅದು ಕಾಲೇಜಿನ ವೀಡಿಯೋಗೆ ಸಂಬಂಧಿಸಿದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

click me!