Har Ghar Tiranga: ಏಕಾಂಗಿ ವೃದ್ಧನಿಗೆ ಮನೆ ನಿರ್ಮಿಸಿ ಕೊಟ್ಟ ANF ಸಿಬ್ಬಂದಿ

By Ravi Nayak  |  First Published Aug 12, 2022, 11:53 AM IST

ಉಡುಪಿಯ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಸಾರ್ಥಕ ಸ್ವಾತಂತ್ರ್ಯ ಅಮೃತ ಮಹೋತ್ಸವ ನಡೆದಿದೆ. ಇದೇ ವೇಳೆ ನಕ್ಸಲರ ಬೇಟೆಗೆ ನಿಯೋಜನೆಗೊಂಡಿರುವ ಎಎನ್ಎಫ್ ಸಿಬ್ಬಂದಿಗಳು, ವೃದ್ಧನೊಬ್ಬನಿಗೆ ಮನೆ ನಿರ್ಮಿಸಿಕೊಟ್ಟು  ಮಾನವೀಯತೆ ಮೆರೆಯುವುದರ ಜೊತೆಗೆ, ದೇಶಭಕ್ತಿಯ ಸಂದೇಶ ನೀಡಿದ್ದಾರೆ. 


ವರದಿ- ಶಶಿಧರ ಮಾಸ್ತಿಬೈಲು, ಏಷಿಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಆ.12) : ಉಡುಪಿಯ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಸಾರ್ಥಕ ಸ್ವಾತಂತ್ರ್ಯ ಅಮೃತ ಮಹೋತ್ಸವ ನಡೆದಿದೆ. ನಕ್ಸಲರ ಬೇಟೆಗೆ ನಿಯೋಜನೆಗೊಂಡಿರುವ ಎಎನ್ಎಫ್ ಸಿಬ್ಬಂದಿಗಳು, ಮಾನವೀಯತೆ ಮೆರೆಯುವುದರ ಜೊತೆಗೆ, ದೇಶಭಕ್ತಿಯ ಸಂದೇಶ ನೀಡಿದ್ದಾರೆ. ದಟ್ಟ ಅರಣ್ಯದ ನಡುವೆ ಕಳೆದ ಹಲವಾರು ದಶಕಗಳಿಂದ ಕೊಟ್ಟಿಗೆಯಂತಹ ಗುಡಿಸಲಿನಲ್ಲಿ ವಾಸಿಸುತ್ತಿದ್ದ ವ್ಯಕ್ತಿಗೆ ಎಎನ್ ಎಫ್(ANF) ಸಿಬ್ಬಂದಿಗಳೇ ಸೇರಿ ವಾಸಕ್ಕೊಂದು ಸೂರು  ನಿರ್ಮಿಸಿ ಕೊಟ್ಟಿದ್ದಾರೆ. ವೃದ್ದ ನಾರಾಯಣ ಗೌಡರಿಗೆ (73) ಸೂರನ್ನು ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ. 

Tap to resize

Latest Videos

ಹರ್ ಘರ್ ತಿರಂಗಾ: 7 ತಿಂಗಳು ಮೊದಲೇ ಐಡಿಯಾ ಕೊಟ್ಟಿದ್ದು ಹುಬ್ಬಳ್ಳಿಯ ದೀಪಕ್..!

ಉಡುಪಿ ಜಿಲ್ಲೆಯ(Udupi DC) ಹೆಬ್ರಿ ಎ.ಎನ್.ಎಫ್()Hebri ANF) ಕ್ಯಾಂಪಿನ ಎ.ಎನ್.ಎಫ್ ಸಿಬ್ಬಂದಿಗಳು ಕಳೆದ ಹಲವಾರು ವರ್ಷಗಳಿಂದ ಪಶ್ಚಿಮ ಘಟ್ಟ(Western Ghats)ದ ತಪ್ಪಲು ಪ್ರದೇಶಗಳಲ್ಲಿ ಕೂಂಬಿಂಗ್() ಕಾರ್ಯಾಚರಣೆ( Combing Operation) ನಡೆಸುತ್ತಿದ್ದಾರೆ. ಈ ರೀತಿ  ಕೂಂಬಿಂಗ್ ತೆರಳುವ ವೇಳೆ ನಾಡ್ಪಾಲು ಗ್ರಾಮದ ತೆಂಗುಮಾರ್(Tengumar) ಎಂಬ ದಟ್ಟ ಕಾನನದಲ್ಲಿ ವಾಸವಿದ್ದ ನಾರಾಯಣ ಗೌಡ(Narayana gowda) ಎಂಬವರಿಗೆ ಹಲವಾರು ವರ್ಷಗಳಿಂದ ದಿನಸಿ ಸಾಮಾಗ್ರಿ ಮತ್ತು ಹಣದ ಸಹಾಯವನ್ನು ಮಾಡುತ್ತಿದ್ದರು. ಏಕಾಂಗಿಯಾಗಿರುವ ಇವರಿಗೆ ನೆರವಾಗುತ್ತಿದ್ದರು. ಗೌಡರ ಸಂಷ್ಟಕ್ಕೆ ಮರುಗುತ್ತಿದ್ದರು. ಈ ಬಾರಿ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಅವರಿಗೊಂದು ಸೂರು ನಿರ್ಮಿಸಿಕೊಡುವ ಸಂಕಲ್ಪ ಮಾಡಿದರು.

27 ಎ.ಎನ್.ಎಫ್ ಸಿಬ್ಬಂದಿ, ಪೋಲಿಸ್ ಇನ್ಸ್ ಪೆಕ್ಟರ್ ಸತೀಶ್ ಹಾಗೂ ಎಸ್ಪಿ ಪ್ರಶಾಂತ್ ನಿಕ್ಕಂ ಅವರು ಸ್ವಂತ ಹಣದಲ್ಲಿ ಪುಟ್ಟ ಮನೆಯನ್ನು ನಿರ್ಮಿಸಿ ಇದೀಗ ಹಸ್ತಾಂತರಿಸಿದ್ದಾರೆ. ನಾರಾಯಣ ಗೌಡರ ವಾಸದ ಸ್ಥಳಕ್ಕೆ ಹೆಬ್ರಿಯಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ತೆಂಗುಮಾರ್ ಗೆ ತಿಂಗಳಮಕ್ಕಿಯಿಂದ 1.50 ಕಿ.ಮೀ ನಡೆದುಕೊಂಡೇ ಹೋಗಬೇಕು. ನಕ್ಸಲ್ ನಿಗ್ರಹ ದಳದ ಸಿಬ್ಬಂದಿಗಳೇ ಸೇರಿ ಬ್ಲಾಕ್ ಕಲ್ಲು, ಸಿಮೆಂಟ್, ತಗಡು ಶೀಟನ್ನು ಹೊತ್ತು ಕೊಂಡು ಕಾಡು ದಾರಿಯಲ್ಲಿ ನಡೆದು ಗೌಡರಿಗೆ ಮನೆಯನ್ನು ನಿರ್ಮಿಸಿ ಕೊಟ್ಟಿದ್ದಾರೆ. ಎ.ಎನ್.ಎಫ್ ಸಿಬ್ಬಂದಿಗಳಿಗೆ ಸ್ಥಳೀಯರಾದ ಆನಂದ, ನಾರಾಯಣ, ಪ್ರಶಾಂತ್, ಸುಧಾಕರ್, ಅರುಣ್ ಕುಮಾರ್, ರಾಜು ಸಹಕಾರ ನೀಡಿದ್ದಾರೆ. 

ಹರ್ ಘರ್‌ ತಿರಂಗಾ ಅಭಿಯಾನ: ಬಿಜೆಪಿಯಿಂದ ಭರ್ಜರಿ ಸಿದ್ಧತೆ

ನಾರಾಯಣ ಗೌಡರು  ಹಲವಾರು ದಶಕಗಳಿಂದ ಪ್ರಕೃತಿಯ ನಡುವೆ ವಾಸವಿದ್ದು, ಮದುವೆಯಾಗಿಲ್ಲ. ದಟ್ಟ ಅರಣ್ಯದೊಳಗೆ ಒಬ್ಬರೇ ಜೀವನ ಸಾಗಿಸುತ್ತಿದ್ದಾರೆ. ಇವರಿಗೆ ನಗರವೆಂದರೆ ಹೆಬ್ರಿ. ಸುಮಾರು 20 ಕಿ.ಮೀ ದೂರವಿರುವ ಹೆಬ್ರಿ ಪೇಟೆಗೆ  ಕಾಲು ನಡಿಗೆಯಲ್ಲೆ‌ ಪಯಣ ಮಾಡುತ್ತ ಏಳು ದಶಕ ಕಳೆದಿದ್ದಾರೆ. ನಾಟಿ ವೈದ್ಯರಾಗಿರುವ ಗೌಡರು ದಟ್ಟ ಅರಣ್ಯದೊಳಗೆ ಒಬ್ಬರೇ ವಾಸವಿದ್ದರೂ, ಅವರ ಮುಖದಲ್ಲಿ ನಗು ಒಂದಿನಿತು ಕಡಿಮೆಯಾಗಿಲ್ಲ. ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ಇದ್ದರೂ ಅರಣ್ಯ ಜೀವನದಲ್ಲಿ ಸಂತೋಷವಾಗಿದ್ದಾರೆ.

ಹರ್ ಘರ್ ತಿರಂಗಾ ವಿತರಣೆ:

ಗುರುವಾರ ಎ.ಎನ್.ಎಫ್ ಎಸ್ಪಿ ಪ್ರಶಾಂತ್ ನಿಕ್ಕಂ, ಎ.ಎನ್.ಎಫ್ ಪೋಲಿಸ್ ಇನ್ಸ್‌ಪೆಕ್ಟರ್ ಸತೀಶ್, ಸಬ್ ಇನ್ಸ್‌ಪೆಕ್ಟರ್ ಗಳಾದ ವಿರೇಶ್, ವಸಂತ್ ಹಾಗು ಹೆಬ್ರಿ ಠಾಣಾಧಿಕಾರಿ ಸುದರ್ಶನ್ ಮತ್ತು ಎ.ಎನ್.ಎಫ್ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ನಾರಾಯಣ ಗೌಡರಿಗೆ ಮನೆಯನ್ನು ಹಸ್ತಾಂತರಿಸಲಾಯಿತು. ನಂತರ ತ್ರಿವರ್ಣ ಧ್ವಜವನ್ನು ವಿತರಿಸಿದರು. ಹಿಂದೂ ಧಾರ್ಮಿಕ ಪದ್ದತಿಯಂತೆ ಹೆಬ್ರಿಯ ಅನಂತಪದ್ಮನಾಭ ದೇವಸ್ಥಾನದ ಅರ್ಚಕರಾದ ಮೋಹನ್ ರಾಜ್ ಜೋಯಿಸ್ ಅವರು ಮನೆ ಒಕ್ಕಲಿನ ಸಂಪ್ರದಾಯಗಳನ್ನು ನೆರವೇರಿಸಿದರು. ಅರ್ಚಕರು ಕಾಡಿನ ದಾರಿಯಲ್ಲಿ ನಡೆದುಕೊಂಡು ಬಂದು ಪೂಜೆಯನ್ನು ನೆರವೇರಿಸಿದರು

ಹೆಬ್ರಿ ಎ.ಎನ್.ಎಫ್ ಕ್ಯಾಂಪಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೇರಿಕೊಂಡು ಉತ್ತಮ ಕಾರ್ಯವನ್ನು ಮಾಡಿದ್ದಾರೆ. ಈ ತಂಡಕ್ಕೆ 20,000 ರೂ.ಗಳ ಬಹುಮಾನವನ್ನು ಘೋಷಿಸುತ್ತೇನೆ. ದುರ್ಗಮ ಕಾಡಿನಲ್ಲಿ ನಾರಾಯಣ ಗೌಡರು ವಾಸ ಮಾಡುತ್ತಿದ್ದಾರೆ. ಅವರಿಗೆ ಹೊಸ ಮನೆಯನ್ನು ಹೆಬ್ರಿ ಕ್ಯಾಂಪಿನ ಪೋಲಿಸ್ ಇನ್ಸ್‌ಪೆಕ್ಟರ್ ಸತೀಶ್ ಮತ್ತು 27 ಸಿಬ್ಬಂದಿಗಳು ಸ್ವಂತ ಹಣದಲ್ಲಿ ಮನೆಯನ್ನು ನಿರ್ಮಿಸಿದ್ದಾರೆ, ಅವರ ಕಾರ್ಯಕ್ಕೆ ಅಭಿನಂದನೆಗಳು ಎಂದು ಎ.ಎನ್.ಎಫ್ ಜಿಲ್ಲಾ ವರಿಷ್ಠಾಧಿಕಾರಿ ಪ್ರಶಾಂತ್ ನಿಕ್ಕಂ ಹೇಳಿದ್ದಾರೆ.

ಎ.ಎನ್.ಎಫ್ ನವರು ಕಳೆದ ಹಲವು ವರ್ಷಗಳಿಂದ ನನಗೆ ದಿನಸಿ ಮತ್ತು ಹಣದ ಸಹಾಯವನ್ನು ಮಾಡುತ್ತಿದ್ದರು. ಈ ಬಾರಿ ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ. ಅವರಿಗೆ ಧನ್ಯವಾದಗಳು ಎಂದು ನಾರಾಯಣ ಗೌಡರು ಧನ್ಯವಾದ ತಿಳಿಸಿದ್ಸಾರೆ.

ನಕ್ಸಲ್ ನಿಗ್ರಹ ದಳದ ಹೆಬ್ರಿ ಕ್ಯಾಂಪಿನ ರಾಘವೇಂದ್ರ ಕಾಂಚನ್, ಗಣಪತಿ ದೇವಾಡಿಗ, ಗೋಪಾಲ, ರವಿ, ಹೊಸಪ್ಪ ನಾರಾಯಣ ಗೌಡರಿಗೆ ಮನೆ ನಿರ್ಮಿಸಿ ಕೊಡಬೇಕೆಂದು ಮುತುವರ್ಜಿ ವಹಿಸಿದ್ದು, ಇವರಿಗೆ ಪೋಲಿಸ್ ಇನ್ಸ್‌ಪೆಕ್ಟರ್ ಸತೀಶ್, ಎ.ಎನ್.ಎಫ್. ಎಸ್ಪಿ ಪ್ರಶಾಂತ್ ನಿಕ್ಕಂ ಬೆಂಬಲ ನೀಡಿದ್ದಾರೆ.

click me!