Udupi: ಕಾರ್ಕಳ ತಾಲೂಕಿನ ಪುಟ್ಟ ಗ್ರಾಮದಲ್ಲಿ ಪತ್ತೆಯಾಯ್ತು 400 ವರ್ಷಗಳ ಹಿಂದಿನ ರಹಸ್ಯ

Published : Aug 04, 2026, 08:33 AM IST
Karkala

ಸಾರಾಂಶ

ಕಾರ್ಕಳ ತಾಲೂಕಿನ ಮಾಳ ಗ್ರಾಮದಲ್ಲಿ ಕ್ರಿ.ಶ. 1616ರ ಕಾಲದ ಅಪ್ರಕಟಿತ ಶಿಲಾಶಾಸನವೊಂದು ಪತ್ತೆಯಾಗಿದೆ. ಪ್ರಾಚ್ಯಸಂಚಯ ಸಂಶೋಧನ ಕೇಂದ್ರದ ತಂಡವು ಅಧ್ಯಯನ ನಡೆಸಿದ್ದು, 15 ಸಾಲುಗಳ ಈ ಕನ್ನಡ ಶಾಸನವು ಸಾಂತೈಯನಯ್ಯನ ಪುತ್ರ ಮಲೈಯ ಎಂಬಾತನಿಂದ ರಚಿಸಲ್ಪಟ್ಟಿದೆ ಎಂದು ತಿಳಿದುಬಂದಿದೆ.

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಳಚೌಕಿ ಪ್ರದೇಶದಲ್ಲಿರುವ ಶ್ರೀ ಪಾಂಡಿರಾಜ ಪೆರ್ಗಡೆ ಮನೆಯ ಮುಂಭಾಗದಲ್ಲಿರುವ ಅಪರೂಪದ ಶಿಲಾಶಾಸನವನ್ನು ಪ್ರಾಚ್ಯಸಂಚಯ ಸಂಶೋಧನ ಕೇಂದ್ರ-ಉಡುಪಿ ತಂಡ ಅಧ್ಯಯನ ನಡೆಸಿದ್ದು, ಇದು ಕ್ರಿ.ಶ. 1616ರ ಕಾಲಘಟ್ಟಕ್ಕೆ ಸೇರಿರುವ ಅಪ್ರಕಟಿತ ಶಿಲಾಶಾಸನವಾಗಿರಬಹುದೆಂದು ಪ್ರಾಥಮಿಕ ಅಧ್ಯಯನದಲ್ಲಿ ತಿಳಿದು ಬಂದಿದೆ.

ಧರ್ಮಚಾವಡಿ ಹೆಗ್ಗಡತಿ ಎಂಬ ಹೆಸರಿನ ಮನೆಯ ಹೊರಭಾಗದಲ್ಲಿ ಸಂರಕ್ಷಿಸಲಾಗಿರುವ ಈ ಶಾಸನವು ಹಿಂದೆ ದುಗ್ಗಲ್ಲಾಯ ದೈವಗುಂಡದ ಸಮೀಪದಲ್ಲಿದ್ದು, ಬಳಿಕ ಮನೆ ವಿಸ್ತರಣೆ ವೇಳೆ ಸುರಕ್ಷಿತವಾಗಿ ಹೊರಭಾಗದಲ್ಲಿ ನಿಲ್ಲಿಸಲಾಗಿದೆ ಎಂದು ಪಾಂಡಿರಾಜ ಪೆರ್ಗಡೆ ಹಾಗೂ ರವಿರಾಜ ಪೆರ್ಗಡೆ ಮಾಹಿತಿ ನೀಡಿದ್ದಾರೆ.

ಸಂಶೋಧನಾ ತಂಡದಿಂದ ಪರಿಶೀಲನೆ

ಶಾಸನಕ್ಕೆ ಸಂಬಂಧಿಸಿದ ಯಾವುದೇ ಅಧಿಕೃತ ದಾಖಲೆಗಳು ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಆಯುರ್ವೇದ ವೈದ್ಯ ಡಾ. ಪಿ. ಸತ್ಯನಾರಾಯಣ ಭಟ್ ಅವರ ಪ್ರಾಥಮಿಕ ಮಾಹಿತಿಯ ಮೇರೆಗೆ ಪ್ರಾಚ್ಯಸಂಚಯ ಸಂಶೋಧನ ಕೇಂದ್ರದ ಅಧ್ಯಯನ ನಿರ್ದೇಶಕ ಪ್ರೊ. ಎಸ್. ಎ. ಕೃಷ್ಣಯ್ಯ ಅವರು ಸಂಶೋಧನಾ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಪ್ರಕಟಿತ ಶಾಸನದ ಅಧ್ಯಯನವನ್ನು ಇತಿಹಾಸ ಮತ್ತು ಪುರಾತತ್ತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ನಡೆಸಿದ್ದು, ಕನ್ನಡ ಲಿಪಿ ಹಾಗೂ ಭಾಷೆಯಲ್ಲಿ ರಚಿತವಾಗಿರುವ ಈ ಶಾಸನದಲ್ಲಿ ಒಟ್ಟು 15 ಸಾಲುಗಳಿವೆ.

ಶಾಸನದಲ್ಲಿ ಏನಿದೆ?

ಶಾಸನದಲ್ಲಿ ಉಲ್ಲೇಖಿಸಿರುವ ಕಾಲಮಾನವು ಶಾಲಿವಾಹನ ಶಕ 1538, ನಳ ಸಂವತ್ಸರ, ವೈಶಾಖ ಶುದ್ಧ ದ್ವಾದಶಿ, ಇಂದುವಾರ ಎಂದು ದಾಖಲಾಗಿದ್ದು, ಇದು ಸಾಮಾನ್ಯ ಕಾಲಗಣನೆಯ ಪ್ರಕಾರ ಕ್ರಿ.ಶ. 1616ರ ಏಪ್ರಿಲ್ 26ರ ಸೋಮವಾರಕ್ಕೆ ಹೊಂದುತ್ತದೆ. ಇದೇ ವೇಳೆ ಮಾಲ್ಲೂರ (ಇಂದಿನ ಮಲ್ಲಾರ್) ಪ್ರದೇಶದಲ್ಲಿ ಹಿರಿಯರ ಅನುಮತಿಯೊಂದಿಗೆ ಸಾಂತೈಯನಯ್ಯನ ಪುತ್ರ ಮಲೈಯ ಈ ಶಾಸನವನ್ನು ಮಾಡಿಸಿದ್ದಾನೆ ಎಂಬ ಮಾಹಿತಿಯೂ ದೊರೆತಿದೆ.

ಇದನ್ನೂ ಓದಿ: ಬೆಂಗಳೂರು ಮಣ್ಣಲ್ಲಿ ಗಂಗರ ಕಾಲದ ಹುಲಿಬೇಟೆ ವೀರರಹಸ್ಯ! ಕ್ರಿ.ಶ 850ರ ಕಾಲಮಾನದ ಕನ್ನಡದ ಶಾಸನ ರಕ್ಷಣೆಗೆ ಒತ್ತಾಯ

ಅಧ್ಯಯನದಲ್ಲಿ ಇತಿಹಾಸ ಮತ್ತು ಪುರಾತತ್ತ್ವ ಸಂಶೋಧನಾರ್ಥಿ ಶಶಾಂತ್ ಪಳ್ಳಿ ಹಾಗೂ ಇತಿಹಾಸ ಆಸಕ್ತರಾದ ಕೇಶವ ಡೋಂಗ್ರೆ ಮತ್ತು ಯದುಗೋಪನ್ ಕೆ.ಆರ್. ಸಹಕರಿಸಿದ್ದರು.

ಇದನ್ನೂ ಓದಿ: ಉತ್ಖನನ ವೇಳೆ 30ಕ್ಕೂ ಅಧಿಕ ರಾವಣನ ವಿಗ್ರಹಗಳು ಪತ್ತೆ! ಇತಿಹಾಸ ತಜ್ಞರಲ್ಲಿ ಆಶ್ಚರ್ಯ

PREV
Read more Articles on
click me!

Recommended Stories

ಸಂಪುಟದಲ್ಲಿ ಮಧು ಬಂಗಾರಪ್ಪಗೆ ಮತ್ತೆ ಲಾಟರಿ..! ಮಧುಗೆ ಮತ್ತೆ ಸಚಿವ ಸ್ಥಾನ ಸಿಕ್ಕಿದ್ದು ಹೇಗೆ?
ಬರಗಾಲದಲ್ಲಿಯೂ ಕಷ್ಟಪಟ್ಟು ಬೆಳೆದಿದ್ದ ಒಂದೂವರೆ ಎಕರೆ ಬೆಳ್ಳುಳ್ಳಿ ಕದ್ದ ಕಳ್ಳರು; ರೈತ ಕಣ್ಣೀರು