
ಬೆಂಗಳೂರು (ಜೂ.05): ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ, ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾರ್ಗದರ್ಶನದಲ್ಲಿ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತೆ, ಸಾರ್ವಜನಿಕ ಆರೋಗ್ಯ ಹಾಗೂ ನಗರ ಸೌಂದರ್ಯೀಕರಣಕ್ಕೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ 'ಯುಬಿ100 (Uttara Bengaluru 100)' ವಿಶೇಷ ಸ್ವಚ್ಛತಾ ಅಭಿಯಾನಕ್ಕೆ ಇಂದು ಬೆಳಿಗ್ಗೆ 9.00 ಗಂಟೆಗೆ ಬ್ಯಾಟರಾಯನಪುರ ವಾರ್ಡ್ ಸಂಖ್ಯೆ-07ರ ಔಟರ್ ರಿಂಗ್ ರಸ್ತೆಯ ವೆಂಕಟಂ ಕಫೆ ಸಮೀಪದ ರಾಜಕಾಲುವೆ ಪ್ರದೇಶದಲ್ಲಿ ನಗರ ಪಾಲಿಕೆಯ ಆಯುಕ್ತರಾದ ಶ್ರೀ ಪೊಮ್ಮಲ ಸುನೀಲ್ ಕುಮಾರ್ ಅವರು ಗಿಡ ನೆಡುವ ಮೂಲಕ ಚಾಲನೆ ನೀಡಿದರು.
ಬಳಿಕ ಆಯೋಜಿಸಲಾಗಿದ್ದ ಸಿಗ್ನೇಚರ್ ಕ್ಯಾಂಪೇನ್ನಲ್ಲಿ ಸ್ಥಳೀಯ ನಿವಾಸಿಗಳೊಂದಿಗೆ ಸಹಿ ಹಾಕುವ ಮೂಲಕ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ ಅವರು, ಸ್ಥಳ ಪರಿಶೀಲನೆಯನ್ನೂ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆಯುಕ್ತರು, ‘ಪಾಲಿಕೆ ವ್ಯಾಪ್ತಿಯಲ್ಲಿರುವ ಕಸ ವಿಲೇವಾರಿ ಸಮಸ್ಯೆ ಇರುವ ಸ್ಥಳಗಳನ್ನು (Garbage Vulnerable Points - GVPs) ಶಾಶ್ವತವಾಗಿ ನಿವಾರಣೆ ಮಾಡುವ ಉದ್ದೇಶದಿಂದ ಈ ವಿಶೇಷ ಅಭಿಯಾನವನ್ನು ರೂಪಿಸಲಾಗಿದೆ. ಕಳೆದ ಹಲವು ದಿನಗಳಿಂದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಿ ಯೋಜನೆ ಸಿದ್ಧಪಡಿಸಲಾಗಿದೆ. ಮುಂದಿನ 45 ದಿನಗಳಲ್ಲಿ 100 ಕಸ ಹಾಟ್‌ಸ್ಪಾಟ್‌ಗಳನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಿ, ಅವುಗಳನ್ನು ಸ್ವಚ್ಛ ಹಾಗೂ ಸುಂದರ ಸಾರ್ವಜನಿಕ ಸ್ಥಳಗಳಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದ್ದೇವೆ’ ಎಂದು ತಿಳಿಸಿದರು.
ಅಭಿಯಾನದ ಯಶಸ್ಸಿಗೆ ಸಹಕರಿಸುತ್ತಿರುವ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (RWAs), ಸ್ವಯಂಸೇವಾ ಸಂಸ್ಥೆಗಳು (NGOs) ಹಾಗೂ ವಿವಿಧ ನಾಗರಿಕ ಸಂಘಟನೆಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು.
ಈ ಅಭಿಯಾನದಡಿ ಮುಂದಿನ 45 ದಿನಗಳಲ್ಲಿ 100 ಕಸ ಹಾಟ್‌ಸ್ಪಾಟ್‌ಗಳನ್ನು (Garbage Hotspots) ಗುರುತಿಸಿ, ಅವುಗಳನ್ನು ಸಂಪೂರ್ಣ ಸ್ವಚ್ಛಗೊಳಿಸಿ, ಸುಂದರ ಹಾಗೂ ಸಾರ್ವಜನಿಕ ಸ್ನೇಹಿ ಸ್ಥಳಗಳಾಗಿ ಪರಿವರ್ತಿಸುವ ಕಾರ್ಯ ಕೈಗೊಳ್ಳಲಾಗುತ್ತದೆ.
ಪ್ರಥಮ ಹಂತ: ತೀವ್ರ ಸ್ವಚ್ಛತೆ ಮತ್ತು ಮೂಲಸೌಕರ್ಯ ದುರಸ್ತಿ
ದ್ವಿತೀಯ ಹಂತ: ಸ್ಥಳ ಪರಿವರ್ತನೆ ಮತ್ತು ಸೌಂದರ್ಯೀಕರಣ
ತೃತೀಯ ಹಂತ: ನಿಗಾವಹಿಕೆ ಮತ್ತು ನಿರ್ವಹಣೆ
ಸ್ಥಳೀಯ ನಿವಾಸಿಗಳೊಂದಿಗೆ ಸಂವಾದ ನಡೆಸಿದ ಆಯುಕ್ತರು, ಪ್ರದೇಶದ ಸ್ವಚ್ಛತೆ, ರಸ್ತೆ ನಿರ್ವಹಣೆ ಹಾಗೂ ಮೂಲಸೌಕರ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಆಲಿಸಿದರು. ಸಾರ್ವಜನಿಕರು ಸಲ್ಲಿಸಿದ ಮನವಿಗಳಿಗೆ ಸ್ಪಂದಿಸಿದ ಅವರು, ರಸ್ತೆ ನಿರ್ವಹಣೆ ಸೇರಿದಂತೆ ಅಗತ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು.
ಈ ಕಾರ್ಯಕ್ರಮದಲ್ಲಿ ಅಪರ ಆಯುಕ್ತರು (ಕಂದಾಯ ಪ್ರಭಾರ) ಶ್ರೀಮತಿ ಪಲ್ಲವಿ, ಉಪ ಜನರಲ್ ವ್ಯವಸ್ಥಾಪಕರಾದ (DGM) ಶ್ರೀಮತಿ ರಶ್ಮಿ, ಸಹಾಯಕ ಜನರಲ್ ವ್ಯವಸ್ಥಾಪಕರು (AGMs), ಆರೋಗ್ಯ ನಿರೀಕ್ಷಕರು (JHIs), ಸಂಬಂಧಿತ ವಿಭಾಗಗಳ ಅಧಿಕಾರಿಗಳು, ವಾರ್ಡ್ ಮಾರ್ಷಲ್‌ಗಳು, ಸಿಬ್ಬಂದಿಗಳು, ಸ್ಥಳೀಯ ನಿವಾಸಿಗಳು ಹಾಗೂ ವಿವಿಧ ನಾಗರಿಕ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.