
ಕಾರವಾರ: ಪ್ರಸ್ತಾವಿತ ಮಂಗಳೂರು ಹೈಕೋರ್ಟ್ ಪೀಠದ ವ್ಯಾಪ್ತಿಗೆ ಉತ್ತರ ಕನ್ನಡ ಜಿಲ್ಲೆಯನ್ನು ಸೇರ್ಪಡೆಗೊಳಿಸುವ ಸರ್ಕಾರದ ಚಿಂತನೆಗೆ ಕಾರವಾರದ ಜಿಲ್ಲಾ ವಕೀಲರ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಯಾವುದೇ ಕಾರಣಕ್ಕೂ ಉತ್ತರ ಕನ್ನಡ ಜಿಲ್ಲೆಯನ್ನು ಮಂಗಳೂರು ಪೀಠಕ್ಕೆ ಸೇರಿಸಬಾರದು. ಪ್ರಸ್ತುತ ನಾವಿರುವ ಧಾರವಾಡ ಪೀಠದ ವ್ಯಾಪ್ತಿಯಲ್ಲೇ ನಮ್ಮನ್ನು ಮುಂದುವರಿಸಬೇಕು, ಇಲ್ಲದಿದ್ದರೆ ಜಿಲ್ಲೆಯ ಭೌಗೋಳಿಕ ಮಧ್ಯವರ್ತಿ ಪ್ರದೇಶದಲ್ಲೇ ಹೊಸ ಪೀಠವನ್ನು ಸ್ಥಾಪಿಸಬೇಕು ಎಂದು ಸಂಘವು ಸರ್ಕಾರ ಹಾಗೂ ಹೈಕೋರ್ಟ್‌ಗೆ ದೃಢವಾಗಿ ಆಗ್ರಹಿಸಿದೆ.
ಗುರುವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ವಕೀಲ ನಾಗರಾಜ ನಾಯಕ ಅವರು, ಸರ್ಕಾರದ ಏಕಪಕ್ಷೀಯ ಆಲೋಚನೆಗಳ ವಿರುದ್ಧ ಅಸಮಾಧಾನ ಹೊರಹಾಕಿದರು. ಕರಾವಳಿ ಎಂದರೆ ಕೇವಲ ಮಂಗಳೂರು ಮಾತ್ರವಲ್ಲ, ಕಾರವಾರದವರೆಗೂ ಕರಾವಳಿ ತೀರ ಹರಡಿಕೊಂಡಿದೆ ಎಂಬುದನ್ನು ಸರ್ಕಾರ ಮರೆಯಬಾರದು. ಕೇವಲ ಮಂಗಳೂರಿಗೆ ಮಾತ್ರ ಇಂತಹ ದೊಡ್ಡ ಪ್ರಾತಿನಿಧ್ಯ ನೀಡಿದರೆ ಉತ್ತರ ಕನ್ನಡ ಜಿಲ್ಲೆಯ ಜನತೆಗೆ ಭಾರಿ ಅನ್ಯಾಯವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಹಾಗೂ ವಕೀಲರಿಗೆ ಭೌಗೋಳಿಕವಾಗಿ ಧಾರವಾಡ ಪೀಠ ಅತ್ಯಂತ ಸುಲಭ ಹಾಗೂ ಹತ್ತಿರದ ಮಾರ್ಗವಾಗಿದೆ. ಕಾರವಾರದಿಂದ ಧಾರವಾಡ ಕೇವಲ ೧೭೪ ಕಿಲೋಮೀಟರ್ ಅಂತರದಲ್ಲಿದೆ. ಆದರೆ ಮಂಗಳೂರು ಜಿಲ್ಲೆಯ ಜನರಿಗೆ ಅತ್ಯಂತ ಸುದೀರ್ಘ ಮತ್ತು ಕಷ್ಟಕರವಾದ ಪ್ರಯಾಣದ ದೂರದಲ್ಲಿದೆ. ಈ ಭೌಗೋಳಿಕ ಸತ್ಯವನ್ನು ಕಡೆಗಣಿಸಿ, ಕೇವಲ ಕರಾವಳಿ ಜಿಲ್ಲೆ ಎಂಬ ಹಣೆಪಟ್ಟಿಯಡಿ ಮಂಗಳೂರು ಪೀಠಕ್ಕೆ ನಮ್ಮನ್ನು ಜೋಡಿಸಿದರೆ ಸಾರ್ವಜನಿಕರಿಗೆ ಮತ್ತು ಕಕ್ಷಿದಾರರಿಗೆ ತೀವ್ರ ಅನಾನುಕೂಲವಾಗಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ನ್ಯಾಯಾಂಗ ಇಲಾಖೆಯ ಅಂಕಿ-ಸಂಖ್ಯೆಗಳನ್ನು ಗಮನಿಸಿದರೂ ಉತ್ತರ ಕನ್ನಡ ಜಿಲ್ಲೆಯು ದಕ್ಷಿಣ ಕನ್ನಡ ಮತ್ತು ಉಡುಪಿಗಿಂತ ಹೆಚ್ಚು ಅರ್ಹತೆಯನ್ನು ಹೊಂದಿದೆ. ಉಡುಪಿ ಜಿಲ್ಲೆಯಲ್ಲಿ ಕೇವಲ 4 ವಕೀಲರ ಸಂಘಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6 ವಕೀಲರ ಸಂಘಗಳಿವೆ. ಆದರೆ, ಉತ್ತರ ಕನ್ನಡ ಜಿಲ್ಲೆಯೊಂದರಲ್ಲೇ ಬರೋಬ್ಬರಿ 11 ವಕೀಲರ ಸಂಘಗಳು ಸಕ್ರಿಯವಾಗಿವೆ.
ಜಿಲ್ಲೆಯಲ್ಲಿ ದಾಖಲಾಗುವ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳ ಸಂಖ್ಯೆಯೂ ಸಹ ನೆರೆಯ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗಿಂತ ಗಣನೀಯವಾಗಿ ಹೆಚ್ಚಾಗಿದೆ. ಹೀಗಾಗಿ, ನೂತನ ಹೈಕೋರ್ಟ್ ಪೀಠವನ್ನು ಪಡೆಯಲು ಭೌಗೋಳಿಕವಾಗಿ ಹಾಗೂ ತಾಂತ್ರಿಕವಾಗಿ ಉತ್ತರ ಕನ್ನಡ ಜಿಲ್ಲೆಯೇ ಹೆಚ್ಚು ಅರ್ಹವಾಗಿದೆ ಎಂದು ವಕೀಲರು ಸ್ಪಷ್ಟಪಡಿಸಿದರು.
ಒಂದು ವೇಳೆ ಕರಾವಳಿ ಭಾಗಕ್ಕೆ ಹೊಸ ಪೀಠವನ್ನು ಸ್ಥಾಪಿಸುವುದೇ ಸರ್ಕಾರದ ಉದ್ದೇಶವಾಗಿದ್ದರೆ, ಅದಕ್ಕೆ ಜಿಲ್ಲೆಯ ಹೊನ್ನಾವರ ಅತ್ಯಂತ ಸೂಕ್ತವಾದ ಜಾಗವಾಗಿದೆ. ಹೊನ್ನಾವರವು ಇಡೀ ಜಿಲ್ಲೆಗೆ ಮಧ್ಯವರ್ತಿ ಪ್ರದೇಶವಾಗಿದ್ದು, ಎಲ್ಲ ತಾಲೂಕಿನ ಜನರಿಗೂ ಸುಲಭವಾಗಿ ತಲುಪಲು ಸಾಧ್ಯವಾಗುತ್ತದೆ.
ಇದಲ್ಲದೆ, ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸುವುದಕ್ಕೆ ಶಿವಮೊಗ್ಗ ಜಿಲ್ಲೆಯಿಂದಲೂ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಶಿವಮೊಗ್ಗದಿಂದ ಹೊನ್ನಾವರಕ್ಕೆ ಕೇವಲ 160 ಕಿಲೋಮೀಟರ್ ಅಂತರವಿರುವುದರಿಂದ, ಇಲ್ಲಿ ಪೀಠ ಸ್ಥಾಪಿಸಿದರೆ ಶಿವಮೊಗ್ಗ, ಉಡುಪಿ ಹಾಗೂ ಉತ್ತರ ಕನ್ನಡದ ಎಲ್ಲಾ ಜನರಿಗೂ ಅತ್ಯಂತ ಅನುಕೂಲವಾಗಲಿದೆ. ಒಂದು ವೇಳೆ ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದ ಹೈಕೋರ್ಟ್ ಪೀಠ ಸ್ಥಾಪನೆ ಸಾಧ್ಯವಾಗದಿದ್ದರೆ, ವಾರದಲ್ಲಿ ಕನಿಷ್ಠ ಮೂರು ದಿನ ಕಾರ್ಯನಿರ್ವಹಿಸುವ ಸಂಚಾರಿ ಪೀಠ (Circuit Bench) ವನ್ನಾದರೂ ಹೊನ್ನಾವರದಲ್ಲಿ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಈ ಮಹತ್ವದ ವಿಷಯದ ಕುರಿತು ಜಿಲ್ಲಾ ವಕೀಲರ ಸಂಘವು ಈಗಾಗಲೇ ಸರ್ವಾನುಮತದ ನಿರ್ಣಯವನ್ನು ಕೈಗೊಂಡಿದ್ದು, ಶೀಘ್ರದಲ್ಲೇ ಅದನ್ನು ರಾಜ್ಯ ಸರ್ಕಾರ ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸಿಕೊಡಲು ಸಿದ್ಧತೆ ನಡೆಸಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಎಲ್ಲಾ ಸ್ಥಳೀಯ ಜನಪ್ರತಿನಿಧಿಗಳನ್ನು ಭೇಟಿಯಾಗಿ ಮನವರಿಕೆ ಮಾಡಿಕೊಡಲಾಗುವುದು. ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ, ಇದನ್ನು ಇಡೀ ಜಿಲ್ಲೆಯ ಜನಪರ ಹೋರಾಟವಾಗಿ ರೂಪಿಸಲಾಗುವುದು ಎಂದು ಸಂಘವು ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಈ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಂತೋಷ್ ಭಾಗ್ವತ್, ಕಾರ್ಯದರ್ಶಿ ಚರಣ್ ನಾಯ್ಕ ಸೇರಿದಂತೆ ಪ್ರಮುಖ ವಕೀಲರಾದ ದಿಯಾ ಭಟ್, ಶುಭಾ ಗಾಂವ್ಕರ್, ರಾಜೇಶ ಆಚಾರಿ, ಅನಾಮಿಕಾ ರಾಣೆ, ಅಶೋಕ್ ಕುಮಾರ ಮುಂತಾದ ಹಿರಿಯ ಮತ್ತು ಕಿರಿಯ ವಕೀಲರು ಉಪಸ್ಥಿತರಿದ್ದರು.