ಶಿವಮೊಗ್ಗ ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ಮೃತ ಯುವಕರು| ಸ್ಫೋಟ, ಕ್ವಾರಿ ಬಂದ್, ಗ್ರಾಮಕ್ಕೆ ವಾಪಸಾಗುತ್ತಿದ್ದ ಯುವಕರು| ಬೈಕ್‌ನಿಂದ ಬಿದ್ದು ಸಾವು| ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದ ಮಾಲ್ಯವಂತ ದೇವಾಲಯದ ಬಳಿ ನಡೆದ ದುರ್ಘಟನೆ|
ಹೊಸಪೇಟೆ(ಜ.26): ಬೈಕ್‌ನಿಂದ ಬಿದ್ದು ಇಬ್ಬರು ಯುವಕರು ಮೃತಪಟ್ಟ ಘಟನೆ ತಾಲೂಕಿನ ಕಮಲಾಪುರದ ಮಾಲ್ಯವಂತ ದೇವಾಲಯದ ಬಳಿ ಭಾನುವಾರ ತಡರಾತ್ರಿ ನಡೆದಿದೆ. ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ನವಲಿ ಗ್ರಾಮದ ರಾಘವೇಂದ್ರ (22), ಕುಮಾರ್ (26) ಮೃತಪಟ್ಟ ಯುವಕರು. ಹನುಮೇಶ್ (20) ಗಂಭೀರ ಗಾಯಗೊಂಡಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಮೂವರು ಯುವಕರು ಶಿವಮೊಗ್ಗದಲ್ಲಿ ಜೆಸಿಬಿ ಆಪರೇಟರ್ಸ್‌ಗಳಾಗಿ ಕೆಲಸ ಮಾಡುತ್ತಿದ್ದರು. ಶಿವಮೊಗ್ಗದಲ್ಲಿ ಕಲ್ಲು ಕ್ವಾರಿ ಸ್ಫೋಟದ ಪ್ರದೇಶದಿಂದ ಕೆಲ ಕಿ.ಮೀ. ಅಂತರದಲ್ಲಿ ಕೆಲಸ ಮಾಡುತ್ತಿದ್ದರು. ಮಾಲಿಕ ಮನೆಗೆ ಹೋಗಿ ಎಂದು ಹೇಳಿದ್ದಕ್ಕೆ ನವಲಿ ಗ್ರಾಮಕ್ಕೆ ಮರಳಿದ್ದಾರೆ. ಈ ವೇಳೆ ಘಟನೆ ನಡೆದಿದೆ ಎಂದು ಮೃತರ ಸಂಬಂಧಿಗಳು ಹೇಳುತ್ತಾರೆ.
ಗಂಗಾವತಿ: ಎನ್‌ಟಿಎಸ್‌ಇ ಪರೀಕ್ಷೆ ವೇಳೆ ಕರ್ತವ್ಯನಿರತ ಶಿಕ್ಷಕ ಸಾವು
ಅಪಘಾತದ ಪ್ರದೇಶದಲ್ಲಿ ಯಾರಾದರೂ ಸಹಾಯ ಮಾಡಿ ಆಸ್ಪತ್ರೆಗೆ ಸೇರಿಸಿದ್ದರೆ ಈ ಇಬ್ಬರ ಯುವಕರ ಪ್ರಾಣ ಉಳಿಯುತ್ತಿತ್ತು. ಯಾರೂ ಸಹಾಯಕ್ಕೆ ಬಾರದ್ದರಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳುತ್ತಾರೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.