ಭಟ್ಕಳ: ಮುರ್ಡೇಶ್ವರದಲ್ಲಿ ಈಜಲಿಳಿದ ನಾಲ್ವರಲ್ಲಿ ಇಬ್ಬರು ನೀರುಪಾಲು

By Kannadaprabha NewsFirst Published Jul 12, 2021, 9:53 AM IST
Highlights

* ಇನ್ನಿಬ್ಬರು ಬಚಾವ್‌, ಒಬ್ಬನ ಮೃತದೇಹ ಪತ್ತೆ
* ಹೋಗಿ ಅಪಾಯಕಾರಿ ಸ್ಥಳದಲ್ಲಿ ಈಜಲು ಮುಂದಾಗಿದ್ದ ಯುವಕರು
* ಸಮುದ್ರದ ಭಾರೀ ಅಲೆಗಳ ಹೊಡೆತಕ್ಕೆ ಸಿಲುಕಿ ನೀರು ಪಾಲಾದ ಇಬ್ಬರು
 

ಭಟ್ಕಳ(ಜು.12): ಮುರ್ಡೇಶ್ವರ ಸಮುದ್ರದಲ್ಲಿ ಈಜಲು ಇಳಿದಿದ್ದ ಶಿವಮೊಗ್ಗದ ನಾಲ್ವರು ಪ್ರವಾಸಿಗರ ಪೈಕಿ ಇಬ್ಬರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದು, ಇನ್ನಿಬ್ಬರು ನೀರುಪಾಲಾದ ಘಟನೆ ಭಾನುವಾರ ಸಂಜೆ ನಡೆದಿದೆ. ಒಬ್ಬನ ಮೃತದೇಹ ಪತ್ತೆಯಾಗಿದ್ದು, ಇನ್ನೊಬ್ಬನ ಮೃತ ದೇಹಕ್ಕಾಗಿ ಶೋಧ ನಡೆದಿದೆ.

ಮೃತನನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಸಮೀಪದ ಮಾಸೂರಿನ ಮಂಜುನಾಥ (25) ಎಂದು ಗುರುತಿಸಲಾಗಿದೆ. ದ ಅಲೆಗೆ ಸಿಲುಕಿ ನಾಪತ್ತೆಯಾದವನ ಹೆಸರು ಮಣಿಕಂಠ ಎನ್ನಲಾಗಿದ್ದರೂ ಇನ್ನೂ ನಿಖರವಾದ ಹೆಸರು ಗೊತ್ತಾಗಿಲ್ಲ.

ನೀರು ಪಾಲಾಗುತ್ತಿದ್ದ ಚಂದನ ಬಿ.ಎಂ., ಹಾಗೂ ಪ್ರವೀಣಕುಮಾರ್‌ ಟಿ.ಪಿ. ಎನ್ನುವವರನ್ನು ಸ್ಥಳೀಯ ಮೀನುಗಾರರು ಮತ್ತು ದೇವಸ್ಥಾನದ ಸಿಬ್ಬಂದಿ ಸಮಯಪ್ರಜ್ಞೆಯಿಂದ ಬಚಾವ್‌ ಮಾಡಿದ್ದಾರೆ. ಈ ಯುವಕರು ಪೊಲೀಸರಿಗೆ ಸಮರ್ಪಕ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ಮುರುಡೇಶ್ವರದ ಶಿವನಮೂರ್ತಿಗೆ ಅಮೆರಿಕದ ಪೀಪಲ್ಸ್‌ ಚಾಯ್ಸ್‌ ಪ್ರಶಸ್ತಿ

ಶಿವಮೊಗ್ಗದಿಂದ ಬಂದಿದ್ದ ಈ ನಾಲ್ವರು ಯುವಕರು ಭಾನುವಾರ ಮಧ್ಯಾಹ್ನ ಶಿವನ ದರ್ಶನ ಮುಗಿಸಿ ಸಮುದ್ರ ಸ್ನಾನಕ್ಕೆ ಹೋಗುವ ತಯಾರಿ ನಡೆಸಿದ್ದಾರೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಸಮುದ್ರ ಅಪಾಯ ಮಟ್ಟದಲ್ಲಿರುವುದರಿಂದ ನೀರಿಗಿಳಿಯಲು ಅವಕಾಶ ಇಲ್ಲವಾಗಿತ್ತು. ಆದರೆ ನಾಲ್ವರು ಕಲ್ಯಾಣ ಮಂಟಪದಿಂದ ಹಿಂಬದಿಗೆ ಹೋಗಿ ಅಪಾಯಕಾರಿ ಸ್ಥಳದಲ್ಲಿ ಈಜಲು ಮುಂದಾಗಿದ್ದಾರೆ. ಸಮುದ್ರದ ಭಾರೀ ಅಲೆಗಳ ಹೊಡೆತಕ್ಕೆ ಸಿಲುಕಿದ್ದ ಇವರು ಬೊಬ್ಬೆ ಹೊಡೆದಿದ್ದಾರೆ. ತಕ್ಷಣ ಅಕ್ಕಪಕ್ಕದಲ್ಲಿ ನೋಡಿದವರು ಹಗ್ಗ ಇತ್ಯಾದಿಗಳನ್ನು ನೀಡಿ ಇಬ್ಬರನ್ನು ಮೇಲಕ್ಕೆ ಎತ್ತಲು ಸಫಲರಾದರಾದರೂ ಇನ್ನಿಬ್ಬರು ನೀರಿನಲ್ಲಿ ಮುಳುಗಿದ್ದಾರೆ.

ಶನಿವಾರವಷ್ಟೇ ಮುರ್ಡೇಶ್ವರದಲ್ಲಿ ಪ್ರವಾಸಿ ಯುವಕರಿಬ್ಬರು ನೀರುಪಾಲಾಗುತ್ತಿರುವುದನ್ನು ಸ್ಥಳೀಯ ಮೀನುಗಾರರು ತಡೆದು ಜೀವರಕ್ಷಣೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
 

click me!