ಬೆಂಗಳೂರಿನಿಂದ ಗೋವಾಕ್ಕೆ ಸಂಚರಿಸುತ್ತಿದ್ದ ಆನಂದ್ ಟ್ರಾವೆಲ್ಸ್ ಸಂಸ್ಥೆಯ ಬಸ್| ನಿಂತ ಲಾರಿಗೆ ಬಸ್ ಡಿಕ್ಕಿ ಹೊಡೆದ ಬಸ್| ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಮಾಸ್ತಿಕಟ್ಟಾ ಬಳಿ ನಡೆದ ದುರ್ಘಟನೆ|
ಅಂಕೋಲಾ(ಡಿ.06): ನಿಂತ ಲಾರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 63ರ ಮಾಸ್ತಿಕಟ್ಟಾ ಬಳಿ ಶನಿವಾರ ಬೆಳಗ್ಗೆ ನಡೆದಿದೆ.
ಆನಂದ್ ಟ್ರಾವೆಲ್ಸ್ ಸಂಸ್ಥೆಯ ಬಸ್ ಬೆಂಗಳೂರಿನಿಂದ ಗೋವಾಕ್ಕೆ ಸಂಚರಿಸುತ್ತಿತ್ತು. ಟಯರ್ ಸಮಸ್ಯೆಯಿಂದ ದುರಸ್ತಿಗೆಂದು ರಸ್ತೆ ಪಕ್ಕದಲ್ಲಿ ಲಾರಿಯನ್ನು ನಿಲ್ಲಿಸಲಾಗಿತ್ತು. ಈ ವೇಳೆ ನಿಂತ ಲಾರಿಗೆ ಬಸ್ ಡಿಕ್ಕಿ ಹೊಡೆದು ಹನ್ನೊಂದು ಪ್ರಯಾಣಿಕರು ಗಾಯಗೊಂಡಿದ್ದಾರೆ. ನಂದನ, ರಕ್ಷಿತಾ, ಶಶಾಂಕ, ಮಹಮ್ಮದ್ ನಜೀರ್, ಯತೀಶ್, ಕಿರಣ ಗಂಗಯ್ಯ, ಕಾರ್ತಿಕ್, ಚಾಂದಿನಿ, ಶ್ರುತಿ, ರೀಚಾ ಗಾಯಗೊಂಡವರು. ಗಾಯಾಳುಗಳಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಚಾಲಕ ಮೈನುದ್ದೀನ್ ಸೇರಿದಂತೆ ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಪಾತಕ್ಕೆ ಉರುಳಿ ಬಿದ್ದ ಧರ್ಮಸ್ಥಳಕ್ಕೆ ಹೊರಿಟದ್ದವರ ಕಾರು
ಪತ್ತೆಯಾಗದ ಮೃತರ ವಿವರ:
ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟ ವ್ಯಕ್ತಿಯ ಗುರುತು ಇದುವರೆಗೂ ಪತ್ತೆಯಾಗಿಲ್ಲ. ಮೃತ ವ್ಯಕ್ತಿಯ ಬಳಿ ಕೆಎಸ್‌ಆರ್‌ಟಿಸಿ ಟಿಕೆಟ್ ಸಿಕ್ಕಿದ್ದು, ಶುಕ್ರವಾರ ತಡರಾತ್ರಿ ಹಾವೇರಿಯಿಂದ ಹುಬ್ಬಳ್ಳಿಗೆ ಪ್ರಯಾಣಿಸಿದ್ದಾರೆ. ಅಲ್ಲಿಂದ ಮುಂದೆ ಈ ಖಾಸಗಿ ಬಸ್ ಮೂಲಕ ಗೋವಾ ಕಡೆಗೆ ಪ್ರಯಾಣಿಸುತ್ತಿರಬಹುದು ಎಂದು ಅಂದಾಜಿಸಲಾಗಿದೆ. ಸಿಪಿಐ ಕೃಷ್ಣಾನಂದ ನಾಯಕ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪಿಎಸ್ಐ ಈ.ಸಿ. ಸಂಪತ್, ಎಎಸ್‌ಐ ಅಶೋಕ್ ತಳಗಪ್ಪನವರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.