ಶಿರೂರು ಮಠಕ್ಕೆ ಉತ್ತರಾಧಿಕಾರಿಯಾಗಿ ವಟುವಿನ ಆಯ್ಕೆ

By Kannadaprabha NewsFirst Published Dec 6, 2020, 10:09 AM IST
Highlights

ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ವೃಂದಾವಸ್ಥರಾದ ಮೇಲೆ ಉಂಟಾಗಿದ್ದ ಮಠದ ಆರ್ಥಿಕ ಸಮಸ್ಯೆಗಳು ಬಗೆಹರಿದಿದ್ದು, ಮಠಕ್ಕೆ ಉತ್ತರಾಯಣದಲ್ಲಿ ಉತ್ತರಾಧಿಕಾರಿಯನ್ನು ನಿಯೋಜಿಸಲಾಗುವುದು

ಉಡುಪಿ (ಡಿ.06):  2018ರಲ್ಲಿ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ವೃಂದಾವಸ್ಥರಾದ ಮೇಲೆ ಉಂಟಾಗಿದ್ದ ಮಠದ ಆರ್ಥಿಕ ಸಮಸ್ಯೆಗಳು ಬಗೆಹರಿದಿದ್ದು, ಮಠಕ್ಕೆ ಉತ್ತರಾಯಣದಲ್ಲಿ ಉತ್ತರಾಧಿಕಾರಿಯನ್ನು ನಿಯೋಜಿಸಲಾಗುವುದು ಎಂದು ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಪ್ರಕಟಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಮಠದ ಆರ್ಥಿಕ ವ್ಯವಹಾರ, ಆದಾಯ ತೆರಿಗೆ, ರಿಯಲ್‌ ಎಸ್ಟೇಟ್‌ ಗೊಂದಲಗಳನ್ನು ನಿವಾರಣೆಯ ನಂತರವೇ ಉತ್ತರಾಧಿಕಾರಿಯ ನೇಮಕಕ್ಕೆ ಸಂಕಲ್ಪಿಸಿದ್ದು, ಅದರಂತೆ ಈಗಾಗಲೇ ವಟುವನ್ನು ಆರಿಸಲಾಗಿದೆ. ಅವರು ಮಠಾಧಿಪತಿಯಾಗುವುದಕ್ಕೆ ಸೂಕ್ತ ಅಧ್ಯಯನ, ತರಬೇತಿ ಪಡೆಯುತಿದ್ದಾರೆ ಎಂದರು.

ತಾವು ಕಳೆದ 2 ವರ್ಷ 6 ತಿಂಗಳ ಶಿರೂರು ಮಠದ ಆಡಳಿತದ ಜವಾಬ್ದಾರಿಯ ಸಂದರ್ಭದಲ್ಲಿ ಶ್ರೀ ಮಠದ ಯಾವುದೇ ಸೊತ್ತುಗಳನ್ನು ಮಾರಾಟ ಮಾಡಿಲ್ಲ ಅಥವಾ ಪರಭಾರೆ ಮಾಡಿಲ್ಲ, ಎಲ್ಲಾ ವ್ಯವಹಾರಗಳು ಪಾರದರ್ಶಕವಾಗಿವೆ ಎಂದರು.

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬದಲಾಯ್ತು ಬೋರ್ಡ್ ...

ಶಿರೂರು ಮಠದ ಆದಾಯದಿಂದಲೇ ಮೂಲಮಠ 50 ಲಕ್ಷ ರು. ಮತ್ತು ಉಡುಪಿ ಮಠ 20 ಲಕ್ಷ ರು. ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಲಾಗಿದೆ. ಮೂಲಮಠದ ಸಮೀಪದ ದುರ್ಗಾಪರಮೇಶ್ವರಿ ಗದ್ದುಗೆಯನ್ನು ನವೀಕರಿಸಲಾಗಿದೆ, ಸಮೀಪದ ಸಾಂತ್ಯಾರು ಮಠದ ಜೀರ್ಣೋದ್ಧಾರ ನಡೆಯುತ್ತಿದೆ, ಮುಂದೆ ಪಾಪುಜೆ ಮಠವನ್ನು ಜೀರ್ಣೋದ್ಧಾರಕ್ಕೆ ಸಂಕಲ್ಪಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಮಠದ ಗಣ್ಯಭಕ್ತರಾದ ಎಂ.ಬಿ.ಕಾರಂತ್‌, ಬಾಲಾಜಿ ರಾಘವೇಂದ್ರ, ದಿವಾಕರ ಶೆಟ್ಟಿಮುಂತಾದವರಿದ್ದರು.

ಆದಾಯ ತೆರಿಗೆ ಲೆಕ್ಕಾಚಾರ ತಪ್ಪಾಗಿದೆ

ಮಠದ ಲೆಕ್ಕಪತ್ರಗಳ ಪರಿಶೋಧನೆ ನಡೆಸುತ್ತಿರುವ ಬೆಂಗಳೂರಿನ ಎಚ್‌.ವಿ.ಗೌತಮ್‌ ಅವರು, ಶಿರೂರು ಶ್ರೀಗಳ ನಿರ್ವಾಣದ ನಂತರ ಶ್ರೀಮಠಕ್ಕೆ ಆದಾಯ ತೆರಿಗೆ ಇಲಾಖೆಯವರು 17.34 ಕೋಟಿ ರು. ಆದಾಯ ತೆರಿಗೆ ಕಟ್ಟುವಂತೆ ಆದೇಶಿಸಿದ್ದರು. ಆದರೆ ತೆರಿಗೆ ಲೆಕ್ಕಚಾರಗಳೂ ತಪ್ಪಾಗಿದ್ದು, ಇದನ್ನು ಈಗ ಇಲಾಖೆಯ ಆಯುಕ್ತರೇ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಆದ್ದರಿಂದ ಖಂಡಿತವಾಗಿಯೂ ಈ ಸಮಸ್ಯೆ ಮಠದ ಪರವಾಗಿ ಬಗೆಹರಿಯುತ್ತದೆ ಎಂದರು.
  
ಕನಕ ಮಾಲ್‌ ಪ್ರಕರಣ ರಾಜಿಯಾಗಿದೆ : ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶ್ಯಾನುಭಾಗ್‌ ಮಾತನಾಡಿ, ಶಿರೂರು ಶ್ರೀಗಳು ಮುಂಬೈ ಗುತ್ತಿಗೆದಾರರೊಂದಿಗೆ ಜಂಟಿಯಾಗಿ ನಿರ್ಮಿಸುತಿದ್ದ ಕನಕ ಮಾಲ್‌ನ ಸಮಸ್ಯೆಯನ್ನೂ ರಾಜಿ ಮೂಲಕ ಬಗೆಹರಿಸಲಾಗಿದೆ. ಕಟ್ಟಡ ಮೇಲಿನ 10 ಕೋಟಿ ರು. ಬ್ಯಾಂಕ್‌ ಸಾಲವನ್ನು, ಈ ಕಟ್ಟಡದಲ್ಲಿ ಅಂಗಡಿಗಳನ್ನು ಖರೀದಿಸಿದ್ದ 10 ಮಂದಿಗೆ 10 ಕೋಟಿ ರು. ಹಿಂದಕ್ಕೆ ಮತ್ತು ಶಿರೂರು ಮಠಕ್ಕೆ 5 ಕೋಟಿ ರು. ಹಿಂದಕ್ಕೆ ನೀಡುವುದಕ್ಕೆ ಹೊಸ ಗುತ್ತಿಗೆದಾರರು ಒಪ್ಪಿದ್ದಾರೆ ಎಂದರು.

click me!