
ಕಲಬುರಗಿ(ಏ.25): ಕೊರೋನಾ ಆತಂಕದ ಕಲಬುರಗಿ ನಿವಾಸಿಗಳಿಗೆ ಇದು ಸತಂಸ ತರುವಂತಹ ಸುದ್ದಿ. ಕಳೆದೊಂದು ವಾರದಿಂದ ಒಂದೇ ಸವನೆ ಸೋಂಕಿನ ಪ್ರಕರಣ ಹೆಚ್ಚುತ್ತ ಆತಂಕ ಇಮ್ಮಡಿಸಿದ್ದ ನಗರದಲ್ಲಿ ಗುರುವಾರ ರಾತ್ರಿ ಕೊರೋನಾ ಪೀಡಿತರಾಗಿದ್ದ 72ರ ಅಜ್ಜಿ ಸೇರಿದಂತೆ ಮೂವರು ಮಹಿಳೆಯರು ಸಂಪೂರ್ಣ ಗುಣಮುಖರಾಗಿ ಮನೆ ಸೇರಿದ್ದಾರೆ.
ಈ ರೀತಿ ಗುರುವಾರ ರಾತ್ರಿ ಮನೆ ಸೇರಿರುವವರ ಪೈಕಿ ಮೂವರೂ ಮಹಿಳೆಯರೇ ಆಗಿರೋದು ವಿಶೇಷ. ಈ ಬೆಳವಣಿಗೆಯಿಂದಾಗಿ ಕೊರೋನಾತಂಕದ ಕಲಬುರಗಿ ನಗರವಾಸಿಗಳು ತುಸು ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಗಿದೆ.
ನಾಲ್ಕು ತಿಂಗಳು ಮಗು ಸೇರಿದಂತೆ ಐವರಿಗೆ ಕೊರೋನಾ ಸೋಂಕು ದೃಢ: ಆತಂಕದಲ್ಲಿ ಕಲಬುರಗಿ ಜನತೆ
ತಮ್ಮ ಪುತ್ರ (ಸಂಖ್ಯೆ 175) ನಿಂದಲೇ ಕೋವಿಡ್-19 ಸೋಂಕು ಪೀಡಿತರಾಗಿದ್ದ ಕಲಬುರಗಿ ಮೂಲದ 72 ವರ್ಷದ ಅಜ್ಜಿ (ಸಂಖ್ಯೆ (178) ಕಳೆದ 2 ವಾರದಿಂದ ಇಲ್ಲಿನ ಇಎಸ್‌ಐಸಿ ಆಸ್ಪತ್ರೆಯಲ್ಲಿದ್ದು ಚಿಕಿತ್ಸಯಿಂದ ಗುಣಮುಖರಾಗಿದ್ದಾರೆ, ಈ ಮೂಲಕ ಹೆæಮ್ಮಾರಿ ಜೊತೆಗಿನ ಯುದ್ಧದಲ್ಲಿ ಜಯ ಅಜ್ಜಿ ಪಾಲಾಗಿದೆ.
ಅದೇ ರೀತಿ ಶಹಾಬಾದ್ ಮೂಲದ 60ರ ವಯೋವೃದ್ಧೆ (ಸಂಖ್ಯೆ 124) ಹಾಗೂ ಇವರ 28 ವರ್ಷದ ಸೊಸೆ (ಸಂಖ್ಯೆ 174) ಕೂಡ ಕೊರೋನಾ ಸೋಂಕಿನಿಂದ ಮುಕ್ತರಾಗಿದ್ದು ಮನೆ ಸೇರಿದ್ದಾರೆ. ಇವರಿಬ್ಬರೂ ಶಹಾಬಾದ್ ಮೂಲದ ಅತ್ತೆ ಹಾಗೂ ಸೊಸೆ, ದಿಲ್ಲಿ ತಬ್ಲಿಘಿ ಸಭೆಗೆ ಹೋಗಿ ಮರಳಿದ್ದ 65 ವರ್ಷದ ಪತಿಯಿಂದಲೇ 60ರ ಅಜ್ಜಿ, ಆತನ ಪತ್ನಿ ಹಾಗೂ ಸೊಸೆ 28 ವರ್ಷದ ಮಹಿಳೆಗೆ ಸೋಂಕು ತಗುಲಿತ್ತು. ಆದರೆ, ದಿಲ್ಲಿಯಿಂದ ಮರಳಿದ್ದ ಆ ವ್ಯಕ್ತಿಗೆಯ ಕೋವಿಡ್-19 ಪರೀಕ್ಷೆ ವರದಿ ನೆಗೆಟಿವ್ ಇತ್ತು.
ಕಿರಾಣಿ ಅಂಗಡಿ ಮಾಲೀಕನಿಗೆ ಸೋಂಕು ಖಚಿತವಾಗದಿದ್ದರೂ ಸಹ ಈತನ ಸಂಪರ್ಕಕ್ಕ ಬಂದಿದ್ದ ಪತ್ನಿ ಹಾಗೂ ಸೋಸೆ ಹಾಗೂ ದಿನಸಿ ಅಂಗಡಿಯಲ್ಲಿ ಕಾರ್ಮಿಕನಾಗಿದ್ದ ಎಸ್ಸೆಸ್ಸೆಲ್ಸಿ ಬಾಲಕನಿಗೂ ಸೋಂಕು ತಗುಲಿತ್ತು. ಇವರ ಮನೆಯಲ್ಲಿ ಸೋಸೆಗೆ ಇಬ್ಬರು ಮಕ್ಕಳಿದ್ದಾರೆ. ಸೋಂಕಿನಿಂದಾಗಿ ಸೋಸೆ ಆಸ್ಪತ್ರೆ ಸೇರಿದಾಗ ಮಕ್ಕಳನ್ನು ಸಹ ಕ್ವಾರಂಟೈನ್ ಮಾಡಲಾಗಿತ್ತು. ಆಗ ಮಕ್ಕಳ ಗಂಟಲು ಮಾದರಿ ಪರೀಕ್ಷಿಸಿದಾಗ ವರದಿ ನೆಗೆಟಿವ್ ಬಂದಿದ್ದರಿಂದ ಮಕ್ಕಳನ್ನು ಬಂಧುಗಳ ವಶಕ್ಕೆ ನೀಡಲಾಗಿತ್ತು.
ಇದುವರೆಗೂ 6 ಮಂದಿ ಗುಣಮುಖರಾಗಿದ್ದಾರೆ. ಇದರೊಂದಿಗೆ ಕಲಬುರಗಿಯಲ್ಲಿ 36 ಜನರಿಗೆ ಸೋಂಕು ಖಚಿತವಾದರೂ ಸಹ ಈ ಪೈಕಿ 6 ಮಂದಿ ಗುಣಮುಖರಾಗಿ ಮನೆಗೆ ಮರಳಿದಂತಾಗಿದೆ. ಜಿಲ್ಲೆಯಲ್ಲಿ ಕೊರೋನಾಕ್ಕೆ ಅದಾಗಲೇ ನಾಲ್ವರು ಬಲಿಯಗಿದ್ದು ಸೋಂಕು ಹೆಚ್ಚುತ್ತಿರುವ ಕಾರಣ ಭಯ ಮೂಡಿತ್ತು, ಏತನ್ಮದ್ಯೆ ಸೋಂಕಿತರಲ್ಲಿ ಏಕಕಾಲಕ್ಕೇ ಮೂವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರೋದು ಇದಕ್ಕಾಗಿ ಕೆಲಸ ಮಾಡುತ್ತಿರುವ ವೈದ್ಯ ಸಮೂಹ, ಜಿಲ್ಲಾಡಳಿತದ ಪಾಲಿಗೂ ತುಸು ನೆಮ್ಮದಿ ತಂದುಕೊಟ್ಟಿದೆ. ದೇಶದ ಮೊದಲ ಸಾವಾಗಿ ದಾಖಲಾಗಿದ್ದ ಸೋದಿಯ 76ರ ಅಜ್ಜನ ಮಗಳು, ಆತನಿಗೆ ಚಿಕಿತ್ಸೆ ನೀಡಿದ್ದ ವೈದ್ಯ ಹಾಗೂ ವೈದ್ಯನ ಹೆಂಡತಿ ಇವರೆಲ್ಲರಿಗೂ ಸೋಂಕು ಖಚಿತವಾಗಿತ್ತು, ತಕ್ಷಣ ಆಸ್ಪತ್ರೆ ಕ್ವಾರಂಟೈನ್ ಮಾಡಿ ಇವೆರಲ್ಲರಿಗೂ ಚಿಕಿತ್ಸೆ ನೀಡಿದ್ದರಿಂದ ಇವರು ಅದಾಗಲೇ ಗುಣಮುಖರಾಗಿ ಮನೆ ಸೇರಿದ್ದನ್ನು ಸ್ಮರಿಸಬಹುದಾಗಿದೆ.
38,436 ಮನೆಗಳ ಆರೋಗ್ಯ ಸಮೀಕ್ಷೆ
ಜಿಲ್ಲೆಯಿಂದ ಕೋವಿಡ್-19 ಪರೀಕ್ಷೆ ನಡೆಸಲಾದ 2,520 ಸ್ಯಾಂಪಲ್‌ಗಳಲ್ಲಿ 36 ಪಾಸಿಟಿವ್ (ನಾಲ್ವರು ಮೃತರು ಸೇರಿದಂತೆ) ಬಂದಿದ್ದು, 1,842ರಲ್ಲಿ ನೆಗೆಟಿವ್ ವರದಿ ಬಂದಿದೆ, ಇನ್ನೂ 642ರಲ್ಲಿ ವರದಿ ಬರಬೇಕಿದೆ. ಸೋಂಕಿತರೊಂದಿಗೆ ನೇರ ಸಂಪರ್ಕದಲ್ಲಿರುವ 609, 2ನೇ ಸಂಪರ್ಕ ಹೊಂದಿರುವ 2,285, ಗುರುತಿಸಲಾಗಿದ್ದು 1,895 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. 269 ಮಂದಿ ಐಸೋಲೇಟೆಡ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ 36 ಕೊರೋನಾ ಪಾಸಿಟಿವ್ ಪ್ರಕರಣ ಧೃಢಗೊಂಡ ಜಿಲ್ಲೆಯಲ್ಲಿ 21 ಕಂಟೇನ್ಮೆಂಟ್ ಝೋನ್ ರಚಿಸಲಾಗಿತ್ತು, ಮೂವರು ಗುಣಮುಖರಾಗಿರುವ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ, ಹೀಗಾಗಿ ಈ ಪ್ರದೇಶಗಳನ್ನು ತೆರವು ಮಾಡುವ ಮೂಲಕ 18 ಸೋಂಕಿನ ಝೋನ್‌ಗಳಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇಲ್ಲಿನ 38,436 ಮನೆಗಳ ಆರೋಗ್ಯ ಸಮೀಕ್ಷೆ ನಡೆಸಲಾಗಿದೆ.