ಒಂದೆಡೆ ಕೊರೋನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಇದರ ಮಧ್ಯೆ ಬಳ್ಳಾರಿ ಕೋವಿಡ್-19 ಜಿಲ್ಲಾಸ್ಪತ್ರೆಯಲ್ಲಿ ಭಾನುವಾರವೂ ಹಬ್ಬದ ವಾತಾವರಣ.
ಬಳ್ಳಾರಿ,(ಏ.26): ಬಳ್ಳಾರಿ ಕೋವಿಡ್-19 ಜಿಲ್ಲಾಸ್ಪತ್ರೆಯಲ್ಲಿ ಭಾನುವಾರವೂ ಹಬ್ಬದ ವಾತಾವರಣ. ಕಳೆದ ಮೂರು ದಿನಗಳ ಹಿಂದಷ್ಟೇ 3 ಜನ ಕೊರೋನಾದಿಂದ ಜಯಿಸಿದವರನ್ನು ಬೀಳ್ಕೊಡಲಾಗಿತ್ತು.
ಇದೀಗ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಇಂದು (ಭಾನುವಾರ) ಕೂಡ ಇಬ್ಬರನ್ನು ಅದೇ ರೀತಿಯ ಸಂಭ್ರಮದ ಮೂಲಕ ಅತ್ಯಂತ ಆತ್ಮೀಯ ಹೃದಯಸ್ಪರ್ಶಿಯಾಗಿ ಬೀಳ್ಕೊಟ್ಟರು.
undefined
ಕೊರೋನಾ ಸೊಂಕಿನಿಂದ ಗುಣಮುಖರಾದ ಹೊಸಪೇಟೆಯ ಪಿ-90 ಮತ್ತು ಬಳ್ಳಾರಿಯ ಗುಗ್ಗರಹಟ್ಟಿಯ ಪಿ-151 ಅವರನ್ನು ಭಾನುವಾರ ಮಧ್ಯಾಹ್ನ ಬಿಡುಗಡೆ ಮಾಡಲಾಯಿತು.
ಮಹಾಮಾರಿ ಕೊರೋನಾದಿಂದ ಗುಣಮುಖ: ಬಳ್ಳಾರಿಯಲ್ಲಿ ಮೂವರು ಡಿಸ್ಚಾರ್ಜ್
ಕೊರೋನಾ ಪಾಸಿಟಿವ್ ಬಾಧಿತರಾಗಿ ಬಳ್ಳಾರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 13 ಜನರಲ್ಲಿ ಈಗಾಗಲೇ ಗುಣಮುಖ ಹೊಂದಿದ 3 ಜನರನ್ನು ಬಿಡುಗಡೆ ಮಾಡಲಾಗಿದ್ದು, ಈ ಇಬ್ಬರು ಸೇರಿದಂತೆ ಒಟ್ಟು 5 ಜನರು ಬಿಡುಗಡೆಯಾದಂತಾಗಿದೆ. ಇನ್ನೂ 8 ಜನರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯವು ಸುಧಾರಣೆಯಾಗುತ್ತಿದೆ.
ಆಸ್ಪತ್ರೆಯಾಗಿನಿಂದ ಇದ್ದ ಆತಂಕ, ದುಗುಡ, ಭಯದ ವಾತಾವರಣ ಈ ಆಸ್ಪತ್ರೆ ಸಿಬ್ಬಂದಿಯಲ್ಲಿ ಸಂಪೂರ್ಣ ಮಾಯವಾಗಿದ್ದು, ಈ ಕೊರೋನಾ ಕೂಡ ಸಾಮಾನ್ಯ ರೋಗವೆಂಬಂತೆ ಪರಿಗಣಿಸುತ್ತಿದ್ದಾರೆ.
ಗುಣಮುಖರಾದವರಿಗೆ ಅತ್ಯಂತ ಹೃದಯಪೂರ್ವಕವಾಗಿ ಬೀಳ್ಕೊಡುವುದರ ಮೂಲಕ “ಏನೇ ಆರೋಗ್ಯ ಸಮಸ್ಯೆಯಾದ್ರೂ ನಾವಿದ್ದೇವೆ ಡೊಂಟ್ ವರಿ” ಎಂದು ಹೇಳುವ ಮೂಲಕ ಗುಣಮುಖರಾದವರ ಕೈಗೆ ಹೂಗುಚ್ಛ,ಹಣ್ಣು-ಹಂಪಲು,ಮಾಸ್ಕ್ ಮತ್ತು ಸ್ಯಾನಟೈಸರ್ ಹಾಗೂ ರೇಷನ್ ಕಿಟ್ ನೀಡಿ ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಕಳುಹಿಸಿಕೊಟ್ಟರು.
ಕೊರೋನಾ ಚಿಕಿತ್ಸೆಗೆ ದಾಖಲಾಗಿನಿಂದ ಗುಣಮುಖರಾಗುವವರರೆಗೆ ಹಾರೈಕೆ ಮಾಡಿದ್ದ ಗ್ರೂಪ್ ಡಿ ಸಿಬ್ಬಂದಿ ಯುವತಿಯರಂತು “ಆಂಟಿ,ಅಂಕಲ್ ಹೋಗಿ ಬನ್ನಿ ಬೈ..ಬೈ..” ಎಂದು ಆಂಬ್ಯುಲೆನ್ಸ್‌ನಲ್ಲಿ ಕೈಬಿಸಿದರು. ಅವರು ಸಹ ಅಷ್ಟೇ ಪ್ರಸನ್ನರಾಗಿ ನಗುಮೊಗದಿಂದ ಅವರತ್ತ ಕೈಮುಗಿದರು.
ವೈದ್ಯರು ಫುಲ್ ಖುಷ್
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ಮಾತನಾಡಿ, ಪಿ-90 ಮತ್ತು ಪಿ-151ಗೆ ಸಂಬಂಧಿಸಿದಂತೆ ಕೋವಿಡ್-19 ಟೆಸ್ಟ್ಗಳನ್ನು ಮಾಡಲಾಗಿದ್ದು, ಇವರ ಟೆಸ್ಟ್ ವರದಿ ನೆಗೆಟಿವ್ ಬಂದಿರುವ ಕಾರಣ ಮತ್ತು ಈ ಪರೀಕ್ಷೆಯ ವರದಿಯ ಆಧಾರದ ಮೇರೆಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ವೈದ್ಯಶಾಸ್ತ್ರ ವಿಭಾದ ವೈದ್ಯರು ರೋಗಿಗಳಿಗೆ ಫಿಟ್ ಇರುವುದಾಗಿ ಒಪ್ಪಿದೆಯೆಂದು ತಿಳಿಸಿದ್ದರಿಂದ ಡಿಸ್ಟಾರ್ಚ್ ಮಾಡಲು ನಿರ್ಧರಿಸಲಾಯಿತು. ಇವರೆಲ್ಲರು ಆರೋಗ್ಯಯುತವಾಗಿದ್ದಾರೆ. ಉಳಿದವರ ಆರೋಗ್ಯವು ಸುಧಾರಣೆಯಾಗುತ್ತಿದೆ. ಜಿಲ್ಲಾಡಳಿತ, ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಇದಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ತಿಳಿಸುವುದಾಗಿ ಅವರು ತಿಳಿಸಿದರು.
ಇವರನ್ನು 14 ದಿನಗಳವರೆಗೆ ಹೋಮ್ ಕ್ವಾರಂಟೈನ್ ಮತ್ತು 14 ದಿನಗಳ ಕಾಲ ಸೆಲ್ಪ್ ರಿಪೋರ್ಟಿಂಗ್ ಮಾಡಲಾಗುವುದು ಹಾಗೂ ಜಿಲ್ಲಾ ಕಂಟ್ರೋಲ್ ರೂಂ ಮತ್ತು ನಮ್ಮ ರ್ಯಾಪಿಡ್ ರಿಸ್ಪಾನ್ಸ್ ತಂಡದಿಂದ 28 ದಿನಗಳ ಕಾಲ ನಿಗಾವಹಿಸಲಿವೆ ಎಂದು ಅವರು ವಿವರಿಸಿದರು.
ನಮ್ಮ ಕೋವಿಡ್ ಆಸ್ಪತ್ರೆ ಸಿಬ್ಬಂದಿ ಶಕ್ತಿಮೀರಿ ಕೆಲಸ ಮಾಡುತ್ತಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಇನ್ನೂಳಿದ 8 ಜನರ ಆರೋಗ್ಯದಲ್ಲಿಯೂ ಸುಧಾರಣೆ ಕಂಡುಬರುತ್ತಿದ್ದು, 15 ದಿನದೊಳಗೆ ಬಳ್ಳಾರಿ ಜಿಲ್ಲೆಯಲ್ಲಿ ಎಲ್ಲರು ನೆಗೆಟಿವ್ ಆಗಿ ಹೊರಬರಲಿದ್ದಾರೆ ಎಂಬ ಅದಮ್ಯ ವಿಶ್ವಾಸ ನನಗಿದೆ ಎಂದರು.
ಈ ಸಂದರ್ಭದಲ್ಲಿ ಕೊರೊನಾ ನೋಡಲ್ ಅಧಿಕಾರಿ ಡಾ.ಮಲ್ಲಿಕಾರ್ಜುನ, ಶೂಶ್ರಷಾಧೀಕ್ಷಕಿ ಶಾಂತಾಬಾಯಿ, ವೈದ್ಯರಾದ ಡಾ.ಉಮಾಮಹೇಶ್ವರಿ, ಡಾ.ಸುನೀಲ್, ಡಾ.ವಿನಯ್, ಚಿತ್ರಶೇಖರ್ ಸೇರಿದಂತೆ ಚಿಕಿತ್ಸೆ ನೀಡಿದ ವೈದ್ಯರು, ಆರೋಗ್ಯ ಸಿಬ್ಬಂದಿ ಮತ್ತಿತರರು ಇದ್ದರು.