2 ತಿಂಗಳು ಆಳಸಮುದ್ರ ಮೀನುಗಾರಿಕೆ ನಿಷೇಧ

By Kannadaprabha NewsFirst Published Jun 1, 2021, 7:13 AM IST
Highlights
  • ಕರಾವಳಿಯ ಮುಖ್ಯ ಉದ್ಯಮವಾಗಿರುವ ಮೀನುಗಾರಿಕೆ ಈ ಋುತುಮಾನ ಅಂತ್ಯ
  • ಜೂ.1ರಿಂದ ಜುಲೈ 31ರವರೆಗೆ ಆಳ ಸಮುದ್ರ ಮೀನುಗಾರಿಕೆಗೆ ನಿಷೇಧ
  •  ನಾಡದೋಣಿ ಮೀನುಗಾರಿಕೆಗೆ ಮಾತ್ರ ಅವಕಾಶ

ಮಂಗಳೂರು (ಜೂ.01):  ಕರಾವಳಿಯ ಮುಖ್ಯ ಉದ್ಯಮವಾಗಿರುವ ಮೀನುಗಾರಿಕೆ ಈ ಋುತುಮಾನ ಅಂತ್ಯಗೊಂಡಿದ್ದು, ಜೂ.1ರಿಂದ ಜುಲೈ 31ರವರೆಗೆ ಆಳ ಸಮುದ್ರ ಮೀನುಗಾರಿಕೆಗೆ ಪ್ರತಿ ವರ್ಷದಂತೆ ಈ ಬಾರಿಯೂ ನಿಷೇಧ ಇರಲಿದೆ.

ಮೀನುಗಳ ಸಂತಾನೋತ್ಪತ್ತಿಯ ಕಾಲವಾಗಿರುವುದರಿಂದ ಪಶ್ಚಿಮ ಕರಾವಳಿಯಲ್ಲಿ ಈ ಅವಧಿಯಲ್ಲಿ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ ಹೇರಲಾಗುತ್ತದೆ. ಈ ಅವಧಿಯಲ್ಲಿ ನಾಡದೋಣಿ ಮೀನುಗಾರಿಕೆಗೆ ಮಾತ್ರ ಅವಕಾಶ ಇರಲಿದೆ.

ಮೀನು ಪ್ರಿಯರು ಈ ಸುದ್ದಿ ಕೇಳಿದ್ರೆ ಫುಲ್ ಖುಷಿಯಾಗೋದು ಗ್ಯಾರಂಟಿ ...

ದಡಕ್ಕೆ ಬರುತ್ತಿರುವ ಬೋಟ್‌ಗಳು: ನಿಷೇಧ ಅವಧಿ ಆರಂಭವಾಗುತ್ತಿದ್ದಂತೆ ಹೆಚ್ಚಿನ ಬೋಟ್‌ಗಳು ಈಗಾಗಲೇ ಬಂದರಿನಲ್ಲಿ ಲಂಗರು ಹಾಕಿವೆ. ಮೀನುಗಾರಿಕೆಗೆ ತೆರಳಿರುವ ಬೋಟ್‌ಗಳು ಇನ್ನು ಒಂದೆರಡು ದಿನದೊಳಗೆ ದಡ ಸೇರಲಿವೆ ಎಂದು ಮೀನುಗಾರಿಕೆ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಹರೀಶ್‌ ಕುಮಾರ್‌   ತಿಳಿಸಿದ್ದಾರೆ.

ಮೀನುಗಾರರಿಗೆ ನಷ್ಟ: ಈ ಮೀನುಗಾರಿಕಾ ಋುತುಮಾನವು ಕೊರೋನಾ ಸಂಕಷ್ಟದೊಂದಿಗೆ ಅನೇಕ ಚಂಡಮಾರುತಗಳಿಗೆ ಸಾಕ್ಷಿಯಾಗಿ ಮೀನುಗಾರಿಕೆಯನ್ನೇ ನಂಬಿರುವ ಮೀನುಗಾರರು ತೀವ್ರ ಸಂಕಷ್ಟಅನುಭವಿಸಿದ್ದರು. ಮೇ ತಿಂಗಳಲ್ಲಂತೂ ಎರಡೆರಡು ಚಂಡಮಾರುತ ಬಂದು ಕೊನೆ ಅವಧಿಯಲ್ಲೂ ಮೀನು ಹಿಡಿಯಲಾಗದ ಪರಿಸ್ಥಿತಿ ಬಂದಿತ್ತು. ಅಲ್ಲದೆ, ವರ್ಷಪೂರ್ತಿ ಸಾಕಷ್ಟುಮೀನುಗಳೇ ಸಿಗದೆ ಅನೇಕ ಬೋಟ್‌ಗಳು ಮೀನುಗಾರಿಕೆಗೇ ತೆರಳಿರಲಿಲ್ಲ.

ಹವಾಮಾನ ವೈಪರೀತ್ಯ, ಮೀನು ಸಿಗದೆ ಇರುವುದು ಇತ್ಯಾದಿ ಕಾರಣಗಳಿಂದ ಕಂಗೆಟ್ಟಮೀನುಗಾರರಿಗೆ ಕಳೆದ ವರ್ಷ ಕೊರೋನಾ ಅವಧಿಯಲ್ಲಿ ಮೀನುಗಾರ ಸಂಘಟನೆಗಳು ಸಹಾಯಹಸ್ತ ಚಾಚಿದ್ದವು. ಈ ಬಾರಿ ನಿಷೇಧ ಅವಧಿಯಲ್ಲಿ ಮತ್ತೆ ಮೀನುಗಾರರು ಸಂಕಷ್ಟಕ್ಕೆ ತಳ್ಳಲ್ಪಡಲಿದ್ದಾರೆ. ಸರ್ಕಾರ ಸಹಾಯ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ.

click me!