ಗದಗ: ಬಿಂಕದಕಟ್ಟಿಯಲ್ಲಿನ್ನು ಕೇಳಿಸಲಿದೆ ಸಿಂಹ ಗರ್ಜನೆ..!

By Kannadaprabha NewsFirst Published Mar 20, 2021, 1:26 PM IST
Highlights

ಬನ್ನೇರುಘಟ್ಟ ಜೈವಿಕ ಉದ್ಯಾನದಿಂದ ಬಂದ ಧರ್ಮ, ಅರ್ಜುನ ಹೆಸರಿನ ಸಿಂಹಗಳು| ರಾಷ್ಟ್ರೀಯ ಸಿಂಹ ದಿನಾಚರಣೆಯ ಅಂಗವಾಗಿ ಆ. 10ರಂದೇ ಘೋಷಣೆ| ಮೃಗಾಲಯದಲ್ಲಿ ಸಿಂಹಗಳಿಗೆ ಅನುಕೂಲಕರವಾದ ವಾತಾವರಣವಿರುವ ಪಂಜರ ನಿರ್ಮಾಣ| ಇನ್ನು ಕೆಲವೇ ದಿನಗಳಲ್ಲಿ ಸಿಂಹಗಳು ಸಾರ್ವಜನಿಕ ವೀಕ್ಷಣೆಗೆ ಮುಕ್ತ| 

ಶಿವಕುಮಾರ ಕುಷ್ಟಗಿ

ಗದಗ(ಮಾ.20): ಉತ್ತರ ಕರ್ನಾಟಕದ ಕಿರು ಮೃಗಾಲಯ ಗದಗ ಝೂ (ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ) ದಲ್ಲಿ ಇನ್ನು ಸಿಂಹ ಗರ್ಜನೆ ಕೇಳಿಸಲಿದೆ! ಈಗಾಗಲೇ ಹತ್ತಾರು ನೂತನ ವಿಶೇಷತೆಗಳ ಮೂಲಕ ಗಮನ ಸೆಳೆಯುತ್ತಿರುವ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯಕ್ಕೆ ಸಿಂಹಗಳ ಆಗಮನದಿಂದ ಮೆರುಗು ಹಾಗೂ ಗಾಂಭೀರ್ಯ ಹೆಚ್ಚಿದೆ. ಮುಂಬರುವ ದಿನಗಳಲ್ಲಿ ಪ್ರವಾಸಿಗರನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಸಿಂಹಗಳು ಕಾರಣವಾಗಲಿವೆ.

Latest Videos

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲೇ ಹುಟ್ಟಿ ಬೆಳೆದಿರುವ ಧರ್ಮ ಹಾಗೂ ಅರ್ಜುನ ಎಂಬ ಹೆಸರಿನ ಎರಡು ಸಿಂಹಗಳನ್ನು ಗದುಗಿನ ಮೃಗಾಲಯಕ್ಕೆ ಕೊಡುಗೆಯಾಗಿ ನೀಡಿದೆ. ಇದಕ್ಕೆ ಈಗಾಗಲೇ ಕೇಂದ್ರ ಮೃಗಾಲಯ ಪ್ರಾಧಿಕಾರ ಒಪ್ಪಿಗೆ ನೀಡಿದ್ದು, ಹಸ್ತಾಂತರ ಪ್ರಕ್ರಿಯೆಗಳು ಪೂರ್ಣಗೊಂಡು, ಗದಗ ಮೃಗಾಲಯಕ್ಕೆ ಸಿಂಹಗಳು ಬಂದಿಳಿದಿವೆ. ಹುಲಿ, ಚಿರತೆ ಸೇರಿದಂತೆ ಆಕರ್ಷಕ ಪ್ರಾಣಿ-ಪಕ್ಷಿಗಳಿರುವ ಬಿಂಕದಕಟ್ಟಿಮೃಗಾಲಯದ ಹಿರಿಮೆ ಸಿಂಹಗಳ ಆಗಮನದಿಂದ ದುಪ್ಪಟ್ಟಾಗಿದೆ.

ಸಿದ್ಧಗೊಂಡಿರುವ ಸಿಂಹಗಳ ಪಂಜರ

ಸಾಮಾನ್ಯವಾಗಿ ಸಿಂಹಗಳು ಯಾವ ರೀತಿ ಪ್ರದೇಶದಲ್ಲಿ ವಿಹರಿಸುತ್ತವೆಯೋ ಅದೇ ಮಾದರಿಯಲ್ಲೇ ಮೃಗಾಲಯದಲ್ಲಿನ ಪಂಜರವನ್ನು ಸಿದ್ಧತೆಗೊಳಿಸಲಾಗಿದೆ. ಅಂದಾಜು 1000 ಚದರ್‌ ಮೀಟರ್‌ ಸ್ಥಳಾವಕಾಶದಲ್ಲಿ ಸಿಂಹಗಳು ವಿಹರಿಸಲು ಅನುಕೂಲಕರವಾದ ವಾತಾವರಣ ನಿರ್ಮಿಸಲಾಗಿದೆ. ಪಂಜರದೊಳಗೆ ನೀರಿನ ಹೊಂಡ, ಗಿಡ-ಮರಗಳು, ಕಲ್ಲು ಬಂಡೆಗಳನ್ನೊಳಗೊಂಡಂತೆ ಸಿಂಹಗಳಿಗೆ ಸೂಕ್ತ ಪರಿಸರ ರೂಪಿಸಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಉತ್ತರ ಕರ್ನಾಟಕದ ಜನರು ದೂರದ ಮೈಸೂರಿನ ಬದಲು ಗದಗ ಮೃಗಾಲಯದಲ್ಲೇ ಸಿಂಹಗಳನ್ನು ನೋಡಿ ಕಣ್ತುಂಬಿಕೊಳ್ಳಬಹುದಾಗಿದೆ.

ಬಿಂಕದಕಟ್ಟಿ ಝೂಗೆ ಸಿಂಹಗಳ ಆಗಮನ: ಮೃಗಾಲಯದಲ್ಲೀಗ ಕಾಡಿನ ರಾಜ-ರಾಣಿಯರ ಆಕರ್ಷಣೆ

ಈಗಲೇ ಸಾರ್ವಜನಿಕ ವೀಕ್ಷಣೆಯಿಲ್ಲ:

ಗದುಗಿಗೆ ಬಂದಿರುವ ಸಿಂಹಗಳ ವೀಕ್ಷಣೆಗೆ ಈಗಲೇ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡುವುದಿಲ್ಲ. ಬನ್ನೇರುಘಟ್ಟದಿಂದ ಬಂದಿರುವ ಸಿಂಹಗಳು ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮೃಗಾಲಯ ಪ್ರಾಧಿಕಾರದ ಸೂಚನೆಯಂತೆ ಇನ್ನೂ 15ರಿಂದ 30 ದಿನಗಳ ವರೆಗೆ ಸಿಂಹಗಳನ್ನು ನಿಗಾದಲ್ಲಿರಿಸಲಾಗುತ್ತದೆ. ತಜ್ಞ ವೈದ್ಯರು ನಿರಂತರವಾಗಿ ಸಿಂಹಗಳತ್ತ ಗಮನ ವಹಿಸಿರುತ್ತಾರೆ. ಸಿಂಹಗಳು ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡ ಬಳಿಕವಷ್ಟೇ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿವೆ.

ಎಲ್ಲಕ್ಕಿಂತ ಮೊದಲು ತಿಳಿಯುವುದು ಇಲ್ಲೇ...

ರಾಷ್ಟ್ರೀಯ ಸಿಂಹ ದಿನಾಚರಣೆ ಅಂಗವಾಗಿ ಆ. 10ರಂದೇ ಗದಗ ಝೂಗೆ (ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ) ಎರಡು ಸಿಂಹಗಳನ್ನು ಕೊಡುಗೆಯಾಗಿ ನೀಡುವ ಕುರಿತು ಬನ್ನೇರುಘಟ್ಟ ಜೈವಿಕ ಉದ್ಯಾನದ ಅಧಿಕೃತ ಟ್ವಿಟರ್‌ ಮೂಲಕ ಘೋಷಣೆ ಮಾಡಲಾಗಿತ್ತು. ಈ ಕುರಿತು 2020ರ ಆಗಸ್ಟ್‌ 14ರಂದೇ ‘ಕನ್ನಡಪ್ರಭ’ ವರದಿ ಪ್ರಕಟಿಸಿತ್ತು. ಅದರಂತೆ ಶುಕ್ರವಾರ ಎರಡು 11 ವರ್ಷದ ಸಿಂಹಗಳು ಮುದ್ರಣಕಾಶಿಗೆ ಕಾಲಿರಿಸಿದೆ. ಎಲ್ಲಕ್ಕಿಂತ ಮೊದಲು ತಿಳಿಯುವುದು ಕನ್ನಡಪ್ರಭದಲ್ಲೇ!

ಕೊರೋನಾ ಕಾಟ: ಗದಗದ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯಕ್ಕೂ ನಷ್ಟ..!

ಹೆಚ್ಚಿದ ಮೃಗಾಲಯದ ಹಿರಿಮೆ

ಬಿಂಕದಕಟ್ಟಿ ಮೃಗಾಲಯದಲ್ಲಿ ಅನೇಕ ಪ್ರಾಣಿ-ಪಕ್ಷಿಗಳು ವೀಕ್ಷಣೆಗೆ ಲಭ್ಯ. ಜತೆಗೆ ಉತ್ತರ ಕರ್ನಾಟಕದಲ್ಲಿ ಜೋಡಿ ಹುಲಿಗಳನ್ನು ಹೊಂದಿದ ಮೃಗಾಲಯ ಎಂದು ಖ್ಯಾತಿ ಹೊಂದಿದೆ. ಹುಲಿ, ಚಿರತೆ, ವಿವಿಧ ಕಾಡುಪ್ರಾಣಿ, ಆಸ್ಟ್ರೀಚ್‌ ಸೇರಿದಂತೆ ವಿವಿಧ ಜಾತಿಯ ವಿದೇಶಿ ಪಕ್ಷಿಗಳನ್ನೊಳಗೊಂಡಿರುವ ಮೃಗಾಲಯ ಪ್ರವಾಸಿಗರ ಆಕರ್ಷಕ ತಾಣವಾಗಿದೆ. ಮೃಗಾಲಯದಲ್ಲಿ ಮಕ್ಕಳಿಗಾಗಿ ಆಟಿಕೆಗಳು, ಆರಾಮದಾಯಕವಾಗಿ ವಿಹರಿಸಲು ಸೂಕ್ತ ವ್ಯವಸ್ಥೆ, ಜತೆಗೆ ಹಿರಿಯ ನಾಗರಿಕರಿಗಾಗಿ ಎಲೆಕ್ಟ್ರಿಕ್‌ ವಾಹನಗಳ ವ್ಯವಸ್ಥೆ ಮಾಡಿರುವುದು ಮೃಗಾಲಯಕ್ಕೆ ಬರುವ ಪ್ರವಾಸಿಗರ ಸಂಖ್ಯೆಯ ಹೆಚ್ಚಳಕ್ಕೆ ಕಾರಣವಾಗಿದೆ.

ಕೇಂದ್ರ ಮೃಗಾಲಯ ಪ್ರಾಧಿಕಾರದ ನಿಯಮದಂತೆ ಬಿಂಕದಕಟ್ಟಿಮೃಗಾಲಯಕ್ಕೆ ಸಿಂಹಗಳನ್ನು ತರಲಾಗಿದ್ದು, ಸದ್ಯ ಅವುಗಳನ್ನು ನಿಗಾದಲ್ಲಿರಿಸಲಾಗಿದೆ. ಮೃಗಾಲಯದಲ್ಲಿ ಸಿಂಹಗಳಿಗೆ ಅನುಕೂಲಕರವಾದ ವಾತಾವರಣವಿರುವ ಪಂಜರ ನಿರ್ಮಾಣ ಮಾಡಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಸಿಂಹಗಳು ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಲಿವೆ ಎಂದು ಗದಗ ಮೃಗಾಲಯದ ಆರ್‌ಎಫ್‌ಒ ಚೈತ್ರಾ ಎಂ ತಿಳಿಸಿದ್ದಾರೆ. 

click me!