ಮಸೀದಿಗಳಲ್ಲಿ ಮೈಕ್‌ ಬಳಕೆ ನಿರ್ಬಂಧ ಕಾನೂನು ಜಾರಿಯಾಗದಿದ್ದಲ್ಲಿ ಸಾವಿರ ಠಾಣೆಗಳಲ್ಲಿ ದೂರು: ಮುತಾಲಿಕ್‌

By Kannadaprabha NewsFirst Published Mar 20, 2021, 12:47 PM IST
Highlights

22 ವರ್ಷದ ಹಿಂದೆ ಮಸೀದಿಯಲ್ಲಿ ಮೈಕ್‌ ಅಳವಡಿಸದಂತೆ ಆದೇಶಿಸಿದ್ದ ಸುಪ್ರೀಂ| ಆದರೆ ಈ ಕಾನೂನು ಪಾಲನೆಯಾಗಿಲ್ಲ| ಈಗ ಪುನಃ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಮೈಕ್‌ ಬಳಕೆ ಮಾಡದಂತೆ ವಕ್ಫ್ ಬೋರ್ಡ್‌ನಿಂದ ಆದೇಶ| ಏಪ್ರಿಲ್‌ ಅಂತ್ಯದೊಳಕ್ಕೆ ಕ್ರಮಕ್ಕೆ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಮುತಾಲಿಕ್‌ ಗಡುವು| 

ಕಾರವಾರ(ಮಾ.20): ಏಪ್ರಿಲ್‌ ಅಂತ್ಯದ ಒಳಗೆ ಮಸೀದಿಗಳಲ್ಲಿ ಅನ್ವಯಿಸುವ ಕಾನೂನು ಜಾರಿ ಆಗದೇ ಇದ್ದಲ್ಲಿ 1 ಸಾವಿರ ಪೊಲೀಸ್‌ ಠಾಣೆಗಳಲ್ಲಿ ದೂರು ನೀಡಲಾಗುತ್ತದೆ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ. 

ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ, 22 ವರ್ಷದ ಹಿಂದೆ ಸುಪ್ರೀಂ ಕೋರ್ಟ್‌ ಮಸೀದಿಯಲ್ಲಿ ಮೈಕ್‌ ಅಳವಡಿಸದಂತೆ ಆದೇಶಿಸಿತ್ತು. ಆದರೆ ಈ ಕಾನೂನು ಪಾಲನೆಯಾಗಿಲ್ಲ. ಈಗ ಪುನಃ ವಕ್ಫ್ ಬೋರ್ಡ್‌ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಮೈಕ್‌ ಬಳಕೆ ಮಾಡದಂತೆ ಆದೇಶಿಸಿದೆ. ಇದನ್ನು ಪಾಲಿಸದೇ ಇದ್ದಲ್ಲಿ ಏಪ್ರಿಲ್‌ ತಿಂಗಳ ಅಂತ್ಯದಲ್ಲಿ 1 ಸಾವಿರ ಪೊಲೀಸ್‌ ಠಾಣೆಗಳಲ್ಲಿ ಶ್ರೀರಾಮ ಸೇನೆಯ ಕಾರ್ಯರ್ತರು ಮಸೀದಿ ವಿರುದ್ಧ ದೂರು ದಾಖಲಿಸಲಿದ್ದಾರೆ ಎಂದು ತಿಳಿಸಿದರು. 

ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಮಸೀದಿಯಲ್ಲಿ ಪ್ರತಿನಿತ್ಯ 5 ಬಾರಿ ಮೈಕ್‌ ಬಳಕೆ ಮಾಡುತ್ತಾರೆ. ಆದರೆ ಪಟಾಕಿಯನ್ನು ವರ್ಷದಲ್ಲಿ ಒಮ್ಮೆ ಮಾತ್ರ ಬಳಕೆ ಮಾಡುತ್ತಾರೆ. ಇದು ತೊಂದರೆ ಆಗುವುದಿಲ್ಲ. ಒಂದು ವೇಳೆ ಸಾರ್ವಜನಿಕರಿಗೆ ಪಟಾಕಿಯಿಂದ ತೊಂದರೆ ಆಗುತ್ತದೆ ಎನ್ನುವುದರ ಬಗ್ಗೆ ಬಹಿರಂಗ ಚರ್ಚೆ ನಡೆಯಬೇಕು. ಇದುವರೆಗೂ ಈ ಬಗ್ಗೆ ದೂರು ಬಂದಿಲ್ಲ. ಚರ್ಚ್‌, ಮಸೀದಿ, ದೇವಸ್ಥಾನ ಎಲ್ಲಿಯೇ ಆದರೂ ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ಪಟಾಕಿ ಸಿಡಿಸುವುದು, ಧ್ವನಿವರ್ಧಕ ಬಳಕೆ ಮಾಡುವುದು ಆಗುತ್ತಿದ್ದರೆ ಆ ವ್ಯವಸ್ಥೆ ಬಂದ್‌ ಮಾಡಿದರೆ ತಪ್ಪಿಲ್ಲ. ಯಾವುದೇ ಧರ್ಮವಾದರೂ ಇತರರಿಗೆ ತೊಂದರೆ ನೀಡಿ ಧರ್ಮಾಚರಣೆ ಮಾಡಬೇಕೆನ್ನುವುದಿಲ್ಲ ಎಂದು ಸ್ಪಷ್ಟಪಡಿಸಿದರು.

66 ವರ್ಷ ಆಗಿದೆ ಕಡೇ ಸ್ಪರ್ಧೆಗೆ ಅವಕಾಶ ಕೊಡಿ: ಪ್ರಮೋದ್‌ ಮುತಾಲಿಕ್‌

ರಾಜಕೀಯ ಪ್ರವೇಶ ಏಕೆ ಎಂದು ಮಾಧ್ಯಮದವರು ಕೇಳಿದ್ದಕ್ಕೆ, ಪ್ರಮೋದ ಮುತಾಲಿಕ ಎನ್ನುವ ವ್ಯಕ್ತಿ ಕಳೆದ 45 ವರ್ಷದಿಂದ ಹಿಂದುಗಳ, ರಾಜ್ಯದ, ದೇಶದ ಸೇವೆ ಮಾಡುತ್ತಾ ಬಂದಿದ್ದಾರೆ. ಅಧಿಕಾರವಿಲ್ಲದೇ ಇದ್ದರೆ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ ಎನ್ನುವುದು ತಿಳಿಯಿತು. ಈಗ ರಾಜಕೀಯ ಪ್ರವೇಶ ಮಾಡಿ ಅಭಿವೃದ್ಧಿ ಕೆಲಸದ ಜತೆಗೆ ಅಧಿಕಾರವನ್ನು ಬಳಕೆ ಮಾಡಿಕೊಂಡು ಕೆಲವೊಂದು ಹಿಂದೂ ಸೇವೆ ಮಾಡಬೇಕಿದೆ. ಹೀಗಾಗಿ ಬೆಳಗಾವಿಯಿಂದ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್‌ ಕೇಳುತ್ತಿದ್ದೇನೆ. ಬಿಜೆಪಿಯಿಂದ ಟಿಕೆಟ್‌ ನೀಡಿದರೆ ಸ್ಪರ್ಧಿಸುತ್ತೇನೆ. ಕಳೆದ 10 ವರ್ಷದಿಂದ ಟಿಕೆಟ್‌ ಕೇಳುತ್ತಿದ್ದು, ಇದು ಕೊನೆಯ ಬಾರಿಯಾಗಿದೆ. ಟಿಕೆಟ್‌ ಕೊಡದೇ ಇದ್ದರೆ ಮುಂದೆ ರಾಜಕೀಯದ ಬಗ್ಗೆ ಮಾತಾಡುವುದಿಲ್ಲ ಎಂದರು.

ಸ್ವತಂತ್ರವಾಗಿ ಸ್ಪರ್ಧಿಸುತ್ತೀರಾ? ಎನ್ನುವ ಪ್ರಶ್ನೆಗೆ, ಸ್ವತಂತ್ರವಾಗಿ, ಬಂಡಾಯವಾಗಿ ಸ್ಪರ್ಧಿಸಿ ಚುನಾವಣೆ ಎದುರಿಸುವ ಶಕ್ತಿ ನನಗಿಲ್ಲ. ಬಿಜೆಪಿಯಿಂದ ಟಿಕೆಟ್‌ ನೀಡಿದರೆ ಸ್ಪರ್ಧಿಸುತ್ತೇನೆ. ಇಲ್ಲವಾದಲ್ಲಿ ಯಾರಿಗೆ ಟಿಕೆಟ್‌ ನೀಡಿದ್ದಾರೋ ಅವರ ಪರ ಕೆಲಸ ಮಾಡುತ್ತೇನೆ. ಪ್ರಮೋದ ಮುತಾಲಿಕ ನೀವು ತಿಳಿದುಕೊಂಡಷ್ಟುದೊಡ್ಡ ವ್ಯಕ್ತಿಯಲ್ಲ ಎಂದ ಅವರು, ಉತ್ತರ ಕನ್ನಡದಿಂದ ಸ್ಪರ್ಧಿಸುವ ಆಸಕ್ತಿ ಇದೆಯೆ ಎಂದು ಕೇಳಿದ್ದಕ್ಕೆ ಈ ಜಿಲ್ಲೆಯ ಬಗ್ಗೆ ಪ್ರೀತಿ, ಗೌರವವಿದೆ. ಆದರೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಬೆಳಗಾವಿಯಿಂದಲೇ ಸ್ಪರ್ಧಿಸಬೇಕು ಎನ್ನುವ ಆಸಕ್ತಿಯಿದೆ. ಅಂತಿಮ ನಿರ್ಧಾರ ಪಕ್ಷದ್ದು ಎಂದು ಸ್ಪಷ್ಟಪಡಿಸಿದರು.

ಸಿಡಿ ವಿಷಯ ಪ್ರಶ್ನಿಸಿದಾಗ, ಅದರ ಬಗ್ಗೆ ಮಾತನಾಡುವುಷ್ಟು ದೊಡ್ಡ ವ್ಯಕ್ತಿ ನಾನಲ್ಲ ಎಂದು ಕೈಮುಗಿದರು. ಕಾರವಾರದ ಅಂಜುದೀವ್‌ ದ್ವೀಪದಲ್ಲಿ ಕ್ರೈಸ್ತರಿಗೆ ಪ್ರಾರ್ಥನೆಗೆ ಅವಕಾಶ ನೀಡುವುದು ಸರಿಯೇ ಎಂದು ಪ್ರಶ್ನಿಸಿದಾಗ, ಯಾವುದೇ ಕಾರಣಕ್ಕೆ ಕ್ರೈಸ್ತರಿಗೆ ಪ್ರಾರ್ಥನೆಗೆ ಅವಕಾಶ ಕೊಡಬಾರದು. ಇದು ದೇಶದ ಭದ್ರತಾ ವಿಚಾರವಾಗಿದೆ. ಧರ್ಮಕ್ಕಿಂತ ದೇಶ ಮುಖ್ಯ. ಒಂದು ವೇಳೆ ನೌಕಾನೆಲೆ, ಕೇಂದ್ರ ಅಥವಾ ರಾಜ್ಯ ಸರ್ಕಾರ ಈ ರೀತಿ ಅವಕಾಶ ನೀಡಿದರೆ ಅಂಜುದೀವ್‌ ದ್ವೀಪಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ರಾಜ್ಯ ಉಪಾಧ್ಯಕ್ಷ ಜಯಂತ ನಾಯ್ಕ ಇದ್ದರು.
 

click me!