ದಕ್ಷಿಣ ಕನ್ನಡದ ಇಬ್ಬರು ಯುವತಿಯರು ಭಾರತೀಯ ಸೇನೆಗೆ ಆಯ್ಕೆ

By Kannadaprabha NewsFirst Published Mar 30, 2021, 12:20 PM IST
Highlights

ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಯುವತಿಯರು ಭಾರತೀಯ ಸೇನೆಗೆ ಆಯ್ಕೆಯಾಗಿದ್ದಾರೆ. ಪುತ್ತೂರು ಹಾಗೂ ಕಾಣಿಯೂರಿನ ಯುವತಿಯರು ಬಾರ್ಡರ್ ಸೆಕ್ಯೂರಿಟಿ ಫೋರ್ಸ್‌ಗೆ ಆಯ್ಕೆಯಾಗಿದ್ದು ಇದೇ ಏಪ್ರಿಲ್ 1 ರಿಂದ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. 

ಪುತ್ತೂರು (ಮಾ.30): ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಯುವತಿಯರು ಭಾರತೀಯ ಸೇನೆಯ ಬಿಎಸ್‌ಎಫ್‌ಗೆ ಆಯ್ಕೆಯಾಗಿದ್ದಾರೆ. ಇದೇ ಬರುವ ಎಪ್ರಿಲ್ 1 ರಿಂದ ಭಾರತೀಯ ಸೇನೆಯಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.

ಪುತ್ತೂರು ತಾಲೂಕಿನ ಬಲ್ನಾಡಿನ ರಮ್ಯಾ ಹಾಗೂ ಕಡಬ ತಾಲೂಕಿನ ಕಾಣಿಯೂರಿನ ಯೋಗಿತಾ ಎಂಬವರು ಬಿ.ಎಸ್.ಎಫ್ ( ಬಾರ್ಡರ್ ಸೆಕ್ಯುರಿಟಿ ಫೋರ್ಸ್) ಗೆ ಆಯ್ಕೆಯಾಗಿದ್ದಾರೆ.  

ರಮ್ಯಾ  ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಪದ್ಮಯ್ಯ ಗೌಡ ಹಾಗೂ ತೇಜಾವತಿ ದಂಪತಿ ಪುತ್ರಿ. ಈಕೆಯ ಸಹೋದರ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾದ ಡಿ ವಿ ಸದಾನಂದ ಗೌಡರ ಕಿರಿಯ ಸಹಾಯಕರಾಗಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸೇನೆಯಲ್ಲಿ ಸ್ತ್ರೀಯರಿಗೆ ಕಾಯಂ ನೌಕರಿಗೆ ತಾರತಮ್ಯ: ಸುಪ್ರೀಂ .

ಬಲ್ನಾಡು ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಕೊಂಬೆಟ್ಟು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ಶಿಕ್ಷಣ, ಪಿಯುಸಿ ಹಾಗೂ ಪದವಿಯಯನ್ನು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪಡೆದಿರುತ್ತಾರೆ.

ಇವರು ಕಳೆದ ವರ್ಷ ಫೆಬ್ರವರಿಯಲ್ಲಿ ಮೆಡಿಕಲ್ ಪರೀಕ್ಷೆ ಬರೆದಿದ್ದರು. ಆದರೆ ಕೊರೋನದಿಂದಾಗಿ ಅದರ ಫಲಿತಾಂಶ ತಡವಾಗಿ ಪ್ರಕಟವಾಗಿತ್ತು. ತನ್ನ ಶಾಲಾ ದಿನಗಳಿಲ್ಲಿಯೇ ಎನ್ ಸಿ ಸಿ ಯಲ್ಲಿ ಪಾಲ್ಗೊಂಡು ತರಬೇತಿಯನ್ನು ಪಡೆದಿದ್ದರು.

ಕಡಬ ತಾಲೂಕಿನ ಕಾಣಿಯೂರು ಗ್ರಾಮದ ಮಲೆಕರ್ಚಿ ಮೇದಪ್ಪ ಗೌಡ ಮತ್ತು ದೇವಕಿಯವರ ಪುತ್ರಿ ಯೋಗಿತಾ.ಎಂ. ರವರು ಭಾರತೀಯ ಸೇನೆಯ ಗಡಿಭದ್ರತಾ ಪಡೆ(BSF) ಗೆ ಆಯ್ಕೆಯಾಗಿದ್ದು ಎಪ್ರಿಲ್ 1 ರಂದು ಮಧ್ಯಪ್ರದೇಶದ ಗ್ವಾಲಿಯರ್ ನ ತೇಕನ್ಪುರ್ ನಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.

ಯೋಗಿತಾ ಬೊಬ್ಬೆಕೇರಿ ಮತ್ತು ಅಲಂಕಾರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಪ್ರೌಢಶಿಕ್ಷಣವನ್ನು ಸರಕಾರಿ ಪ್ರೌಢಶಾಲೆ ಕಾಣಿಯೂರಿನಲ್ಲಿ (SSLC ಶೇ.81 ಅಂಕ), ಕೆ.ಎಸ್ ಗೌಡ ಪಿಯು ಕಾಲೇಜು ನಿಂತಿಕಲ್ ಇಲ್ಲಿ ವಿಜ್ಞಾನ ವಿಭಾಗದಲ್ಲಿ ಶೇ.70 ಅಂಕಗಳೊಂದಿಗೆ ಪಿಯು ಶಿಕ್ಷಣ ಪಡೆದಿದ್ದಾರೆ.  ವಿಶ್ವವಿದ್ಯಾಲಯ ಕಾಲೇಜು ಮಂಗಳೂರಿನಲ್ಲಿ ಬಿಎಸ್ಸಿ ಪದವಿ,ಕೊಣಾಜೆ ಮಂಗಳ ಗಂಗೋತ್ರಿಯಲ್ಲಿ ಮೈಕ್ರೋಬಯಾಲಾಜಿ ವಿಷಯದಲ್ಲಿ ಎಂಎಸ್ಸಿ ಪದವಿ ಪಡೆದಿದ್ದಾರೆ.

click me!