CAA ವಿರುದ್ಧ ಕವನ ವಾಚನ: ಇಬ್ಬರು ಪತ್ರಕರ್ತರು ಪೊಲೀಸ್ ವಶ

Kannadaprabha News   | Asianet News
Published : Feb 19, 2020, 08:33 AM IST
CAA ವಿರುದ್ಧ ಕವನ ವಾಚನ: ಇಬ್ಬರು ಪತ್ರಕರ್ತರು ಪೊಲೀಸ್ ವಶ

ಸಾರಾಂಶ

ಸಿಎಎ ಮತ್ತು ಎನ್ ಆರ್‌ಸಿ ಸೇರಿದಂತೆ ಪ್ರಧಾನಿ ವಿರುದ್ಧ ಕವನ ವಾಚನ| ಇಬ್ಬರು ಪತ್ರಕರ್ತರನ್ನು ವಶಕ್ಕೆ ಪಡೆದಿದ ಪೊಲೀಸರು|  ಹಿಂದೆ ಆನೆಗೊಂದಿ ಉತ್ಸವದ ಕವಿಗೋಷ್ಠಿಯಲ್ಲಿ ಕವನ ವಾಚಿಸಿದ್ದ ಪತ್ರಕರ್ತರು| 

ಗಂಗಾವತಿ(ಫೆ.19): ಕಳೆದೊಂದು ತಿಂಗಳ ಹಿಂದೆ ಆನೆಗೊಂದಿ ಉತ್ಸವದ ಕವಿಗೋಷ್ಠಿಯಲ್ಲಿ ಸಿಎಎ ಮತ್ತು ಎನ್ ಆರ್‌ಸಿ ಸೇರಿದಂತೆ ಪ್ರಧಾನಿ ವಿರುದ್ಧ ಕವನ ವಾಚನ ಮಾಡಿದ ಇಬ್ಬರು ಪತ್ರಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಜನವರಿ 9 ಮತ್ತು 10ರಂದು ನಡೆದ ಆನೆಗೊಂದಿ ಉತ್ಸವದಲ್ಲಿ ವಿದ್ಯಾರಣ್ಯ ವೇದಿಕೆಯಲ್ಲಿ ಏರ್ಪಡಿಸಿದ್ದ ಕವಿಗೋಷ್ಠಿ ಸಂದರ್ಭದಲ್ಲಿ ಕವನ ವಾಚನ ಮಾಡಿದ್ದ ಕೊಪ್ಪಳ ಪತ್ರಕರ್ತ ಸಿರಾಜ್ ಬಿಸರಹಳ್ಳಿ, ಅದನ್ನು ಖಾಸಗಿ ವಾಹಿನಿಯಲ್ಲಿ ಬಿತ್ತರಿಸಿದ ರಾಜಭಕ್ಷಿ ವಿರುದ್ಧ ಗಂಗಾವತಿಯಲ್ಲಿ ಶಿವಕುಮಾರ ಅರಿಕೇರಿ ಅವರು ಕಾಯ್ದೆ 504, 505 ಮತ್ತು 505(2)ರ ಅನ್ವಯ ಕ್ರಮ ಕೈಗೊಳ್ಳಬೇಕೆಂದು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ನ್ಯಾಯಾಲಯಕ್ಕೆ ಹಾಜರಾದ ಪತ್ರಕರ್ತರು ಇವರಿಬ್ಬರೂ ಸ್ವಯಂಪ್ರೇರಣೆಯಿಂದ ಜೆಎಂಎಫ್‌ಸಿ ನ್ಯಾಯಲಯಕ್ಕೆ ಹಾಜರಾಗಿ ಜಾಮೀನು ಪಡೆಯಲು ಆಗಮಿಸಿದ್ದರು. ಆದರೆ, ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದ ಗ್ರಾಮೀಣ ಪೊಲೀಸರು ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡಬೇಕೆಂದು ಕೋರಿದ್ದರಿಂದ ಜಾಮೀನು ನಿರಾಕರಿಸಿ ಬುಧವಾರದವರೆಗೂ ಪೊಲೀಸರ ವಶಕ್ಕೆ ನೀಡಲಾಗಿದೆ. 
ಜಾಮೀನು ನೀಡುವಂತೆ ಪತ್ರಕರ್ತರ ಪರವಾಗಿ ವಕೀಲರಾದ ದಾವಣಗೆರೆಯ ಅನೀಫ್ ಪಾಷಾ, ಮಂಡ್ಯದ ಅನ್ಸದ್ ಪಾಳ್ಯ, ಕೊಪ್ಪಳದ ಅಸೀಫ್ ಅಲಿ, ಬಳ್ಳಾರಿಯ ಕೋಟೇಶ್ವರ ರಾವ್, ಶ್ರೀನಿವಾಸಕುಮಾರ, ಹಷಮೂದ್ದೀನ್, ಹುಸೇನಪ್ಪ ಹಂಚಿನಾಳ, ಗೌಸ್ ಪೀರ್‌ಸಾಬ ಸೇರಿದಂತೆ ಇತತರು ಮನವಿ ಮಾಡಿಕೊಂಡಿದ್ದರು. 

ಪ್ರತಿಭಟನೆಗೆ ಸಿದ್ಧತೆ ಗಂಗಾವತಿ: 

ಆನೆಗೊಂದಿ ಉತ್ಸವದಲ್ಲಿ ಸಾಹಿತಿ, ಪತ್ರಕರ್ತ ಶಿರಾಜ್ ಬಿಸರಳ್ಳಿಯವರು ಕವನ ವಾಚನ ಮಾಡಿದ್ದನ್ನು ವಿರೋಧಿಸಿ ಆರ್‌ಆರ್‌ಎಸ್ ಕಾರ್ಯಕರ್ತನೊಬ್ಬ ಜ. 14ರಂದು ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಗ್ರಾಮೀಣ ಠಾಣೆಯ ಪೊಲೀಸರು ಪೂರ್ವಗ್ರಹ ಪೀಡಿತರಾಗಿ ಕೆಲವರ ಒತ್ತಡಕ್ಕೆ ಮಣಿದು ನ್ಯಾಯಾಲಯಕ್ಕೆ ಪ್ರಕರಣದ ಸಿಡಿಯನ್ನು ನೀಡದೆ ಇರುವುದು ಜಾಮೀನು ಮಂಜೂರು ಆಗದಿರುವುದಕ್ಕೆ ಕಾರಣವಾಗಿದೆ ಎಂದು ಸಿಪಿಎಂಎಲ್ ಮುಖಂಡ ಜೆ. ಭಾರದ್ವಾಜ್ ದೂರಿದ್ದಾರೆ. 

ಈ ಕುರಿತು ಪ್ರಕಟಣೆ ನೀಡಿರುವ ಅವರು ಪೊಲೀಸರು ಆರೋಪಿಗಳನ್ನು ಎರಡು ದಿನ ತಮ್ಮ ವಶಕ್ಕೆ ಕೊಡಬೇಕೆಂದು ಅರ್ಜಿ ಸಲ್ಲಿಸಿ ವಾದಿಸಿದರು. ಆರೋಪಿಗಳ ಪರವಾಗಿ ಸುಮಾರು 40 ವಕೀಲರು ವಾದ ಮಂಡಿಸಿದರು. ನ್ಯಾಯಾಲಯ ಜಾಮೀನು ನೀಡದೇ ಆರೋಪಿಗಳನ್ನು ಪೊಲೀಸರ ವಶಕ್ಕೆ ಪಡೆದಿರುವುದು ಸಾಹಿತಿಗಳಿಗೆ ಆದ ಅವಮಾನವಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ. 

ಸಾಮಾನ್ಯವಾಗಿ ಹತ್ಯೆ, ಡಕಾಯಿತಿ, ಕಳುವಿನ ಕೇಸುಗಳಲ್ಲಿ ಆರೋಪಿಗಳನ್ನು ವಶಪಡೆದುಕೊಂಡು ವಿಚಾರಣೆ ನಡೆಸುವುದು ಸಹಜ. ಆದರೆ, ಸಾಹಿತಿಗಳನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ವಿಚಾರಣೆ ಮಾಡುತ್ತಿರುವುದು ದೊಡ್ಡ ದುರಂತವಾಗಿದೆ ಎಂದು ತಿಳಿಸಿದ್ದಾರೆ. 

ಭಾರತ ಸರ್ಕಾರದ ಫ್ಯಾಸಿಸಂ ನಡೆಯ ಮೊದಲ ಹೆಜ್ಜೆಗಳಾಗಿವೆ. ಪ್ರಗತಿಪರರು, ಸಾಹಿತಿಗಳು ಬುಧವಾರ ಗಂಗಾವತಿ ನ್ಯಾಯಾಲಯದ ಹತ್ತಿರ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಸಾಹಿತಿ ಶಿರಾಜ್ ಬಿಸರಳ್ಳಿಯವರನ್ನು ಬೆಂಬಲಿಸಬೇಕು. ಮನುವಾದಿ ಬಿಜೆಪಿ ಸರ್ಕಾರದ ಫ್ಯಾಸಿಸ್ಟ್ ನಡೆಯನ್ನು ವಿರೋಧಿಸಿ ಹೈದ್ರಾಬಾದ್-ಕರ್ನಾಟಕದಾದ್ಯಂತ ಪ್ರತಿಭಟನೆಗೆ ಸಿದ್ಧತೆ ಕೈಗೊಳ್ಳಬೇಕೆಂದು ಭಾರದ್ವಾಜ್ ಪ್ರಗತಿಪರರಲ್ಲಿ ಮನವಿ ಮಾಡಿದ್ದಾರೆ.
 

PREV
click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!