ಒಬ್ಬರು ಡಿಎಚ್ಓ ಕಚೇರಿಯಲ್ಲಿ ಕೆಲಸ ಮಾಡಿದರೆ, ಮತ್ತೊಬ್ಬರು ಡಿಎಚ್ಓ ಕಚೇರಿ ಹೊರಗೆ ಕೆಲಸ ಮಾಡುತ್ತಿದ್ದಾರೆ.
ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ(ನ.06): ಧಾರವಾಡ ಜಿಲ್ಲೆಗೆ ಇದೀಗ ಎರಡು ಡಿಎಚ್ಓಗಳ ಭಾಗ್ಯ ಒದಗಿ ಬಂದಿರುವ ಘಟನೆ ನಡೆದಿದೆ . ಒಬ್ಬರು ಡಿಎಚ್ಓ ಕಚೇರಿಯಲ್ಲಿ ಕೆಲಸ ಮಾಡಿದರೆ, ಮತ್ತೊಬ್ಬರು ಡಿಎಚ್ಓ ಕಚೇರಿ ಹೊರಗೆ ಕೆಲಸ ಮಾಡುತ್ತಿದ್ದಾರೆ. ಹಾಗಂತ ಸರ್ಕಾರ ಇಬ್ಬರನ್ನು ನಿಯೋಜನೆಗೊಳಿಸಿದೆ ಅಂತಾ ಅಲ್ಲ. ಬದಲಿಗೆ ಅವಧಿಗೂ ಮುನ್ನ ಓರ್ವ ಡಿಎಚ್ಓ ಬಸನಗೌಡ ಕರಿಗೌಡರನ್ನು ಇಲಾಖೆ ವರ್ಗಾವಣೆ ಮಾಡಿದ್ದರು. ಈ ಕಾರಣಗಳಿಗೆ ಕಾರಣವಾಗಿದೆ ಎಂಬುದು ಸ್ಥಳೀಯ ವಲಯದಲ್ಲಿ ಮಾತು ಕೇಳಿ ಬರುತ್ತಿದೆ.
ಧಾರವಾಡ ಡಿಎಚ್ಓ ಕಚೇರಿಯಲ್ಲಿ ಡಾ. ಬಸವನಗೌಡ ಕರಿಗೌಡರ್. ಇವರು ಕೆಲ ತಿಂಗಳ ಹಿಂದಷ್ಟೇ ಗದಗ ಜಿಲ್ಲೆಯಿಂದ ಧಾರವಾಡ ಜಿಲ್ಲೆಗೆ ವರ್ಗವಾಗಿ ಬಂದಿದ್ದ ಜಿಲ್ಲಾ ಆರೋಗ್ಯಾಧಿಕಾರಿ. ವರ್ಗವಾಗಿ ಬಂದು ಒಂದು ವರ್ಷದೊಳಗೆ ರಾಜ್ಯ ಸರ್ಕಾರ ಇವರನ್ನ ವರ್ಗಾವಣೆ ಮಾಡಿ ಆದೇಶಿಸಿತು. ಇವರ ಜಾಗಕ್ಕೆ ಡಾ. ಶಶಿ ಪಾಟೀಲ್ ಅವರನ್ನು ವರ್ಗ ಮಾಡಿತು. ಆದರೆ ಸರ್ಕಾರದ ನಿಯಮಗಳ ಪ್ರಕಾರ ಒಂದು ವರ್ಷದೊಳಗೆ ಯಾವುದೇ ಅಧಿಕಾರಿಯನ್ನು ವರ್ಗ ಮಾಡುವಂತಿಲ್ಲ. ಆದರೆ ಸರ್ಕಾರ ಒಂದು ವರ್ಷದೊಳಗೆ ತಮ್ಮ ವರ್ಗಾವಣೆ ಮಾಡಿದ್ದರಿಂದ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಕೆಎಟಿ ಮೊರೆ ಹೋದರು. ಇದೀಗ ಕೆಎಟಿಯಲ್ಲಿ ಇವರ ಪರವಾಗಿ ಆದೇಶ ಬಂದಿದ್ದು, ಇವರನ್ನು ಮರುನಿಯೋಜನೆ ಮಾಡುವಂತೆ ಸರ್ಕಾರಕ್ಕೆ ಆದೇಶ ನೀಡಿದೆ ಎಂದು ಕರಿಗೌಡರ್ ಅವರು ನಿನ್ನೆ(ಶನಿವಾರ) ಮತ್ತೆ ಅಧಿಕಾರ ವಹಿಸಿಕೊಂಡಿದ್ದಾರೆ.
ಧಾರವಾಡ: ರೊಟ್ಟಿಗವಾಡ ಹೋರಾಟಕ್ಕೆ ಸಿಕ್ಕ ಜಯ, ಪಿಡಿಒಗಳಿಂದ 23 ಲಕ್ಷ ವಸೂಲಿಗೆ ಜಿ.ಪಂ. ಸಿಇಒ ಆದೇಶ
ಇತ್ತ ಕೋರ್ಟ್ ಆದೇಶದ ಪ್ರತಿಯೊಂದಿಗೆ ಬಂದ ಡಾ. ಕರಿಗೌಡರ್ ನೇರವಾಗಿ ಬಂದು ಡಿಎಚ್ಒ ಕಚೇರಿ ಬಳಿ ಇದ್ದ ಡಾ. ಶಶಿ ಪಾಟೀಲ್ ಅವರ ಬೋರ್ಡ್ ತೆಗೆಯಿಸಿ, ತಾವು ಚಾರ್ಜ್ ತೆಗೆದುಕೊಂಡಿದ್ದಾರೆ. ಇದೀಗ ಡಿಎಚ್ಒ ಕಚೇರಿಯಲ್ಲಿಯೇ ಕುಳಿತು ಕೆಲಸ ಶುರು ಮಾಡಿದ್ದಾರೆ. ಆದರೆ ಡಾ. ಕರಿಗೌಡರ್ ನೇರವಾಗಿ ಬಂದು ಇಲ್ಲಿ ಕೆಲಸ ಮಾಡಲು ಬರೋದಿಲ್ಲ ಅನ್ನೋದು ಡಾ. ಶಶಿ ಪಾಟೀಲ್ ಅವರ ವಾದವಾಗಿದೆ.
ಏಕೆಂದರೆ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಆದೇಶವನ್ನು ಮಾರ್ಪಾಡು ಮಾಡಬೇಕು. ಆ ಆದೇಶದ ಪ್ರತಿಯೊಂದಿಗೆ ಬಂದು ಅವರು ಕೆಲಸಕ್ಕೆ ಹಾಜರಾಗಬೇಕು ಅನ್ನೋದು ಡಾ. ಶಶಿ ಪಾಟೀಲ್ ಅವರ ವಾದ. ಇದೇ ಕಾರಣಕ್ಕೆ ಇದೀಗ ಅವರು ಜಿಲ್ಲಾಡಳಿತದ ವಿವಿಧ ಸಭೆಗಳಿಗೆ ಡಾ. ಶಶಿ ಪಾಟೀಲ್ ಹಾಜರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಚೇರಿಯಲ್ಲಿ ಕುಳಿತು ಡಿಎಚ್ಒ ಕೆಲಸವನ್ನು ಡಾ. ಕರಿಗೌಡರ್ ನಿರ್ವಹಿಸುತ್ತಿದ್ದರೆ, ಕಚೇರಿಯ ಹೊರಗಿನ ಕೆಲಸಗಳನ್ನು ಡಾ. ಶಶಿ ಪಾಟೀಲ್ ನಿರ್ವಹಿಸುತ್ತಿದ್ದಾರೆ.
ಇನ್ನು ಈ ಬಗ್ಗೆ ಜಿಲ್ಲಾ ಪಂಚಾಯತ್ ಸಿಇಒ ಡಾ. ಸುರೇಶ ಇಟ್ನಾಳ್ ಅವರನ್ನು ಕೇಳಿದರೆ, ಈ ಬಗ್ಗೆ ಡಾ. ಕರಿಗೌಡರ್ ನನ್ನೊಂದಿಗೆ ಮಾತನಾಡಿದ್ದಾರೆ. ಕೋರ್ಟ್ ಆದೇಶದ ಪ್ರತಿ ಬಂದ ಬಳಿಕ ಮುಂದಿನ ನಿರ್ಧಾರವನ್ನು ಮಾಡಲಾಗುವುದು ಅಂತಾ ಹೇಳಿದ್ದರು. ಆದರೆ ಇಲಾಖೆ ನೋಡಿಕೊಳ್ಳುತ್ತೆ ಎಂದು ಸುರೇಶ ಇಟ್ನಾಳ್ ಹೇಳಿದ್ದಾರೆ ಸದ್ಯ ಡಾ.ಶಶಿ ಪಾಟೀಲ ಅವರು ಮುಂದುವರೆಯಬೇಕು ಎಂದು ಸಿಇಓ ಸುರೇಶ ಇಟ್ನಾಳ್ ಆದೇಶವನ್ನ ಹೊರಡಿಸಿದ್ದಾರೆ.
ಧಾರವಾಡ: ಕೇಸ್ ದಾಖಲಿಸಿಕೊಳ್ಳದಿದ್ದರೆ ಅಧಿಕಾರಿಯೇ ಸಸ್ಪೆಂಡ್, ಎಸ್ಪಿ ಜಗಲಾಸರ್ ಖಡಕ್ ವಾರ್ನಿಂಗ್..!
ಇದೀಗ ಜಿಲ್ಲೆಯಲ್ಲಿ ಈ ಇಬ್ಬರು ಅಧಿಕಾರಿಗಳ ಬಗ್ಗೆಯೇ ಚರ್ಚೆ ಶುರುವಾಗಿದೆ. ಒಂದು ಕಡೆ ವರ್ಷವಾಗೋದಕ್ಕಿಂತ ಮುಂಚೆಯೇ ಅಧಿಕಾರಿಯನ್ನು ವರ್ಗ ಮಾಡಿದ ಇಲಾಖೆ ವಿರುದ್ಧ ಜನರು ಮಾತನಾಡುತ್ತಿದ್ದರೆ, ಮತ್ತೊಂದು ಕಡೆ ಕುರ್ಚಿಗಾಗಿ ಹೊಡೆದಾಡುತ್ತಿರೋ ಅಧಿಕಾರಿಗಳ ಬಗ್ಗೆ ನಡೆದಿರೋ ಚರ್ಚೆ ಮತ್ತೊಂದು ಕಡೆ.
ಒಟ್ಟಿನಲ್ಲಿ ಈ ತಿಕ್ಕಾಟ ಎಲ್ಲಿಗೆ ಬಂದು ನಿಲ್ಲುತ್ತೆ ಅನ್ನೋದನ್ನು ಕಾದು ನೋಡಬೇಕಿದೆ ಮತ್ತು ಸದ್ಯ ಜಲ್ಲಾ ಪಂಚಾಯತಿ ಸಿಇಓ ಸುರೇಶ ಇಟ್ನಾಳ್ ಅವರು ಡಾ.ಶಶಿ ಪಾಟೀಲ ಅವರು ಡಿಎಚ್ಓ ಆಗಿ ಮುಂದುವರಿಯಲಿದ್ದಾರೆ ಅಂತ ಆದೇಶವನ್ನ ಹೊರಡಿಸಿದ್ದಾರೆ.