ಲಕ್ಷ್ಮೇಶ್ವರ ಪಟ್ಟಣದ ಸೋಮೇಶ್ವರ ದೇವಸ್ಥಾನದ ಹತ್ತಿರದ ಬಿಎಂಟಿಸಿ ನಿರ್ವಾಹಕನಿಗೆ ಹಾಗೂ ತಾಲೂಕಿನ ಬಾಲೆಹೊಸೂರ ಗ್ರಾಮದ ಪಶು ಚಿಕಿತ್ಸಾಲಯದಲ್ಲಿ ಸಹಾಯಕನಾಗಿ ಸೇವೆ ಸಲ್ಲಿಸುತ್ತಿದ್ದ ಯುವಕನಿಗೆ ಕೊರೋನಾ ಸೋಂಕು|ಸೋಂಕಿತರಿಗೆ ಗದಗ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ|
ಲಕ್ಷ್ಮೇಶ್ವರ(ಜೂ.28): ಡೆಡ್ಲಿ ಕೊರೋನಾ ಸೋಂಕು ತಾಲೂಕಿನ ಇಬ್ಬರಿಗೆ ಆವರಿಸಿರುವುದು ಲಕ್ಷ್ಮೇಶ್ವರ ತಾಲೂಕಿನ ಜನತೆಯಲ್ಲಿ ಆತಂಕ ಹುಟ್ಟುವಂತೆ ಮಾಡಿದ್ದಲ್ಲದೆ ಗ್ರಾಮೀಣ ಭಾಗಕ್ಕೂ ತನ್ನ ಬಾಹುಗಳನ್ನು ಚಾಚುವ ಮೂಲಕ ಜನರಲ್ಲಿ ಭೀತಿ ಹುಟ್ಟುವಂತೆ ಮಾಡಿದೆ.
ಪಟ್ಟಣದ ಸೋಮೇಶ್ವರ ದೇವಸ್ಥಾನದ ಹತ್ತಿರದ ಬಿಎಂಟಿಸಿ ನಿರ್ವಾಹಕನಿಗೆ ಹಾಗೂ ತಾಲೂಕಿನ ಬಾಲೆಹೊಸೂರ ಗ್ರಾಮದ ಪಶು ಚಿಕಿತ್ಸಾಲಯದಲ್ಲಿ ಸಹಾಯಕನಾಗಿ ಸೇವೆ ಸಲ್ಲಿಸುತ್ತಿದ್ದ ಯುವಕನಿಗೆ ಕೊರೋನಾ ಸೋಂಕು ತಗಲಿರುವುದು ಶನಿವಾರ ದೃಢಪಟ್ಟಿದ್ದು, ಸೋಂಕಿತರನ್ನು ಗದಗ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದು ತಾಲೂಕು ದಂಡಾಧಿಕಾರಿ ಭ್ರಮರಾಂಬ ಗುಬ್ಬಿಶೆಟ್ಟಿ ತಿಳಿಸಿದ್ದಾರೆ.
ಪಟ್ಟಣದ ಸೋಮೇಶ್ವರ ದೇವಸ್ಥಾನದ ಹತ್ತಿರದ ಓಣಿಯ ನಿವಾಸಿಯಾಗಿರುವ ಯುವಕನು ಬಿಎಂಟಿಸಿ ನಿರ್ವಾಹಕನಾಗಿ ಸೇವೆ ಸಲ್ಲಿಸುತ್ತಿದ್ದು, ಕಳೆದ 8-10 ದಿನಗಳ ಹಿಂದೆ ಪಟ್ಟಣಕ್ಕೆ ಆಗಮಿಸಿದ್ದು ಜ್ವರ ಹಾಗೂ ಕೆಮ್ಮು ಇದ್ದ ಕಾರಣ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಹೋದಾಗ ಸೋಂಕು ಇರುವುದು ದೃಢಪಟ್ಟಿದೆ.
ಗದಗನಲ್ಲಿ ಕೋರೋನಾ ವೈರಸ್‌ಗೆ ಮೂರನೇ ಬಲಿ: 24 ಹೊಸ ಪ್ರಕರಣ
ಪಟ್ಟಣದ ಸೋಮೇಶ್ವರ ದೇವಸ್ಥಾನದ ಅಕ್ಕ ಪಕ್ಕದ ಓಣಿಯ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ತಾಲೂಕು ಆಡಳಿತ ಹಾಗೂ ಪುರಸಭೆ ಅಧಿಕಾರಿಗಳು ಸೀಲ್‌ಡೌನ್ ಮಾಡಿ ಓಣಿಯ ಜನರಿಗೆ ಅನಾವಶ್ಯಕವಾಗಿ ಮನೆಯಿಂದ ಹೊರಗೆ ಓಡಾಡದಂತೆ ಸೂಚನೆ ನೀಡಿ ಓಣಿಯಲ್ಲಿ ಪುರಸಭೆಯ ಸಿಬ್ಬಂದಿಗಳು ಔಷಧಿ ಸಿಂಪರಣೆ ಮಾಡಿದ್ದಾರೆ. ಅಲ್ಲದೆ ಬಾಲೆಹೊಸೂರಿನ ಗ್ರಾಮದ ಯುವಕನಿಗೆ ಸೋಂಕು ದೃಢಪಟ್ಟಿರುವ ಹಿನ್ನಲೆಯಲ್ಲಿ ಗ್ರಾಮದ ಪಶು ಚಿಕಿತ್ಸಾಲಯಕ್ಕೆ ಸ್ಯಾನಿಟೈಜರ್ ಮಾಡಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಆರ್.ಎಂ. ಪಾಟೀಲ, ವೈದ್ಯಾಧಿಕಾರಿ ಡಾ. ಗಿರೀಶ ಮರೆಡ್ಡಿ. ಪಿಎಸ್‌ಐ ಶಿವಯೋಗಿ ಲೋಹಾರ, ಬಸವಣ್ಣೆಪ್ಪ ನಂದೆಣ್ಣವರ, ಮಂಜುನಾಥ ಮುದಗಲ್ಲ, ಕಂದಾಯ ನಿರೀಕ್ಷಕ ಎಸ್.ಎಸ್. ಪಾಟೀಲ ಇದ್ದರು.