ಗದಗ ಜಿಲ್ಲೆಯಲ್ಲಿ ಒಂದೇ ದಿನ 24 ಹೊಸ ಪ್ರಕರಣ, 7 ದಿನಗಳಲ್ಲಿ 80 ಕೇಸ್ ಪತ್ತೆ| 140 ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ, 47 ಜನ ಗುಣಮುಖ|ಗದಗ ಜಿಲ್ಲೆ ಕೊರೋನಾ ಹಾಟ್‌ಸ್ಪಾಟ್ ಆಗಲಿದೆಯೇ ಎನ್ನುವ ಭಯ ಕೂಡಾ ಜಿಲ್ಲೆಯಾದ್ಯಂತ ಹೆಚ್ಚಾಗುತ್ತಿದೆ|
ಗದಗ(ಜೂ.28): ಮಹಾಮಾರಿ ಕೊರೋನಾ ವೈರಸ್ಸಿಗೆ ಜಿಲ್ಲೆಯಲ್ಲಿ ಮೂರನೇ ಬಲಿಯಾಗಿದೆ! ಜಿಲ್ಲೆಯಲ್ಲಿ ಶನಿವಾರ ಕೊರೋನಾ ಸ್ಫೋಟವಾಗಿದ್ದು, ಒಂದೇ ದಿನ ಇದುವರೆಗೂ ಅತೀ ಹೆಚ್ಚು, 24 ಜನರಿಗೆ ಸೋಂಕು ಖಚಿತವಾಗಿದೆ. 3 ಜನರು ಕೊರೋನಾ ಸಮಸ್ಯೆಯಿಂದಾಗಿ ಮೊದಲ ಬಾರಿಗೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಸೂರ್ಯಗ್ರಹಣ ನಡೆದ ಭಾನುವಾರದಿಂದ ಜಿಲ್ಲೆಗೆ ಹಿಡಿದಿರುವ ಕೊರೋನಾ ಗ್ರಹಣ ದಿನೇ ದಿನೇ ಹೆಚ್ಚುತ್ತಲೇ ಇದ್ದು, ಅದರಲ್ಲಿಯೂ ಕಳೆದ 7 ದಿನಗಳಲ್ಲಿ ಒಟ್ಟು 80 ಪ್ರಕರಣಗಳು ಪತ್ತೆಯಾಗುವ ಮೂಲಕ ಜಿಲ್ಲೆಯಾದ್ಯಂತ ಸೋಂಕು ಸಮುದಾಯಕ್ಕೆ ಹರಡಿದೆ ಎನ್ನುವುದಕ್ಕೆ ಪತ್ತೆಯಾಗುತ್ತಿರುವ ಪ್ರಕರಣಗಳೇ ಸಾಕ್ಷಿಯಾಗಿದ್ದು, ದಿನ ಕಳೆದಂತೆ ಗದಗ ಜಿಲ್ಲೆ ಕೊರೋನಾ ಹಾಟ್‌ಸ್ಪಾಟ್ ಆಗಲಿದೆಯೇ ಎನ್ನುವ ಭಯ ಕೂಡಾ ಜಿಲ್ಲೆಯಾದ್ಯಂತ ಹೆಚ್ಚಾಗುತ್ತಿದೆ.
ಗದಗನಲ್ಲಿ ಮುಂದುವರಿದ ಕೊರೋನಾ ಅಟ್ಟಹಾಸ: ಆತಂಕದಲ್ಲಿ ಜನತೆ
ಕೊರೋನಾಕ್ಕೆ ವೃದ್ಧೆ ಸಾವು:
ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನಿಡಗುಂಡಿಕೊಪ್ಪದ 95 ವರ್ಷದ ವೃದ್ಧೆಯೋರ್ವಳು ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿ, ಗಂಟಲು ದ್ರವದ ಮಾದರಿ ಪಡೆದು ಕೊರೋನಾ ತಪಾಸಣೆಗೆ ರವಾನಿಸಿದ್ದು, ವರದಿ ಬರುವ ಪೂರ್ವದಲ್ಲಿಯೇ ವೃದ್ಧೆ (ಜಿಡಿಜಿ-124) ಪಿ-11231 ಸಾವನ್ನಪ್ಪಿದ್ದು ಜಿಲ್ಲೆಯಲ್ಲಿ ಕೊರೋನಾದಿಂದ ಸಾವನ್ನಪ್ಪಿದ ಮೂರನೇ ಪ್ರಕರಣವಾಗಿದೆ. ವೃದ್ಧೆಗೆ ಬೆಂಗಳೂರು ಪ್ರಯಾಣದಿಂದ ಸೋಂಕು ತಗಲಿದೆ ಎನ್ನಲಾಗಿದ್ದು, ವೃದ್ಧೆಯ ಪ್ರಾಥಮಿಕ, ದ್ವಿತೀಯ ಸಂಪರ್ಕಕ್ಕಾಗಿ ಆರೋಗ್ಯ ಇಲಾಖೆ ಪರಿಶೀಲನೆ ನಡೆಸುತ್ತಿದೆ.