ಬೆಳಗಾವಿ: ರೈಲಿಗೆ ಸಿಕ್ಕು ಎರಡು ಕಾಡುಕೋಣಗಳ ಸಾವು

By Kannadaprabha NewsFirst Published Mar 11, 2020, 10:27 AM IST
Highlights

ಬೆಳಗಾವಿ ಲೋಂಡಾ ಮಾರ್ಗದ ಶೇಡೆಗಾಳಿ ಬಳಿ ಘಟನೆ | 15 ದಿನಗಳಲ್ಲಿ ಮೂರು ಕಾಡುಕೋಣಗಳ ಸಾವು| ಆಹಾರ ಸೇವಿಸುತ್ತಿದ್ದುದೇ ಘಟನೆಗೆ ಕಾರಣ| 

ಖಾನಾಪುರ(ಮಾ.11): ಪಟ್ಟಣದ ರೈಲು ನಿಲ್ದಾಣದಿಂದ 2 ಕಿಮೀ ಅಂತರದಲ್ಲಿ ಶೇಡೆಗಾಳಿ ಗ್ರಾಮದ ಬಳಿಯ ಬೆಳಗಾವಿ-ಲೋಂಡಾ ರೈಲು ಮಾರ್ಗದಲ್ಲಿ ಚಲಿಸುತ್ತಿದ್ದ ರೈಲು ಅಪ್ಪಳಿಸಿದ ಪರಿಣಾಮ ಎರಡು ಕಾಡುಕೋಣಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ಸಂಭವಿಸಿದೆ. 

ಒಂದು 9 ವರ್ಷದ ಹೆಣ್ಣು ಮತ್ತು ಒಂದೂವರೆ ವರ್ಷದ ಗಂಡು ಕಾಡುಕೋಣಗಳು ರೈಲಿಗೆ ಅಪ್ಪಳಿಸಿ ಬಲಿಯಾಗಿವೆ. ಕಾಡುಕೋಣ ಗಳು ರೈಲ್ವೆ ಪ್ರಯಾಣಿಕರು ಹಳಿಯ ಬದಿ ಬಿಸಾಕಿದ್ದ ಆಹಾರ ಸೇವಿಸುತ್ತಿದ್ದುದೇ ಘಟನೆಗೆ ಕಾರಣವಾಗಿದೆ. 

ಬೆಳಗಾವಿ: ಆಹಾರ ಅರಸಿ ಬಂದು ರೈಲಿಗೆ ಸಿಕ್ಕಿ ಪ್ರಾಣಬಿಟ್ಟ ಕಾಡುಕೋಣ

ಇದೇ ರೀತಿಯ ಘಟನೆ ಕಳೆದ ಫೆ.24ರ ರಾತ್ರಿ ಇದೇ ರೈಲು ಮಾರ್ಗ ದಲ್ಲಿ ನಡೆದಿತ್ತು. 15 ದಿನಗಳ ಅಂತರದಲ್ಲಿ ಮೂರು ಕಾಡುಕೋಣಗಳು ರೈಲಿಗೆ ಬಲಿಯಾಗಿವೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. 
ಪಶು ಸಂಗೋಪನೆ ಇಲಾಖೆ ಯ ಸಹಾಯಕ ನಿರ್ದೇಶಕ ಡಾ.ಗುರುರಾಜ ಮನಗೂಳಿ ಹಾಗೂ ಸಿಬ್ಬಂದಿ ಕಾಡುಕೋಣಗಳ ಮೃತದೇಹದ ಮರಣೋತ್ತರ ಪರೀಕ್ಷೆ ಕೈಗೊಂಡಿದ್ದಾರೆ. ಬಳಿಕ ಶೇಡೆಗಾಳಿ ಅರಣ್ಯದಲ್ಲಿ ಇಲಾಖೆಯ ನಿಯಮಾನುಸಾರ ಎರಡೂ ಕಳೇಬರಗಳ ಅಂತ್ಯಕ್ರಿಯೆ ನಡೆಸಲಾಗಿದೆ. ಖಾನಾಪುರ ವಲಯ ಅರಣ್ಯ ಅಧಿಕಾರಿಗಳ ಕಚೇರಿಯಲ್ಲಿ ಈ ಕುರಿತು ರೈಲ್ವೆ ಇಲಾಖೆಯ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ರೈಲ್ವೆ ಪ್ರಯಾಣಿಕರು ಅರಣ್ಯ ಮಾರ್ಗದ ರೈಲು ಹಳಿಗಳ ಪಕ್ಕದಲ್ಲಿ ಆಹಾರ ಪದಾರ್ಥ ಎಸೆಯಬಾರದು. ರೈಲುಗಳು ಅರಣ್ಯ ಭಾಗದಲ್ಲಿ ನಿಧಾನವಾಗಿ ಚಲಿಸಬೇಕು ಎಂದು ಖಾನಾಪುರ ವಲಯದ ವಲಯ ಅರಣ್ಯ ಅಧಿಕಾರಿ ಬಸವರಾಜ ವಾಳದ ಅವರು ಹೇಳಿದ್ದಾರೆ. 

ಕಿಡಕಿಯಿಂದ ಹಳಿಗಳ ಪಕ್ಕ ಎಸೆದ ತಿಂಡಿಯಿಂದ ಘಟನೆ ರೈಲು ಹಳಿಗಳ ಪಕ್ಕದಲ್ಲಿ ಬಿದ್ದಿದ್ದ ತಿಂಡಿ ಯನ್ನು ತಿನ್ನುತ್ತಿದ್ದ ಕಾಡುಕೋಣಗಳಿಗೆ ರೈಲು ಅಪ್ಪಳಿಸಿದ್ದರಿಂದ ಈ ದುರಂತ ನಡೆದಿದೆ. ಶೇಡೆಗಾಳಿ ಅರಣ್ಯ ಸರ್ವೇ ನಂ.4ರಲ್ಲಿ ಈ ಘಟನೆ ನಡೆದಿದ್ದು, ಇದುವರೆಗೂ ತಾಲೂಕಿನ ಅರಣ್ಯದಲ್ಲಿ ಹಾದುಹೋಗಿರುವ ರೈಲು ಮಾರ್ಗದಲ್ಲಿ ರೈಲು ಅಪ್ಪಳಿಸಿ ಒಂದು ಕಾಡಾನೆ, 20 ಕ್ಕೂ ಹೆಚ್ಚು ಕಾಡುಕೋಣಗಳು ಮತ್ತು ಅನೇಕ ವನ್ಯಜೀವಿಗಳು ಬಲಿಯಾಗಿರುವುದು ವನ್ಯಜೀವಿಗಳ ಸಂರಕ್ಷಣೆಯ ನಿಟ್ಟಿನಲ್ಲಿ ಆತಂಕದ ವಿಷಯ.

ರೈಲ್ವೆಯಲ್ಲಿ ಪ್ರಯಾಣಿಸುವವರು ತಾವು ತಿಂದು ಉಳಿದ ಆಹಾರ ಪದಾರ್ಥಗಳನ್ನು ಕಿಡಕಿ ಮೂಲಕ ಹಳಿಗಳ ಪಕ್ಕ ಎಸೆಯುವ ಕಾರಣ ಆಹಾರದ ವಾಸನೆ ಹಿಡಿದು ರೈಲು ಹಳಿಗಳ ಬಳಿ ವನ್ಯಜೀವಿಗಳು ಬಂದು ತಮ್ಮ ಜೀವಕ್ಕೆ ಸಂಚಕಾರ ತಂದುಕೊಳ್ಳುತ್ತಿವೆ.
 

click me!