ಬೆಂಗಳೂರು: ಕಿಲ್ಲರ್‌ ಕೆಎಸ್‌ಆರ್‌ಟಿಸಿ ಬಸ್‌ಗೆ ಇಬ್ಬರು ಬೈಕ್‌ ಸವಾರರ ಬಲಿ

By Kannadaprabha NewsFirst Published Nov 6, 2022, 12:00 PM IST
Highlights

ಬೈಕ್‌ ತಿರುವು ಪಡೆಯುವಾಗ ವೇಗವಾಗಿ ಬಂದು ಡಿಕ್ಕಿ ಹೊಡೆದ ಬಸ್‌, ಮತ್ತೊಂದು ಪ್ರಕರಣದಲ್ಲಿ ಪಕ್ಕದಲ್ಲಿ ಬಂದ ಬಸ್‌ ಗುದ್ದಿ ಅವಘಡ

ಬೆಂಗಳೂರು(ನ.06):  ನಗರದಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತ ಪ್ರಕರಣಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿಯಾಗಿ ಬಿಬಿಎಂಪಿ ನೌಕರ ಸೇರಿ ಇಬ್ಬರು ದ್ವಿಚಕ್ರ ವಾಹನ ಸವಾರರು ಮೃತಪಟ್ಟಿದ್ದಾರೆ. ಮುನಿಯಪ್ಪ ಗಾರ್ಡನ್‌ ನಿವಾಸಿ ಪಾಲಿಕೆ ನೌಕರ ಶ್ರೀಧರ್‌(50) ಮತ್ತು ರಾಜಾಜಿನಗರ ನಿವಾಸಿ ರಮೇಶ್‌ ಕುಮಾರ್‌(38) ಮೃತ ವ್ಯಕ್ತಿಗಳಾಗಿದ್ದಾರೆ.

ಶ್ರೀಧರ್‌ ಶನಿವಾರ ಮಧ್ಯಾಹ್ನ 12.45ರ ಸುಮಾರಿಗೆ ಕೆಂಪೇಗೌಡ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಪಕ್ಕದಲ್ಲೇ ಬಂದ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರಾದರೂ ಮಾರ್ಗ ಮಧ್ಯೆಯೇ ಶ್ರೀಧರ್‌ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಸಂಬಂಧ ಬಸ್‌ ಜಪ್ತಿ ಮಾಡಿ ಚಾಲಕನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಹಲಸೂರು ಗೇಟ್‌ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos

ರಸ್ತೆ ಕಾಮಗಾರಿ ಸೂಚನಾ ಫಲಕಕ್ಕೆ ಬೈಕ್‌ ಡಿಕ್ಕಿ: ಸವಾರರಿಬ್ಬರು ಸಾವು

ತಿರುವು ಪಡೆಯುವಾಗ ಡಿಕ್ಕಿ:

ಮತ್ತೊಂದು ಪ್ರಕರಣದಲ್ಲಿ ರಾಜಾಜಿ ನಗರದ ಡಾ. ರಾಜ್‌ಕುಮಾರ್‌ ರಸ್ತೆಯಲ್ಲಿ ನವರಂಗ್‌ ಬಾರ್‌ ಬಳಿ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಮೃತಪಟ್ಟಿರುವ ಘಟನೆ ನಡೆದಿದೆ.

ರಮೇಶ್‌ ಕುಮಾರ್‌ ಶನಿವಾರ ಮುಂಜಾನೆ 1.10ರ ಸುಮಾರಿಗೆ ನವರಂಗ್‌ ಸಿಗ್ನಲ್‌ ಬಳಿ ದ್ವಿಚಕ್ರ ವಾಹನ ಬಲ ತಿರುವು ಪಡೆಯುವಾಗ, ಹಿಂದಿನಿಂದ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಿದರಾದರೂ ಚಿಕಿತ್ಸೆ ಫಲಿಸದೆ ಮುಂಜಾನೆ 3.30ರ ಸುಮಾರಿಗೆ ರಮೇಶ್‌ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಸಂಬಂಧ ಬಸ್‌ ಚಾಲಕನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ರಾಜಾಜಿ ನಗರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಾಲನಾ ಸಿಬ್ಬಂದಿ ಮೇಲೆ ಮೃತ ಸ್ನೇಹಿತರ ಹಲ್ಲೆ?

ಅಪಘಾತ ಸ್ಥಳದಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಮೃತ ಸವಾರ ರಮೇಶ್‌ ಮದ್ಯಪಾನ ಮಾಡಿ ದ್ವಿಚಕ್ರ ವಾಹನ ಚಾಲನೆ ಮಾಡಿದರೆ ಅಥವಾ ಮದ್ಯದ ಬಾಟಲಿ ತೆಗೆದುಕೊಂಡು ಹೋಗುವಾಗ ಅಪಘಾತ ಸಂಭವಿಸಿದೆಯೇ ಎಂಬುದು ತನಿಖೆಯಿಂದ ಬೆಳಕಿಗೆ ಬರಬೇಕು. ಅಪಘಾತದ ವೇಳೆ ರಮೇಶ್‌ ಸ್ನೇಹಿತರು ಒಂದು ಕಾರು ಹಾಗೂ ಎರಡು ದ್ವಿಚಕ್ರ ವಾಹನದಲ್ಲಿ ಹಿಂದೆಯೇ ಬರುತ್ತಿದ್ದರು. ಬಸ್‌ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ ರಮೇಶ್‌ ಬಿದ್ದ ಕೂಡಲೇ ಈ ಸ್ನೇಹಿತರು ಬಸ್‌ನ ಚಾಲಕ ಮತ್ತು ನಿರ್ವಾಹಕನ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಚಾಲನಾ ಸಿಬ್ಬಂದಿ ರಾಜಾಜಿನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.
 

click me!