ವಿದ್ಯುತ್ ಸ್ಪರ್ಶ ಶಂಕೆ: ಎರಡು ಕರಡಿಗಳ ಸಾವು| ಹೊಸದುರ್ಗ ಅಮೃತ್ ಮಹಲ್ ಕಾವಲಿನಲ್ಲಿ ಘಟನೆ| ಮರಿಯನ್ನು ಬೆನ್ನ ಮೇಲೆ ಕೂರಿಸಿಕೊಂಡ ಸ್ಥಿತಿಯಲ್ಲೇ ಸಾವು| ಎರಡೂ ಕರಡಿಗಳಿಗೂ ಗಾಯ| ಹಲವಾರು ಅನುಮಾನಗಳಿಗೆ ಕಾರಣವಾದ ಪ್ರಕರಣ
ಹೊಸದುರ್ಗ[ಜು.12]: ಗ್ರಾಮಸ್ಥರೇ ಆಕ್ರೋಶಕ್ಕೊಳಗಾಗಿ ಚಿರತೆಯನ್ನು ಹೊಡೆದು ಸಾಯಿಸಿದ ಘಟನೆ ಮಾಸುವ ಮುನ್ನವೇ ಬೆನ್ನ ಮೇಲೆ ತನ್ನ ಮರಿಯನ್ನು ಕೂರಿಸಿಕೊಂಡು ಹೊರಟ್ಟಿದ್ದ ಸ್ಥಿತಿಯಲ್ಲೇ ಕರಡಿ ಹಾಗೂ ಅದರ ಮರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ತಾಲೂಕಿನ ಮೈಲಾರಪುರ ಅಮೃತ್‌ಮಹಲ್ ಕಾವಲಿನಲ್ಲಿ ನಡೆದಿದೆ.
ಕರಡಿ ಸಾವನ್ನಪ್ಪಿ 2 ದಿನಗಳಾಗಿದ್ದು, ಮೃತ ದೇಹ ಕೊಳೆತ ಸ್ಥಿಯಿಯಲ್ಲಿದೆ. ಅಲ್ಲದೆ, ಬಾಯಿಂದ ರಕ್ತ ಸೋರಿದ್ದು, ತನ್ನ ಬೆನ್ನ ಮೇಲೆ ಕೂರಿಸಿಕೊಂಡಿರುವ ಮರಿಯ ಬೆನ್ನಿಗೂ ಗಾಯವಾಗಿದೆ. ಕಿಡಿಗೇಡಿಗಳು ಕಾಡು ಹಂದಿ ಹಿಡಿಯಲು ಕಳ್ಳತನದಿಂದ ಹಾಕಿದ್ದ ವಿದ್ಯುತ್ ತಂತಿ ಸ್ಪರ್ಶದಿಂದ ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ.
undefined
ಕರಡಿ ಸಾವನ್ನಪ್ಪಿದ ಪ್ರದೇಶದಲ್ಲಿ 2 ಕಿಮೀ ದೂರದವರೆಗೆ ತಂತಿ ಎಳೆದ ಬಗ್ಗೆ ಕುರುಹುಗಳು ಪತ್ತೆಯಾಗಿವೆ.
ವಾರದಲ್ಲಿ 2ನೇ ಘಟನೆ:
ಕಳೆದ ಒಂದು ವಾರದಲ್ಲಿ ಇದೇ ಅಮೃತ್‌ಮಹಲ್ ಕಾವಲು ಪ್ರದೇಶದಲ್ಲಿ ಕರಡಿ ಸತ್ತಿರುವ 2 ಘಟನೆಗಳು ನಡೆದಿವೆ ಎನ್ನಲಾಗಿದೆ. ಕಳೆದ ನಾಲ್ಕೈದು ದಿನಗಳ ಹಿಂದೆ ಇಲ್ಲಿಗೆ ಸಮೀಪದ ಹೊನ್ನತ್ತಿಕಲ್ಲು ಬೆಟ್ಟದಲ್ಲಿ ಕರಡಿಯೊಂದು ಸಾವನ್ನಪ್ಪಿತ್ತು ಎನ್ನುವ ಸಂಗತಿ ಜನರಿಂದ ಬಯಲಾಗಿದೆ.
ಸಾವಿಗೆ ಯಾರು ಹೊಣೆ?
ಕಳೆದ ಒಂದು ವಾರದಲ್ಲಿ ನಡೆದಿರುವ ಒಂದು ಮರಿ ಸೇರಿ 2 ಕರಡಿ ಹಾಗೂ ಒಂದು ಚಿರತೆ ಸಾವಿಗೆ ಯಾರು ಹೊಣೆ ಎನ್ನುವ ಪ್ರಶ್ನೆ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಈ ಪ್ರದೇಶದಲ್ಲಿ ಕರಡಿ ಹಾಗೂ ಚಿರತೆ ವಾಸವಿರುವ ಸಂಗತಿ ಎಲ್ಲರಿಗೂ ಗೊತ್ತಿರುವ ವಿಚಾರ. ಇಲ್ಲಿಯವರೆಗೆ ಸುಖಾ ಸುಮ್ಮನೆ ಯಾರಿಗೂ ತೊಂದರೆ ಕೊಟ್ಟಸಂಗತಿಗಳಿಲ್ಲ . ಜನ ಅವುಗಳಿಗೆ ತೊಂದರೆ ನೀಡಿದಾಗ ಮಾತ್ರ ಅವು ಜನರ ಮೇಲೆ ದಾಳಿ ಮಾಡಿವೆ. ಆದರೂ, ಇತ್ತೀಚಿಗೆ ಕಾಡು ಪ್ರಾಣಿಗಳ ಸಾವಿನ ಪ್ರಕರಣಗಳು ಹೆಚ್ಚುತ್ತಿವೆ. ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ಯಾರ ಮೇಲೂ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.
ಕರಡಿ ಸಾವಿಗೆ ವಿದ್ಯುತ್ ಸ್ಪರ್ಶ ಕಾರಣ ಎನ್ನುವ ಶಂಕೆ ವ್ಯಕ್ತವಾಗಿರುವಂತೆಯೇ ಈ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಈ ಮಾರ್ಗದಲ್ಲೇ ಜನ ಓಡಾಡುತ್ತಾರಾದರೂ ಇಲ್ಲಿ 2ಕಿಮೀ ದೂರ ಅಕ್ರಮವಾಗಿ ವಿದ್ಯುತ್ ತಂತಿ ಎಳೆಯಲಾಗಿದೆ ಎನ್ನಲಾಗುತ್ತಿದ್ದು, ಈ ಭಾಗದಲ್ಲಿ ಕಾಡು ಹಂದಿಗಳು ಸೇರಿ ಕಾಡುಪ್ರಾಣಿಗಳು ಹೆಚ್ಚಿವೆ. ಈ ಹಿನ್ನೆಲೆಯಲ್ಲಿ ಇದು ಕಾಡು ಪ್ರಾಣಿಗಳನ್ನು ಕೊಲ್ಲುವ ವ್ಯವಸ್ಥಿತ ಸಂಚು ಎಂಬ ಅನುಮಾನವೂ ಮೂಡಲಾರಂಭಿಸಿದೆ.
ಘಟನಾ ಸ್ಥಳಕ್ಕೆ ಶ್ರೀರಾಂಪುರ ಠಾಣೆ ಎಎಸ್‌ಐ ಮಲ್ಲಯ್ಯ, ಉಪ ವಲಯ ಅರಣ್ಯಾಧಿಕಾರಿ ಯೋಗೀಶ್, ವನಪಾಲಕ ಹರೀಶ್ ಭೇಟಿ ನೀಡಿ ಪರಿಶೀಲಿಸಿದರು. ನಂತರ ಅಲ್ಲೇ ಪಶು ವೈದ್ಯರಿಂದ ಪರೀಕ್ಷೆ ನಡೆಸಿ ತಾಯಿ ಹಾಗೂ ಮರಿ ಕರಡಿಯನ್ನು ದಫನ್ ಮಾಡಲಾಯಿತು.