ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ಆಗ್ರಹಿಸಿ ಕರೆ ನೀಡಲಾಗಿದ್ದ ‘ಯಾದಗಿರಿ ಬಂದ್’ಗೆ ಭಾರಿ ಬೆಂಬಲ ವ್ಯಕ್ತವಾಗಿದೆ. ಶಾಂತಿಯುತವಾಗಿ ನಡೆದ ಬಂದ್ ಬಹುತೇಕ ಯಶಸ್ವಿಯಾಗಿದೆ.
ಯಾದಗಿರಿ (ಜು.11): ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ಆಗ್ರಹಿಸಿ, ಬುಧವಾರ ಕರೆ ನೀಡಲಾಗಿದ್ದ ‘ಯಾದಗಿರಿ ಬಂದ್’ಗೆ ಭಾರಿ ಬೆಂಬಲ ವ್ಯಕ್ತವಾಗಿ ಯಾದಗಿರಿ ಸಂಪೂರ್ಣ ಸ್ತಬ್ಧಗೊಂಡಂತಾಗಿತ್ತು.
ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ತಲ್ಲಣಗಳಿಂದಾಗಿ ‘ಬಂದ್’ ಕರೆ ಅಷ್ಟೊಂದು ಸಫಲವಾಗಲಿಕ್ಕಿಲ್ಲ ಎಂಬ ಲೆಕ್ಕಾಚಾರ ತಲೆಕೆಳಗಾಗಿದೆ. ಜಿಲ್ಲೆಯಲ್ಲಿ ಈವರೆಗೆ ನಡೆದ ವಿವಿಧ ಹೋರಾಟಗಳ ವಿಚಾರದಲ್ಲಿ ಇದು ಹೊಸದೊಂದು ಭಾಷ್ಯ ಬರೆದಂತಿತ್ತು.
ಬೆಳಿಗ್ಗೆಯಿಂದಲೇ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು. ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳೂ ಸೇರಿದಂತೆ ಸಂಚಾರ ವ್ಯವಸ್ಥೆ ಸ್ಥಗಿತಗೊಂಡಿದ್ದರೆ, ಕೆಲವೊಂದು ಶಾಲಾ ಕಾಲೇಜುಗಳು ಸ್ವಯಂ ಪ್ರೇರಣೆಯಿಂದ ‘ಬಂದ್’ಗೆ ಬೆಂಬಲ ಸೂಚಿಸಿ, ರಜೆ ಘೋಷಿಸಿದ್ದವು. ಇದೇ ಮೊದಲ ಬಾರಿಗೆ ಅನ್ನುವಂತೆ ತರಕಾರಿ ಮಾರುಕಟ್ಟೆ ಸಂಪೂರ್ಣವಾಗಿ ಮುಚ್ಚಲಾಗಿತ್ತು. ಗ್ರಾಮೀಣ ಪ್ರದೇಶದ ಬಹುತೇಕ ರೈತರಿಗೆ ಇದರ ಮುನ್ಸೂಚನೆ ನೀಡಲಾಗಿತ್ತು. ಸಾವಿರಕ್ಕೂ ಹೆಚ್ಚು ಆಟೋಗಳು ಸೇವೆ ಸ್ಥಗಿತಗೊಳಿಸಿದವು. ತುರ್ತು ಸಂದರ್ಭಗಳಿಗೆ ಬಳಕೆಗಾಗಿ ಐದಾರು ವಾಹನಗಳನ್ನು ಮೀಸಲಿಡಲಾಗಿತ್ತು. ಸಾರಿಗೆ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ದೂರದೂರಿನಿಂದ ಬಂದ ಅನೇಕರಿಗೆ ಬಂದ್ ಬಿಸಿ ತಟ್ಟಿತು.
ಕಿರಾಣಾ ವ್ಯಾಪಾರಸ್ಥರ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಚೇಂಬರ್ ಆಫ್ ಕಾಮರ್ಸ್, ಮೆಕ್ಯಾನಿಕ್ ಅಸೋಶಿಯೇಷನ್, ಹೋಟೆಲ್ ಮಾಲೀಕರ ಸಂಘ, ಸರಾಫ್ ಬಜಾರ್, ಬಟ್ಟೆ ವ್ಯಾಪಾರಿಗಳು, ತರಕಾರಿ ಮಾರುಕಟ್ಟೆ ವ್ಯಾಪಾರಿಗಳ ಸಂಘ, ಕಿರಾಣಾ ವರ್ತಕರ ಸಂಘ, ಗಂಜ್ ವ್ಯಾಪಾರಸ್ಥರ ಸಂಘ, ಆಟೋ ಯೂನಿಯನ್, ದಲಿತ ಸಂಘರ್ಷ ಸಮಿತಿ, ಬಹುಜನ ಸಮಾಜ ಪಕ್ಷ, ಶರಣ ಸಾಹಿತ್ಯ ಪರಿಷತ್ತು, ವೀರಶೈವ ವೇದಿಕೆ, ವಿವಿಧ ಸಂಘ-ಸಂಸ್ಥೆಗಳು, ಅನೇಕ ಕನ್ನಡಪರ ಸಂಘಟನೆಗಳು ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು.
ವಕೀಲರ ಸಂಘದಿಂದ ಬೆಂಬಲ:
ನ್ಯಾಯಾಲಯ ಕಾರ್ಯ ಕಲಾಪಗಳಿಂದ ದೂರ ಉಳಿದ ಯಾದಗಿರಿ ವಕೀಲರ ಸಂಘ, ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಹೋರಾಟಕ್ಕೆ ಮತ್ತಷ್ಟು ಘನತೆ ಮೂಡಿಸಿದಂತಾಗಿತ್ತು. ಹಾಗೆಯೇ, ಶಹಾಪುರ ಮತ್ತು ಸುರಪುರದಲ್ಲಿಯೂ ವಕೀಲರ ಸಂಘ ಕೋರ್ಟ್ ಕಲಾಪಗಳಿಂದ ದೂರ ಉಳಿದು ಬಂದ್ ಗೆ ಬೆಂಬಲಿಸಿತ್ತು.
ಹೋರಾಟ ಬೆಂಬಲಿಸಿ ಕಲಬುರಗಿಯಿಂದ ಆಗಮಿಸಿದ್ದ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯ ಎಂ. ಎಸ್. ಪಾಟೀಲ್ ಹಾಗೂ ಸಂಗಡಿಗರ ಉತ್ಸಾಹ ಮೆಚ್ಚುಗೆಗೆ ಪಾತ್ರವಾಯಿತು. ‘ಬಂದ್’ ಕರೆ ನೀಡಿದ್ದ ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ್, ಬದಲಾದ ರಾಜಕೀಯ ವಿದ್ಯಮಾನಗಳ ಕಾರಣದಿಂದಾಗಿ ಹೈಕಮಾಂಡ್ ಬುಲಾವ್ ಬಂದಿದ್ದರಿಂದ ಬೆಂಗಳೂರಿಗೆ ತೆರಳಿದ್ದರಾದರೂ, ಮೆಡಿಕಲ್ ಕಾಲೇಜು ಹಾಗೂ ಪ್ರತಿಭಟನೆಯ ವಿಚಾರವನ್ನು ಮಾಜಿ ಸಿಎಂ ಬಿಎಸ್ ವೈ ಅವರಿಗೆ ಮನವರಿಕೆ ಮಾಡಿ ಬಂದ್ನಲ್ಲಿ ಪಾಲ್ಗೊಳ್ಳಲು ವಾಪಸ್ಸಾಗಿದ್ದರು.
ಶಾಸಕ ವೆಂಕಟರೆಡ್ಡಿ ಮುದ್ನಾಳ್ ನೇತೃತ್ವದಲ್ಲಿ ನಗರದ ಮೈಲಾಪೂರ ಬೇಸ್‌ನಿಂದ ಆರಂಭಗೊಂಡ ಮೆರವಣಿಗೆ, ಚಕ್ಕರಕಟ್ಟಾ, ಗಾಂಧಿ ಚೌಕ್, ವೀರಶೈವ ಕಲ್ಯಾಣ ಮಂಟಪ, ಸದರ್ ದರ್ವಾಜಾ ರಸ್ತೆಯ ಮೂಲಕ ನಗರಸಭೆ ಕಚೇರಿವರೆಗೆ ಸಾವಿರಾರು ಜನರು ಸ್ವಯಂಪ್ರೇರಣೆಯಿಂದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸಿಎಂ ವಿರುದ್ಧ ಧಿಕ್ಕಾರ:
ಮೆಡಿಕಲ್ ಕಾಲೇಜು ಸ್ಥಾಪನೆ ವಿಚಾರದಲ್ಲಿ ಹಿಂದೆ ಸರಿದಿರುವ ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಕೈಬಿಡಬೇಕೆಂದು ಆಗ್ರಹಿಸಿದ ಪ್ರತಿಭಟನಾಕಾರರು, ಅವಶ್ಯಕ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಮೆಡಿಕಲ್ ಕಾಲೇಜು ಸ್ಥಾಪನೆಗೆ ಮುಂದಾಗಬೇಕೆಂದು ಆಗ್ರಹಿಸಿದರು. ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಚಂಡರಕಿಯಲ್ಲಿ ಈ ಬಗ್ಗೆ ಹೇಳಿಕೆ ನೀಡಿದ್ದ ಸಿಎಂ ಕುಮಾರಸ್ವಾಮಿ ವಿರುದ್ಧ ಧಿಕ್ಕಾರದ ಘೋಷಣೆಗ ಕೂಗಿದರು.
ಪ್ರತಿಭಟನೆಗೆ ಮಾಜಿ ಸಚಿವ, ಮಾಜಿ ಶಾಸಕರ ಸಾಥ್:
ಮಾಜಿ ಸಚಿವ ಡಾ. ಮಾಲಕರೆಡ್ಡಿ, ಶಾಸಕ ವೆಂಕಟರೆಡ್ಡಿ ಮುದ್ನಾಳ್, ಮಾಜಿ ಶಾಸಕ ಡಾ. ವೀರಬಸವಂತರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರು, ಡಾ. ಶರಣಭೂಪಾಲರೆಡ್ಡಿ, ಡಾ. ಶರಣರೆಡ್ಡಿ ಕೋಡ್ಲಾ, ಖಂಡಪ್ಪ ದಾಸನ್, ನಗರಸಭೆ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಲಲಿತಾ ಅನಪೂರ, ಮಹೇಶಗೌಡ ಮುದ್ನಾಳ್, ಶರಣಗೌಡ ಬಾಡಿಯಾಳ್, ಸುರೇಶ ಅಂಬಿಗೇರ, ಅಂಬಯ್ಯ ಶಾಬಾದಿ, ಚೆನ್ನಾರೆಡ್ಡಿ ಬಿಳ್ಹಾರ್, ವರ್ತಕರ ಸಂಘದ ವಿಶ್ವನಾಥರೆಡ್ಡಿ ಜೋಳದಡಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಸಿದ್ದಪ್ಪ ಹೊಟ್ಟಿ, ವಕೀಲರ ಸಂಘದ ಅಧ್ಯಕ್ಷ ಬಸವರಾಜ್ ಪಾಟೀಲ್ ಕ್ಯಾತನಾಳ್ ನೇತೃತ್ವದಲ್ಲಿ ಅನೇಕ ವಕೀಲರು, ಮೆಕ್ಯಾನಿಕ್ ಸಂಘದ ಪ್ರಕಾಶ್, ಹಿರಿಯ ಪತ್ರಕರ್ತ ಅಯ್ಯಣ್ಣ ಹುಂಡೇಕಾರ್, ನೂರಂದಪ್ಪ, ಎಸ್. ಪಿ. ನಾಡೇಕಾರ್ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಶರಾವತಿ ಉಳಿವಿಗೆ ನಡೆಯುತ್ತಿರುವ ಶಿವಮೊಗ್ಗ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ
ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣಶೆಟ್ಟಿ ಬಣ) ಉತ್ತರ ಕರ್ನಾಟಕ ವಲಯ ಅಧ್ಯಕ್ಷ ಡಾ. ಶರಣು ಗದ್ದುಗೆ, ವೀರ ಕನ್ನಡಿಗರ ಪ್ರತಿಷ್ಠಾನದ ಕೃಷ್ಣಮೂರ್ತಿ ಕುಲ್ಕರ್ಣಿ, ನಮ್ಮ ಕರುನಾಡು ರಕ್ಷಣಾ ವೇದಿಕೆಯ ರವಿ ಮುದ್ನಾಳ್, ಕನ್ನಡ ರಕ್ಷಣಾ ವೇದಿಕೆಯ ಚಂದ್ರಶೇಖರ್ ದಾಸನಕೇರಿ, ಕರ್ನಾಟಕ ರಣಧೀರ ಪಡೆಯ ಭಾಸ್ಕರ ಅಲ್ಲಿಪೂರ, ಡಾ. ಅಂಬೇಡ್ಕರ್ ಯುವ ಸೇನೆಯ ಅನಿಲಕುಮಾರ್, ಆಟೋ ಚಾಲಕರ ಸಂಘದ ಮಲ್ಲಿಕಾರ್ಜುನ ಸಾಂಗ್ಲಿಯಾನಾ, ಜೈ ಕರ್ನಾಟಕದ ಮಲ್ಲು ರಾಮಸಮುದ್ರ ಮುಂತಾದವರು ಕಾರ್ಯಕರ್ತರು ಹಾಗೂ ಬೆಂಬಲಿಗರೊಡನೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಆನಂದ್ ಎಂ. ಸೌದಿ